ಓಲಾ, ಉಬರ್ ರಿಕ್ಷಾ ಸೇವೆಗೆ ದರ ನಿಗದಿಗೆ ಗಡುವು ನೀಡಿದ ಹೈಕೋರ್ಟ್

Update: 2022-10-14 14:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.14: ಆ್ಯಪ್ ಆಧಾರಿತ ಓಲಾ ಮತ್ತು ಉಬರ್ ಆಟೋರಿಕ್ಷಾಗಳ (Ola and auto) ಸೇವೆ ಒದಗಿಸಲು ಮುಂದಿನ 15 ದಿನಗಳಲ್ಲಿ ಪ್ರಯಾಣ ಶುಲ್ಕ ನಿಗದಿಪಡಿಸಲು ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿದೆ. ಅಲ್ಲಿಯವರೆಗೂ ಅಗ್ರಿಗೇಟರ್ಸ್‍ಗಳ ವಿರುದ್ಧ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್ ಸರಕಾರಕ್ಕೆ ನಿರ್ದೇಶಿಸಿದೆ.  

ಆಟೋ ರಿಕ್ಷಾಗಳು ಆ್ಯಪ್ ಮೂಲಕ ಸಲ್ಲಿಸುತ್ತಿದ್ದ ಸೇವೆಯನ್ನು ಸ್ಥಗಿತಗೊಳಿಸಿದ ಸಾರಿಗೆ ಇಲಾಖೆ ಕ್ರಮವನ್ನು ಪ್ರಶ್ನಿಸಿ ಎಎನ್‍ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಸೂಚನೆ ನೀಡಿದೆ. 

2021ರ ಸಾರಿಗೆ ಇಲಾಖೆ ನಿಗದಿಪಡಿಸಿದ ದರವನ್ನು ಪಾಲಿಸಬೇಕು. 2021ರ ಜು.6ರಂದು ಸಾರಿಗೆ ಇಲಾಖೆ ಹೊರಡಿಸಿದ ಆದೇಶವನ್ನು ಪಾಲನೆ ಮಾಡಬೇಕು. ಹೆಚ್ಚುವರಿ ಸರ್ವೀಸ್ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದಿರುವ ಹೈಕೋರ್ಟ್ ನ್ಯಾಯಪೀಠ 15 ದಿನದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಸಾರಿಗೆ ಇಲಾಖೆ ಆದೇಶಕ್ಕೆ ನ.7ರವರೆಗೆ ಮಧ್ಯಂತರ ತಡೆ ನೀಡಿದೆ. ಸರಕಾರ ನಡೆಸುವ ಸಭೆಗೆ ಆಟೋ ಚಾಲಕರ ಸಂಘದ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸುವಂತೆ ಹೇಳಿದೆ.

ಕಳೆದ ವಿಚಾರಣೆ ವೇಳೆ ವಾದಿಸಿದ್ದ ಅರ್ಜಿದಾರರ ಪರ ವಕೀಲರು, ಆ್ಯಪ್ ಮೂಲಕ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಿರುವುದಕ್ಕೆ ರಾಜ್ಯ ಸರಕಾರವು ಸೂಕ್ತವಾದ ಕಾರಣಗಳನ್ನು ನೀಡಿಲ್ಲ. ದರ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಸರಕಾರವು ಇಲ್ಲಿಯವರೆಗೆ ನಿಯಮವನ್ನೂ ರೂಪಿಸಿಲ್ಲ. ಹೀಗಿರುವಾಗ ಇಷ್ಟೇ ದರ ನಿಗದಿಪಡಿಸಬೇಕು ಎಂದು ಸರಕಾರವು ಹೇಗೆ ಸೂಚಿಸುತ್ತದೆ ಎಂಬ ವಿವರವನ್ನು ಪೀಠಕ್ಕೆ ನೀಡಿದ್ದರು.  

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿ, ಆ್ಯಪ್ ಆಧಾರಿತ ಆಟೋರಿಕ್ಷಾಗಳು ಸಾರ್ವಜನಿಕರಿಂದ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿವೆ. ಸೇವೆ ಒದಗಿಸಲು ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಹೀಗಾಗಿ, ನೋಟಿಸ್ ಜಾರಿಗೊಳಿಸಿ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು. ಅರ್ಜಿದಾರರೊಂದಿಗೆ ತುರ್ತು ಸಭೆ ನಡೆಸಿ, ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿ ಕೋರ್ಟ್‍ಗೆ ಮಾಹಿತಿ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಈ ಅಂಶ ದಾಖಲಿಸಿಕೊಂಡಿದ್ದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News