ಭಾರತದಲ್ಲಿ ರೇಡಿಯೊ ಅಲೆಗಳ ಅಬ್ಬರ

Update: 2022-10-23 08:47 GMT

ಭಾಗ - 2

ವಿಶ್ವದಾದ್ಯಂತ ರೇಡಿಯೊ ಸದ್ದು ಮಾಡಿದಂತೆ ಭಾರತದಲ್ಲೂ ಅದರ ಸದ್ದು ಕೇಳತೊಡಗಿತ್ತು. ಜೂನ್ 1923 ರಲ್ಲಿ ಬಾಂಬೆಯ ರೇಡಿಯೊ ಕ್ಲಬ್ ದೇಶದಲ್ಲಿ ಮೊದಲ ಬಾರಿಗೆ ಪ್ರಸಾರ ಮಾಡಿತು. ಇದಾದ ಐದು ತಿಂಗಳ ನಂತರ ಕೋಲ್ಕತಾ ರೇಡಿಯೊ ಕ್ಲಬ್ ಸ್ಥಾಪನೆಯಾಯಿತು. ಜುಲೈ 23, 1927ರಂದು ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ ಅಸ್ತಿತ್ವಕ್ಕೆ ಬಂದಿತು. ಆದರೆ ಕೇವಲ ಮೂರು ವರ್ಷಗಳೊಳಗೆ ಅದು ದಿವಾಳಿಯನ್ನು ಎದುರಿಸಬೇಕಾಯಿತು.

ಎಪ್ರಿಲ್ 1930ರಲ್ಲಿ ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆಯ ಅಡಿಯಲ್ಲಿ ಭಾರತೀಯ ಪ್ರಸಾರ ಸೇವೆಯು ಪ್ರಾಯೋಗಿಕ ಆಧಾರದ ಮೇಲೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಲಿಯೋನೆಲ್ ಫೀಲ್ಡನ್ ಅವರನ್ನು ಆಗಸ್ಟ್ 1935ರಲ್ಲಿ ಪ್ರಸಾರದ ಮೊದಲ ನಿಯಂತ್ರಕರಾಗಿ ನೇಮಿಸಲಾಯಿತು. ನಂತರದ ತಿಂಗಳುಗಳಲ್ಲಿ ಆಕಾಶವಾಣಿ ಮೈಸೂರು, ಖಾಸಗಿ ರೇಡಿಯೊ ಕೇಂದ್ರವನ್ನು ಸ್ಥಾಪಿಸಲಾಯಿತು. ಜೂನ್ 8, 1936ರಂದು, ಭಾರತೀಯ ರಾಜ್ಯ ಪ್ರಸಾರ ಸೇವೆಯು ಆಲ್ ಇಂಡಿಯಾ ರೇಡಿಯೊ (ಎಐಆರ್) ಆಯಿತು.

ಆಗಸ್ಟ್, 1937ರಲ್ಲಿ ಸೆಂಟ್ರಲ್ ನ್ಯೂಸ್ ಆರ್ಗನೈಸೇಶನ್ (ಸಿಎನ್‌ಒ) ಅಸ್ತಿತ್ವಕ್ಕೆ ಬಂದಿತು. ಅದೇ ವರ್ಷದಲ್ಲಿ, ಎಐಆರ್ ಸಂಪರ್ಕ ಇಲಾಖೆಯ ವ್ಯಾಪ್ತಿಗೆ ಬಂದಿತು. ನಾಲ್ಕು ವರ್ಷಗಳ ನಂತರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ಬಂದಿತು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಭಾರತದಲ್ಲಿ ದಿಲ್ಲಿ, ಬಾಂಬೆ, ಕೋಲ್ಕತಾ, ಮದ್ರಾಸ್, ತಿರುಚಿರಾಪಳ್ಳಿ ಮತ್ತು ಲಕ್ನೊದಲ್ಲಿ ಆರು ರೇಡಿಯೊ ಕೇಂದ್ರಗಳಿದ್ದವು. ಆಗ ಎಐಆರ್ ಕೇವಲ ಶೇ. 2.5 ಪ್ರದೇಶದ ಮತ್ತು ಶೇ. 11 ಜನಸಂಖ್ಯೆಯ ವ್ಯಾಪ್ತಿಯನ್ನು ಹೊಂದಿತ್ತು. ಆಗ ಒಟ್ಟು 2,75,000 ರೇಡಿಯೊ ಸೆಟ್‌ಗಳಿದ್ದವು. ಮುಂದಿನ ವರ್ಷ, ಸಿಎನ್‌ಒ ಅನ್ನು ಸುದ್ದಿ ಸೇವೆಗಳ ವಿಭಾಗ (ಎನ್‌ಎಸ್‌ಡಿ) ಮತ್ತು ಬಾಹ್ಯ ಸೇವೆಗಳ ವಿಭಾಗ (ಇಎಸ್‌ಡಿ) ಎಂದು ಎರಡು ವಿಭಾಗಗಳಾಗಿ ವಿಭಜಿಸಲಾಯಿತು. 1956ರಲ್ಲಿ ರಾಷ್ಟ್ರೀಯ ಪ್ರಸಾರಕ್ಕಾಗಿ ‘ಆಕಾಶವಾಣಿ’ ಎಂಬ ಹೆಸರನ್ನು ಅಳವಡಿಸಲಾಯಿತು. 1957ರಲ್ಲಿ ವಿವಿಧ ಭಾರತಿ ಸೇವೆ ಪ್ರಾರಂಭವಾಯಿತು. ‘ರೇಡಿಯೊ ಸಿಲೋನ್’ ಹೆಸರಿನ ವಿವಿಧ ಭಾರತಿ ಕಾರ್ಯಕ್ರಮ ಜನಪ್ರಿಯವಾಗಿತ್ತು. ಜನಪ್ರಿಯ ಚಲನಚಿತ್ರ ಸಂಗೀತ ವಿವಿಧ ಭಾರತಿಯ ಮುಖ್ಯ ಘಟಕವಾಗಿತ್ತು. 2007ರ ಅಕ್ಟೋಬರ್ 3 ರಂದು ವಿವಿಧ ಭಾರತಿ ಅದರ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿತು. ಕೇವಲ ವಿವಿಧ ಭಾರತಿ ಮಾತ್ರ ದತ್ತಾಂಶ ಆಧಾರಿತ ಹಾಡುಗಳನ್ನು ಒಳಗೊಂಡಿದೆ. ಈ ಹಾಡುಗಳು ಹಿಂದಿ ಚಲನಚಿತ್ರ ಸಂಗೀತದ ‘ಸುವರ್ಣ ಯುಗ’ವೆಂದು ಕರೆಯಲಾದ ಕಾಲಕ್ಕೆ ಸೇರಿರುವ ಅಂದರೆ 1940ರಿಂದ 1980ರ ವರೆಗಿನ ಹಾಡುಗಳನ್ನು ಹೊಂದಿದೆ. ಈ ಸೇವೆ ಎಲ್ಲಾ ಸೇವೆಗಳಿಗಿಂತ ಅತ್ಯಂತ ವಾಣಿಜ್ಯವಾಗಿದೆ. ಅಲ್ಲದೇ ಇದು ಮುಂಬೈ ಮತ್ತು ಭಾರತದ ಇತರ ನಗರಗಳಲ್ಲಿ ಜನಪ್ರಿಯವಾಗಿದೆ. ಈ ಸೇವೆ ವಾರ್ತೆ, ಚಲನಚಿತ್ರ ಸಂಗೀತ, ಹಾಸ್ಯ ಕಾರ್ಯಕ್ರಮ ಇತ್ಯಾದಿಗಳನ್ನು ಒಳಗೊಂಡಂತೆ ವಿಶಾಲ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಅವಕಾಶ ನೀಡಿದೆ. ವಿವಿಧ ಭಾರತಿ ಕೇಂದ್ರಗಳು ವಿಭಿನ್ನವಾದ MW ಬ್ಯಾಂಡ್ ಫ್ರೀಕ್ವೆನ್ಸೀಸ್ (ಆವರ್ತನಗಳ ಸಮೂಹ) ಅನ್ನು ನೀಡುತ್ತಿದೆ.

ವಿವಿಧ ಭಾರತಿ ಹಾಗೂ ಇನ್ನಿತರ ಸ್ಥಳೀಯ ಆಕಾಶವಾಣಿ ಕಾರ್ಯಕ್ರಮಗಳು ಜನಪ್ರಿಯತೆ ಪಡೆದಂತೆ ರೇಡಿಯೊ ಸೆಟ್‌ಗಳಿಗೆ ಭಾರೀ ಬೇಡಿಕೆ ಬಂದಿತು. ಬಹುತೇಕ ಜನರು ತಮ್ಮ ಕೆಲಸದ ಸ್ಥಳದಲ್ಲಿ ರೇಡಿಯೊ ಹೊಂದಲು ಹಂಬಲಿಸುತ್ತಿದ್ದರು. ಎಲ್ಲಾ ವರ್ಗದ ಜನರು ರೇಡಿಯೊ ಹೊಂದಲು ತವಕಿಸುತ್ತಿದ್ದರು. 1960 ರಿಂದ 1980ರ ಅವಧಿಯಲ್ಲಿ ರೇಡಿಯೊ ಜನಪ್ರಿಯತೆ ಎಷ್ಟಿತ್ತೆಂದರೆ ಮದುವೆಯಲ್ಲಿ ವರದಕ್ಷಿಣೆಯಾಗಿ ರೇಡಿಯೊ ಪಡೆಯುವ ಹಂತಕ್ಕೆ ಜನಪ್ರಿಯತೆ ಹೊಂದಿತ್ತು. ಕೂಲಿ ಕಾರ್ಮಿಕರೂ ತಾವಿರುವ ಸ್ಥಳದಲ್ಲಿಯೇ ಸದಾ ರೇಡಿಯೊ ಕೇಳುತ್ತಾ ಕೆಲಸ ಮಾಡುತ್ತಿದ್ದರು. ಆಗ ಇದೊಂದು ಕೆಲಸದ ನೋವನ್ನು ಮರೆಸುವ ಹಾಗೂ ಕೆಲಸಕ್ಕೆ ಹುರುಪು ಹುಮ್ಮಸ್ಸು ನೀಡುವ ಟಾನಿಕ್ ಆಗಿತ್ತು.

1959ರಲ್ಲಿ ದೂರದರ್ಶನ ಪ್ರಸಾರವನ್ನು ಎಐಆರ್‌ನ ಭಾಗವೆಂಬಂತೆ ದಿಲ್ಲಿಯಲ್ಲಿ ಪ್ರಾರಂಭಿಸಲಾಯಿತು. ಆದರೆ 1976ರ ಎಪ್ರಿಲ್ 1ರಂದು ರೇಡಿಯೊದಿಂದ ದೂರದರ್ಶನವೆಂದು ಕರೆದು ಇದನ್ನು ಪ್ರತ್ಯೇಕಿಸಲಾಯಿತು. 1977ರ ಜುಲೈ 23ರಂದು ಎಫ್.ಎಂ. ಪ್ರಸಾರವನ್ನು ಪ್ರಾರಂಭಿಸಲಾಯಿತು. ಅದನ್ನು 1990ರ ಹೊತ್ತಿಗೆ ಇನ್ನಷ್ಟು ವಿಸ್ತರಿಸಲಾಯಿತು.

ಆಲ್ ಇಂಡಿಯಾ ರೇಡಿಯೊ ಸಾಧಿಸಿದ ಅದ್ಭುತ ಬೆಳವಣಿಗೆಯು ಅದನ್ನು ವಿಶ್ವದ ಅತಿದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಒಂದನ್ನಾಗಿ ಮಾಡಿದೆ. 262 ರೇಡಿಯೊ ಕೇಂದ್ರಗಳ ಜಾಲದೊಂದಿಗೆ, ಎಐಆರ್ ಇಂದು ದೇಶದ ಬಹುತೇಕ ಸಂಪೂರ್ಣ ಜನಸಂಖ್ಯೆಗೆ ಮತ್ತು ಒಟ್ಟು ಪ್ರದೇಶದ ಸುಮಾರು ಶೇ.92ಕ್ಕೆ ಪ್ರವೇಶ ಪಡೆದಿದೆ. ಪ್ರಸಾರ ದೈತ್ಯ ಎನಿಸಿಕೊಂಡ ಎಐಆರ್ ಇಂದು ಭಾರತದಲ್ಲಿ 23 ಭಾಷೆಗಳಲ್ಲಿ ಮತ್ತು 146 ಉಪಭಾಷೆಗಳಲ್ಲಿ ಸಾಮಾಜಿಕ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ವೈವಿಧ್ಯಮಯ ಜನಸಂಖ್ಯೆಯ ವಿಶಾಲ ವ್ಯಾಪ್ತಿಯನ್ನು ಪೂರೈಸುತ್ತದೆ.

ಭಾರತವು ಕೇವಲ ಆಂತರಿಕ ಸೇವೆಯಲ್ಲದೇ ಬಾಹ್ಯ ಸೇವೆಯ ಭಾಗವಾಗಿ ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ. ಭಾರತದ ಹೊರಗಿರುವ ರಾಷ್ಟ್ರಗಳಿಗೆ 27 ಭಾಷೆಗಳಲ್ಲಿ ಆಲ್ ಇಂಡಿಯಾ ರೇಡಿಯೊ ಪ್ರಸಾರದ ಸೇವೆ ಒದಗಿಸುತ್ತದೆ. ಬಾಹ್ಯ ಸೇವಾ ವಿಭಾಗ ನೆರೆಯ ರಾಷ್ಟ್ರಗಳನ್ನು ತಲುಪಲು ಮಧ್ಯಮ ಗಾತ್ರದ ತರಂಗ (ಮೀಡಿಯಂ ವೇವ್)ವನ್ನು ಬಳಸಿದರೂ, ಪ್ರಧಾನವಾಗಿ ಅಧಿಕ ಸಾಮರ್ಥ್ಯದ ಸಣ್ಣ ತರಂಗ (ಶಾರ್ಟ್‌ವೇವ್) ಪ್ರಸಾರವನ್ನು ಬಳಸುತ್ತದೆ. ಭಾರತೀಯ ಭಾಷೆಗಳ ಮೂಲಕ ನಿರ್ದಿಷ್ಟ ರಾಷ್ಟ್ರಗಳಿಗೆ ಪ್ರಸಾರ ಸೇವೆ ನೀಡುತ್ತಿರುವುದರ ಜೊತೆಯಲ್ಲಿ ಕಡಲಾಚೆಯ(ಸಾಗರೋತ್ತರ) ಸಾರ್ವತ್ರಿಕ ಸೇವೆಯನ್ನು ಕಲ್ಪಿಸಿಕೊಟ್ಟಿದೆ. ಈ ಸೇವೆಯಲ್ಲಿ ಪ್ರತಿದಿನ 8¼ ಗಂಟೆಗಳ ಕಾಲ ಇಂಗ್ಲಿಷ್ ಭಾಷೆಯಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ. ಅಲ್ಲದೇ ಅಂತರ್‌ರಾಷ್ಟ್ರೀಯ ಸರ್ವೇಸಾಮಾನ್ಯ ಶ್ರೋತೃಗಳನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ನೀಡುತ್ತಲಿದೆ. ಬಾಹ್ಯ ಸೇವೆಗಳ ವಿಭಾಗದ ಕಾರ್ಯಕ್ರಮಗಳು 11 ಭಾರತೀಯ ಮತ್ತು 16 ವಿದೇಶಿ ಭಾಷೆಗಳಲ್ಲಿ 100ಕ್ಕೂ ಹೆಚ್ಚು ದೇಶಗಳಿಗೆ ತಲುಪುತ್ತವೆ. ಈ ಬಾಹ್ಯ ಪ್ರಸಾರಗಳು ದೇಶದ ಬೆಳವಣಿಗೆಗಳ ಬಗ್ಗೆ ಸಾಗರೋತ್ತರ ಕೇಳುಗರಿಗೆ ತಿಳಿಸಲು ಮತ್ತು ಮನರಂಜನೆಯ ಸಮೃದ್ಧ ಶುಲ್ಕವನ್ನು ಒದಗಿಸುವ ಗುರಿಯನ್ನು ಹೊಂದಿವೆ.

ಯುವಜನರು ರೇಡಿಯೊ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸಲು 1969ರ ಜುಲೈ 21ರಂದು ‘ಯುವವಾಣಿ’ ಸೇವೆ ಪ್ರಾರಂಭಿಸಲಾಯಿತು. ಯುವಜನರ ಆಶೋತ್ತರಗಳನ್ನು ಪ್ರೋತ್ಸಾಹಿಸುವ ಮೂಲಕ ಹಾಗೂ ವಿಭಿನ್ನ ಕಥಾವಸ್ತುಗಳ ವೈಚಾರಿಕತೆ ಮೇಲೆ ಪ್ರಯೋಗ ಮಾಡುವ ಮೂಲಕ ಶ್ರೇಷ್ಠ ಮಟ್ಟದ ರೇಡಿಯೊ ಅನುಭವವನ್ನು ಮೂಡಿಸಿತು. ಯುವವಾಣಿ ಕಾರ್ಯಕ್ರಮವು ಯುವಜನತೆಯಲ್ಲಿ ಹೊಸ ಸಂಚಲನವನ್ನುಂಟು ಮಾಡಿತ್ತು.

ಇಂದಿಗೂ ಸಹ ಯುವವಾಣಿ ಕಾರ್ಯಕ್ರಮಗಳಿಗೆ ಅದರದೇ ಆದ ಶಾಶ್ವತ ಸ್ಥಾನ ಉಳಿದಿದೆ. ಭಾರತದ ಸಮೂಹ ಮಾಧ್ಯಮದಲ್ಲಿರುವ ಕೆಲವು ಪ್ರಖ್ಯಾತ ವ್ಯಕ್ತಿಗಳು ಯುವವಾಣಿಯೊಂದಿಗೆ ತಮ್ಮ ವೃತ್ತಿಜೀವನದ ಪಯಣವನ್ನು ಪ್ರಾರಂಭಿಸಿರುವುದು ಗಮನಾರ್ಹ. ಪ್ರಖ್ಯಾತ ಸಾಕ್ಷ್ಯಚಿತ್ರ ತಯಾರಕ ಪ್ರಫುಲ್ ಥಕ್ಕರ್, ಅವರ ಯುವವಾಣಿ ಕಾರ್ಯಕ್ರಮ ಕಾಲೇಜು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಕಲಿಸುವ ತಾಜಾಗಾಳಿಯ ಉಸಿರಿನಂತೆ ದೇಶವ್ಯಾಪಿ ವ್ಯಾಪಿಸಿತ್ತು. ಇದು ಯುವಕರಿಗೆ ಅತ್ಯಂತ ಅದ್ಭುತ ಕಲಿಕೆಯ ಅನುಭವವಾಗಿತ್ತು. ಅದಲ್ಲದೆ ರೇಡಿಯೊ ಕೇವಲ ಅವಿವೇಕದ ಉಲ್ಲೇಖಗಳು ಮಾತ್ರವಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು.

ಆಲ್ ಇಂಡಿಯಾ ರೇಡಿಯೊದ ಸುದ್ದಿ ಸೇವೆಗಳ ವಿಭಾಗವು ಗೃಹ, ಪ್ರಾದೇಶಿಕ, ಬಾಹ್ಯ ಮತ್ತು ಡಿಟಿಎಚ್ ಸೇವೆಗಳಲ್ಲಿ ಸುಮಾರು 90 ಭಾಷೆಗಳು/ಉಪಭಾಷೆಗಳಲ್ಲಿ ಪ್ರತಿದಿನ 647 ಬುಲೆಟಿನ್‌ಗಳನ್ನು ಪ್ರಸಾರ ಮಾಡುತ್ತದೆ. ಗಂಟೆಯ ಆಧಾರದ ಮೇಲೆ 314 ಸುದ್ದಿ ಮುಖ್ಯಾಂಶಗಳನ್ನು 41 ಎಐಆರ್ ಕೇಂದ್ರಗಳಿಂದ ಎಫ್‌ಎಂ ಮೋಡ್‌ನಲ್ಲಿ ಅಳವಡಿಸಲಾಗುತ್ತಿದೆ. ಎಐಆರ್ ಪ್ರಸಕ್ತ 18 ಎಫ್‌ಎಂ ಸ್ಟೀರಿಯೊ ಚಾನೆಲ್‌ಗಳನ್ನು ಎಐಆರ್ ಎಫ್‌ಎಂ ರೇನ್‌ಬೋ ಹೆಸರಿನ ಪ್ರಸ್ತುತಿಯ ಶೈಲಿಯಲ್ಲಿ ನಗರ ಪ್ರೇಕ್ಷಕರನ್ನು ಗುರಿಯಾಗಿಸುತ್ತದೆ. ಎಐಆರ್ ಎಫ್‌ಎಂ ಗೋಲ್ಡ್ ಎಂಬ ನಾಲ್ಕು ಎಫ್‌ಎಂ ಚಾನೆಲ್‌ಗಳು ದಿಲ್ಲಿ, ಕೋಲ್ಕತಾ, ಚೆನ್ನೈ ಮತ್ತು ಮುಂಬೈನಿಂದ ಸಂಯೋಜಿತ ಸುದ್ದಿ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ಎಫ್‌ಎಂ ತರಂಗವು ದೇಶವನ್ನು ವ್ಯಾಪಿಸುವುದರೊಂದಿಗೆ, ಪ್ರಾದೇಶಿಕ ಕೇಂದ್ರಗಳಲ್ಲಿ ಹೆಚ್ಚುವರಿ ಎಫ್‌ಎಂ ಟ್ರಾನ್ಸ್‌ಮಿಟರ್‌ಗಳೊಂದಿಗೆ ಎಐಆರ್ ತನ್ನ ಮಧ್ಯಮ ತರಂಗ ಪ್ರಸರಣವನ್ನು ಹೆಚ್ಚಿಸುತ್ತಿದೆ.

ಆಲ್ ಇಂಡಿಯಾ ರೇಡಿಯೊ ಭಾರತದ ಸಾರ್ವಜನಿಕ ಸೇವಾ ಪ್ರಸಾರಕವಾಗಿದ್ದು, ಪ್ರಸಾರ ಭಾರತಿಯ ಧ್ಯೇಯವಾಕ್ಯವಾದ ‘ಬಹುಜನ ಹಿತಾಯಃ ಬಹುಜನ ಸುಖಾಯ’ಕ್ಕೆ ಅನುಗುಣವಾಗಿ ತನ್ನ ಕೇಳುಗರಿಗೆ ವಿವಿಧ ಕಾರ್ಯಕ್ರಮಗಳನ್ನು ಕೇಳಿಸುವ ಮೂಲಕ ಶಿಕ್ಷಣ ಮತ್ತು ಮನರಂಜನೆ ಸೇವೆ ಸಲ್ಲಿಸುತ್ತಿದೆ. ಪ್ರಸಾರದ ಭಾಷೆಗಳ ಸಂಖ್ಯೆ ಮತ್ತು ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಸ್ಪೆಕ್ಟ್ರಮ್‌ಗೆ ಸಂಬಂಧಿಸಿದಂತೆ ವಿಶ್ವದ ಅತಿದೊಡ್ಡ ಪ್ರಸಾರ ಸಂಸ್ಥೆಗಳಲ್ಲಿ ಒಂದಾಗಿದೆ, ಎಐಆರ್‌ನ ಸೇವೆಯು ದೇಶಾದ್ಯಂತ ಇರುವ 470 ಬ್ರಾಡ್‌ಕಾಸ್ಟಿಂಗ್ ಕೇಂದ್ರಗಳನ್ನು ಒಳಗೊಂಡಿದ್ದು, ಇದು ಸುಮಾರು ಶೇ. 92ರಷ್ಟು ಭಾಗವನ್ನು ಒಳಗೊಂಡಿದೆ. ಪ್ರಸಕ್ತ 23 ಪ್ರಧಾನ ಭಾಷೆಗಳು ಮತ್ತು 146 ಉಪಭಾಷೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.

ಡಿಜಿಟಲ್ ಪ್ರಸರಣ ವಿಧಾನಕ್ಕೆ ಪರಿವರ್ತನೆಗಾಗಿ ಸರಕಾರದ ನಿರ್ಧಾರಕ್ಕೆ ಅನುಗುಣವಾಗಿ, ಎಐಆರ್ ಅನ್‌ಲಾಗ್‌ನಿಂದ ಡಿಜಿಟಲ್‌ಗೆ ಹಂತ ಹಂತವಾಗಿ ಬದಲಾಗುತ್ತಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ಡಿಜಿಟಲ್ ರೇಡಿಯೊ ಮೊಂಡಿಯೇಲ್ ಅಥವಾ ಡಿಆರ್‌ಎಂ. 2027ರ ವೇಳೆಗೆ ಸಂಪೂರ್ಣ ಡಿಜಿಟಲೀಕರಣದ ಗುರಿಯೊಂದಿಗೆ, ಮುಂದಿನ ದಿನಗಳಲ್ಲಿ ಕೇಳುಗರು ಹೆಚ್ಚು ವರ್ಧಿತ ಪ್ರಸರಣ ಗುಣಮಟ್ಟವನ್ನು ಎದುರುನೋಡಬಹುದು.

21ನೇ ಶತಮಾನದ ಕಂಪ್ಯೂಟರ್ ಹಾಗೂ ಡಿಜಿಟಲ್ ಯುಗದಲ್ಲಿಯೂ ರೇಡಿಯೊ ಜನಪ್ರಿಯತೆ ಹೊಂದಲು ಅದರ ಅಪರಿಮಿತ ಉಪಯುಕ್ತತೆ ಹಾಗೂ ಮನೋರಂಜನಾ ವಿಧಾನವೇ ಕಾರಣ. ಜೊತೆಗೆ ಬೇರೆ ತಂತ್ರಜ್ಞಾನಾಧಾರಿತ ವಸ್ತುಗಳಿಗೆ ಹೋಲಿಸಿದರೆ ರೇಡಿಯೊ ಕೈಗೆಟುಕುವ ಬೆಲೆಗೆ ದೊರೆಯುತ್ತದೆ. 100ರೂ.ಗೆ ರೇಡಿಯೊ ಖರೀದಿಸಿ ಅದರ ರಸಾನುಭವವನ್ನು ಅಸ್ವಾದಿಸಬಹುದು. ಇದೊಂದು ಪೋರ್ಟಬಲ್ ಸಾಧನವಾಗಿರುವುದರಿಂದ ಮನೆ, ಕಾರು, ಅಂಗಡಿ, ಕಚೇರಿ ಮತ್ತು ಇತರ ಸ್ಥಳಗಳಲ್ಲಿ ಸುಲಭವಾಗಿ ಬಳಸಬಹುದು. ಕೆಲಸ ಮಾಡುತ್ತಲೇ ರೇಡಿಯೊ ಕೇಳಲು ಅವಕಾಶ ಇರುವುದರಿಂದ ಕೆಲಸಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಹಿತಿ ಮತ್ತು ಮನರಂಜನೆಯ ಅನೇಕ ಮೂಲಗಳು ತಮ್ಮ ಸೇವೆಗಳಿಗಾಗಿ ಗ್ರಾಹಕರಿಗೆ ಶುಲ್ಕ ವಿಧಿಸುತ್ತವೆ. ಆದರೆ ರೇಡಿಯೊ ಎಲ್ಲರಿಗೂ ಉಚಿತ. ಅದರ ಉಚಿತ ಸೇವೆಗಳ ಜೊತೆಗೆ ತನ್ನ ಕೇಳುಗರಿಗೆ ಅವರು ಕೇಳಲು ಬಯಸುವ ವ್ಯಾಪಕ ಶ್ರೇಣಿಯ ವಿಷಯಗಳನ್ನು ನೀಡುತ್ತದೆ. ಟಿ.ವಿ. ಪತ್ರಿಕೆ ಹಾಗೂ ಇನ್ನಿತರ ಮಾಧ್ಯಮಗಳಿಗೆ ಹೋಲಿಸಿದರೆ ರೇಡಿಯೊದಲ್ಲಿನ ಜಾಹೀರಾತು ದರಗಳು ತುಂಬಾ ಕಡಿಮೆ. ಕಡಿಮೆ ದರದಲ್ಲಿ ವ್ಯಾಪಕ ಗ್ರಾಹಕರನ್ನು ತಲುಪುವುದರಿಂದ ಕಂಪೆನಿಗಳು ರೇಡಿಯೊ ಜಾಹೀರಾತು ನೀಡಲು ಹಾತೊರೆಯುತ್ತವೆ. ಜಗತ್ತಿನಲ್ಲಿ ಎಂತಹ ತಾಂತ್ರಿಕ ಬದಲಾವಣೆಗಳು ಅಬ್ಬರಿಸಿದರೂ ಎಲ್ಲಾ ತಾಂತ್ರಿಕ ಸಾಧನಗಳಲ್ಲಿ ರೇಡಿಯೊ ಹೊಂದಿಕೊಳ್ಳುತ್ತದೆ. ಆಧುನಿಕ ಜಗತ್ತಿನಲ್ಲಿ ಅಟ್ಟಹಾಸಗೈಯುತ್ತಿರುವ ಸ್ಮಾರ್ಟ್‌ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್‌ವಾಚ್, ಟಿ.ವಿ. ಮುಂತಾದ ತಾಂತ್ರಿಕ ಸಾಧನಗಳ ಜೊತೆ ಸುಲಭವಾಗಿ ಹೊಂದಿಕೊಂಡು ತನ್ನನ್ನು ತಾನು ಉಳಿಸಿಕೊಂಡಿದೆ.

ತಂತ್ರಜ್ಞಾನಗಳಲ್ಲಿನ ಪ್ರವೃತ್ತಿಗಳು ನಿರಂತರವಾಗಿ ಬೆಳೆಯುತ್ತಿವೆ. ಆದರೆ ರೇಡಿಯೊ ತಂತ್ರಜ್ಞಾನದೊಂದಿಗೆ ವಿಕಸನಗೊಳ್ಳುತ್ತಾ ಇನ್ನೂ ಪ್ರಚಲಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಸಮುದಾಯ ರೇಡಿಯೊ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ. ಜನರಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳಿಗಾಗಿ ಸಮುದಾಯ ರೇಡಿಯೊ ವ್ಯಾಪಕವಾಗಿ ಬೆಳೆಯುತ್ತಿವೆ. ಇಂದು ಭಾರತದಾದ್ಯಂತ 180ಕ್ಕೂ ಹೆಚ್ಚು ಸಮುದಾಯ ರೇಡಿಯೊ ಕೇಂದ್ರಗಳಿವೆ. ಕೇವಲ ರಾಷ್ಟ್ರೀಯ ಭಾಷೆಗಳಲ್ಲದೇ ಸ್ಥಳೀಯ ಭಾಷೆಯಲ್ಲಿಯೂ ಸಮುದಾಯ ರೇಡಿಯೊಗಳು ಹೆಚ್ಚು ಹೆಚ್ಚು ಜನರನ್ನು ತಲುಪುತ್ತಿವೆ. ಆರೋಗ್ಯ, ಶಿಕ್ಷಣ, ಜಾಗೃತಿ ಮುಂತಾದ ವಿಷಯಗಳನ್ನು ಜನರ ಮನೆಮನಗಳಿಗೆ ಕೊಂಡೊಯ್ಯುವಲ್ಲಿ ರೇಡಿಯೊ ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ ಇಂದಿಗೂ ಹೆಚ್ಚು ಜನಪ್ರಿಯ ಮಾಧ್ಯಮವಾಗಿ ಉಳಿದುಕೊಂಡಿದೆ. ರೇಡಿಯೊ ಪ್ರಸಾರಕ್ಕೆ 100 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಇನ್ನಷ್ಟು ಜನಮನ ತಲುಪಲಿ ಎಂಬ ಆಶಯ ನಮ್ಮದು.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News