ಪಕ್ಷದ ವಿರುದ್ಧ ಬಂಡಾಯವೆದ್ದಿರುವ ರಾಜಸ್ಥಾನದ ಕಾಂಗ್ರೆಸ್ ಶಾಸಕರಿಗೆ ಶಿಕ್ಷೆಯಾಗಬೇಕು: ಸಚಿನ್ ಪೈಲಟ್ ಆಗ್ರಹ

ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕ್ರಮ ಕೈಗೊಳ್ಳುತ್ತಾರೆಂಬ ವಿಶ್ವಾಸವಿದೆ

Update: 2022-11-02 08:24 GMT

ಜೈಪುರ: “ಪಕ್ಷದ ವಿರುದ್ಧ ಬಂಡಾಯವೆದ್ದಿರುವ ರಾಜಸ್ಥಾನದ ಕಾಂಗ್ರೆಸ್ ಶಾಸಕರಿಗೆ ಶಿಕ್ಷೆಯಾಗಬೇಕು . ರಾಜಸ್ಥಾನದ ಅನಿಶ್ಚಿತ ವಾತಾವರಣ ಕೊನೆಗೊಳಿಸಲು ಇದು ಸರಿಯಾದ ಸಮಯ" ಎಂದು ಸಚಿನ್ ಪೈಲಟ್ Sachin Pilot ಹೇಳಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ.

“ಕಾಂಗ್ರೆಸ್ ಹಳೆಯ ಪಕ್ಷವಾಗಿದ್ದು, ಎಷ್ಟೇ ಹಿರಿಯರಾಗಿದ್ದರೂ ಎಲ್ಲರಿಗೂ ಒಂದೇ ರೀತಿಯ ನಿಯಮಗಳಿವೆ. ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಪಕ್ಷದ ವೀಕ್ಷಕ ಕೆಸಿ ವೇಣುಗೋಪಾಲ್ ಅವರು "ರಾಜಸ್ಥಾನ ಪರಿಸ್ಥಿತಿ" ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನನಗೆ ತಿಳಿಸಿದ್ದಾರೆ’’ ಎಂದರು.

ನನ್ನ ಒಳಧ್ವನಿಯನ್ನು  ಕೇಳಿದ ಬಳಿಕ ನಾನು ಮಾತನಾಡುವೆ ಎಂದು ಈ ಹಿಂದೆ ಹೇಳಿದ್ದ ಪೈಲಟ್"ವೀಕ್ಷಕರು ರಾಜಸ್ಥಾನದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪಕ್ಷವು ಇದೊಂದು ಅಶಿಸ್ತು ಎಂದು ಹೇಳಿದೆ. ಮೂವರು ಶಾಸಕರಿಗೆ ನೋಟಿಸ್ ಕಳುಹಿಸಲಾಗಿದೆ. ಈಗ  ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು"ಎಂದರು.

ತಮ್ಮ ನಿಷ್ಠಾವಂತರು ತೋರಿದ ಅಶಿಸ್ತಿನ ವರ್ತನೆಗೆ  ಗೆಹ್ಲೋಟ್ ಆಗಿನ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರಲ್ಲಿ ಕ್ಷಮೆಯಾಚಿಸಿದ್ದಾರೆ ಎಂಬ ಅಂಶವನ್ನು ಪೈಲಟ್ ಗಮನ ಸೆಳೆದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗಲು ಗೆಹ್ಲೋಟ್ ರನ್ನು ಕೇಳಿಕೊಂಡಾಗ ಸಚಿನ್ ಪೈಲಟ್  ರಾಜಸ್ಥಾನ ಮುಖ್ಯಮಂತ್ರಿ ಆಗುವ  ನಿರೀಕ್ಷೆ ಇಟ್ಟುಕೊಂಡಿದ್ದರು. ಪಕ್ಷದ 'ಒಬ್ಬ ವ್ಯಕ್ತಿ-ಒಂದು ಹುದ್ದೆ' ನಿಯಮದ ಅಡಿಯಲ್ಲಿ ಅಶೋಕ್ ಗೆಹ್ಲೋಟ್‌ ಸಿಎಂ ಹುದ್ದೆ ತೊರೆಯಲು ಮುಂದಾದಾಗ ಅಶೋಕ್ ಗೆಹ್ಲೋಟ್ ಅವರ ನಿಷ್ಠಾವಂತ ಶಾಸಕರು ಒಟ್ಟಾಗಿ ಬಂಡಾಯ ಎದ್ದಿದ್ದರು. ಸೆಪ್ಟಂಬರ್ ನಲ್ಲಿ ನಡೆದಿರುವ ಈ ಬೆಳವಣಿಯನ್ನು ಪೈಲಟ್ ಈಗ ಉಲ್ಲೇಖಿಸಿದ್ದಾರೆ.

Similar News