ಆಯುಷ್ಮಾನ್ ಯೋಜನೆಯಲ್ಲಿ ಅಕ್ರಮ ಆರೋಪ; ಖಾಸಗಿ ಆಸ್ಪತ್ರೆಗಳ ವಿರುದ್ಧ ತನಿಖೆ ನಡೆಸಲು ರಮೇಶ್ ಬಾಬು ಆಗ್ರಹ

Update: 2022-10-22 14:07 GMT

ಬೆಂಗಳೂರು, ಅ.22: ಕೇಂದ್ರ ಸರಕಾರದ ಆಯುಷ್ಮಾನ್ ಯೋಜನೆ ಅಡಿಯಲ್ಲಿ ಸಹಾಯಧನ ಅಥವಾ ವಿಮಾ ಯೋಜನೆಯ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ತನಿಖೆ ನಡೆಸುವಂತೆ ವಿಧಾನಪರಿಷತ್ತಿನ ಮಾಜಿ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ಯಾವುದೆ ಖಾಸಗಿ ಆಸ್ಪತ್ರೆ ಆರೋಗ್ಯ ಯೋಜನೆಗಳನ್ನು ದುರುಪಯೋಗ ಮಾಡಿಕೊಂಡಿದ್ದರೆ, ಅಂತಹ ಆಸ್ಪತ್ರೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು ಇಂತಹ ಆಸ್ಪತ್ರೆಗಳ ಆಡಳಿತ ಮಂಡಳಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಹಿತಾಸಕ್ತಿ ಇಟ್ಟುಕೊಂಡಿರುವ ಸಚಿವರ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಆಯುಷ್ಮಾನ್ ಯೋಜನೆ ಅಡಿಯಲ್ಲಿ ನೀಡುವ ಸಹಾಯಧನವನ್ನು ಕರ್ನಾಟಕದ ಹಲವಾರು ಆಸ್ಪತ್ರೆಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ದುರುಪಯೋಗ ಮಾಡಿಕೊಂಡಿರುವ ಆರೋಪಗಳಿವೆ. ಹಲವಾರು ಖಾಸಗಿ ಆಸ್ಪತ್ರೆಗಳು ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿ ತಪ್ಪು ಅಂಕಿ ಅಂಶಗಳನ್ನು ನೀಡಿ ಈ ಯೋಜನೆಯಲ್ಲಿ ಮೋಸ ಮಾಡಿರುವ ಗುರುತರ ಆರೋಪಗಳು ಇಂದಿಗೂ ಕೇಳಿಬರುತ್ತಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

ಈ ಹಿಂದೆ ರಾಜ್ಯ ಸರಕಾರದ ಯಶಸ್ವಿನಿ ಯೋಜನೆಯ ಅಡಿಯಲ್ಲಿ ನೂರಾರು ಖಾಸಗಿ ಆಸ್ಪತ್ರೆಗಳು ನೋಂದಾವಣಿ ಮಾಡಿಕೊಂಡು ರೋಗಿಗಳ ಬಳಿಯಲ್ಲಿ ಹಣ ಪಡೆದುಕೊಂಡು ನಂತರ ಸರಕಾರದಲ್ಲಿ ವಿಮಾ ಯೋಜನೆಯ ಹಣ ದುರುಪಯೋಗ ಮಾಡಿಕೊಂಡ ನಿದರ್ಶನಗಳನ್ನು ನೋಡಿದ್ದೇವೆ. ತದನಂತರ ರಾಜ್ಯ ಸರಕಾರ ಯಶಸ್ವಿನಿ ಯೋಜನೆಯನ್ನೇ ರದ್ದುಗೊಳಿಸಿತು ಎಂದು ಅವರು ಸ್ಮರಿಸಿದ್ದಾರೆ.

ಜನಸಾಮಾನ್ಯರ ಆರೋಗ್ಯದ ಕಾರಣಕ್ಕಾಗಿ ಮತ್ತು ರಾಜ್ಯ ಸರಕಾರದ ವಿಮಾ ಯೋಜನೆಯ ಜಾರಿಗಾಗಿ ಕರ್ನಾಟಕದಲ್ಲಿ ಮತ್ತೆ ಯಶಸ್ವಿನಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರ ಆರೋಗ್ಯಕ್ಕಿಂತ ಹಣ ಮಾಡಲು ಆದ್ಯತೆ ನೀಡುತ್ತಿರುವುದು ಕಳವಳಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಇಂದಿನ ದಿನ ಪತ್ರಿಕೆಯಲ್ಲಿ ಆಯುಷ್ಮಾನ್ ಯೋಜನೆಯಡಿ ದೇವನಹಳ್ಳಿಯಲ್ಲಿರುವ ಖಾಸಗಿ ಆಕಾಶ್ ಆಸ್ಪತ್ರೆಗೆ 41.57 ಕೋಟಿ ರೂ.ಗಳ ಗರಿಷ್ಟ ಮೊತ್ತ ಪಾವತಿಯಾಗಿರುವ ಬಗ್ಗೆ ವರದಿಯಾಗಿದ್ದು, ಈ ಆಸ್ಪತ್ರೆಗೆ ಪ್ರಭಾವಿ ಸಚಿವರ ನಂಟು ಇರುವುದಾಗಿ ಸುದ್ದಿಯಾಗಿದೆ. ಅಲ್ಲದೆ ಅರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ದೂರಿನ ಮೇರೆಗೆ ಈ ಆಸ್ಪತ್ರೆಗೆ ನೋಟೀಸು ನೀಡಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News