ಕೋವಿಡ್ ಬೂಸ್ಟರ್ ಡೋಸ್ ಪಡೆಯುವವರೇ ಇಲ್ಲ; 10 ಕೋಟಿ ಕೋವಿಶೀಲ್ಡ್ ಡೋಸ್ ವ್ಯರ್ಥವಾಗುವ ಸಾಧ್ಯತೆ

Update: 2022-10-21 02:03 GMT
ಸಾಂದರ್ಭಿಕ ಚಿತ್ರ (PTI)

ಪುಣೆ: ಕೋವಿಶೀಲ್ಡ್ (Covishield) ಲಸಿಕೆಯ ಉತ್ಪಾದನೆಯನ್ನು ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(SII) ಕಳೆದ ಡಿಸೆಂಬರ್‍ನಲ್ಲಿ ಸ್ಥಗಿತಗೊಳಿಸಿದ್ದು, 10 ಕೋಟಿ ಲಸಿಕಾ ಡೋಸ್‍ಗಳ ದಾಸ್ತಾನು ಇದ್ದು, ಇವು ಅವಧಿ ಮೀರಿ ವ್ಯರ್ಥವಾಗುವ ಸಾಧ್ಯತೆ ಇದೆ ಎಂದು ಎಸ್‍ಐಐ ಮಾಲಕ ಹಾಗೂ ಸಿಇಓ ಅದಾರ್ ಪೂನಾವಾಲಾ (Adar Poonawalla) ಹೇಳಿದ್ದಾರೆ.

"2021ರ ಡಿಸೆಂಬರ್‍ನಿಂದ ನಾವು ಕೋವಿಶೀಲ್ಡ್ ಉತ್ಪಾದನೆ ಸ್ಥಗಿತಗೊಳಿಸಿದ್ದೇವೆ. ಬಹುಶಃ ಕೋವಿಡ್‍ನಿಂದ ಜನಕ್ಕೆ ಸಾಕಾಗಿ ಹೋಗಿದ್ದು, ಬೂಸ್ಟರ್ ಡೋಸ್‍ಗೆ ಬೇಡಿಕೆ ಬಂದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೂ ಸಾಕಾಗಿ ಹೋಗಿದೆ. ನಮಗೆಲ್ಲರಿಗೂ ಹಾಗೆಯೇ ಆಗಿದೆ" ಎಂದು ಅಭಿವೃದ್ಧಿಶೀಲ ದೇಶಗಳ ಲಸಿಕೆ ಉತ್ಪಾದಕರ ಜಾಲದ ವಾರ್ಷಿಕ ಸಾಮಾನ್ಯ ಸಭೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು. ಪುಣೆಯಲ್ಲಿ ಮೂರು ದಿನಗಳ ಸಮ್ಮೇಳನ ಗುರುವಾರ ಆರಂಭವಾಗಿದೆ.

ಎಸ್‍ಐಐ ಅಭಿವೃದ್ಧಿಪಡಿಸಿರುವ ಹೊಸ ಲಸಿಕೆ ಕೋವೊವ್ಯಾಕ್ಸ್ ಮಿಶ್ರ ಬೂಸ್ಟರ್ ಡೋಸ್‍ನ ಭಾಗವಾಗಲಿದೆ. ಇದೀಗ ಕೋವಾವ್ಯಾಕ್ಸ್ ಲಸಿಕೆಯನ್ನು ಎರಡು ವಾರಗಳಲ್ಲಿ ಪಡೆಯಲು ಅವಕಾಶ ನೀಡಬೇಕು. ಇದಲ್ಲದೇ ಜನ ಫ್ಲೂ ಲಸಿಕೆಯನ್ನು ಪ್ರತಿ ವರ್ಷ ಪಡೆಯುವಂತೆ ಅವರು ಕೋವಿಡ್ ಲಸಿಕೆಯನ್ನೂ ಪಡೆಯಬಹುದು. ಆದರೆ ವಿದೇಶಗಳಂತೆ ಭಾರತದಲ್ಲಿ ಫ್ಲೂ ಲಸಿಕೆಯನ್ನು ಪ್ರತಿ ವರ್ಷ ಪಡೆಯುವ ಸಂಸ್ಕೃತಿ ಇಲ್ಲ" ಎಂದು ಹೇಳಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್, ಹೊಸ ಸಾರ್ಸ್ ಕೋವ್-2 ಪ್ರಬೇಧ ವಿಕಾಸಗೊಳ್ಳುತ್ತಿದ್ದು, ಆರೋಗ್ಯ ಕಾರ್ಯಕರ್ತರು ಹಾಗೂ ಅಪಾಯ ಸಾಧ್ಯತೆ ಇರುವ ಎಲ್ಲ ವರ್ಗದವರೂ ಶೇಕಡ 100ರಷ್ಟು ಲಸಿಕೆ ಪಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಶೇಕಡ 75ರಷ್ಟು ಟ್ವಿಟರ್ ಸಿಬ್ಬಂದಿಗೆ ಗೇಟ್‍ಪಾಸ್ ಸಾಧ್ಯತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News