ಎಲಾನ್ ಮಸ್ಕ್ ಬಾಸ್ ಆಗುತ್ತಿದ್ದಂತೆಯೇ ಟ್ವಿಟ್ಟರ್ ನಲ್ಲಿ ಆರಂಭವಾದ ರಾಜೀನಾಮೆ ಪರ್ವ !

Update: 2022-11-02 08:44 GMT

ಕ್ಯಾಲಿಫೋರ್ನಿಯಾ: ಇಲಾನ್ ಮಸ್ಕ್ ಅವರು ಟ್ವಿಟ್ಟರ್‍ನ ನೂತನ ಬಾಸ್ ಆದ ಬೆನ್ನಲ್ಲೇ ಸಂಸ್ಥೆಯ ಹಲವು ಉನ್ನತ ಅಧಿಕಾರಿಗಳ ರಾಜೀನಾಮೆ ಪರ್ವ ಆರಂಭವಾಗಿದೆ. ಕಳೆದ ಕೆಲ ದಿನಗಳ ಅವಧಿಯಲ್ಲಿ ಸಂಸ್ಥೆಯ ಜಾಹೀರಾತು ಹಾಗೂ ಮಾರ್ಕೆಟಿಂಗ್ ವಿಭಾಗದ ಹಲವು ಉನ್ನತಾಧಿಕಾರಿಗಳು ಹುದ್ದೆ ತೊರೆದಿದ್ದಾರೆ.

ಮಸ್ಕ್ ಅವರು ಟ್ವಿಟ್ಟರ್ ಮುಖ್ಯಸ್ಥರಾದ ಬೆನ್ನಲ್ಲೇ ಹಿಂದಿನ ಸಿಇಒ ಪರಾಗ್ ಅಗರ್ವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರಗಳ ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ ಅವರನ್ನು ಕೈಬಿಟ್ಟಿದ್ದರು.

ಇದರ ಬೆನ್ನಲ್ಲೇ ಸಂಸ್ಥೆಯ ಜಾಹೀರಾತು ವಿಭಾಗದ ಮುಖ್ಯಸ್ಥೆ ಹಾಗೂ ಮುಖ್ಯ ಗ್ರಾಹಕ ಅಧಿಕಾರಿ ಸಾರಾ ಪರ್ಸೋನೆಟ್ಟ್ ಅವರು ಕಳೆದ ವಾರ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಸಂಸ್ಥೆಯ ಮುಖ್ಯ ಪೀಪಲ್ ಎಂಡ್ ಡೈವರ್ಸಿಟಿ ಆಫೀಸರ್ ಡಲಾನಾ ಬ್ರ್ಯಾಂಡ್ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದರೆ ಕೋರ್ ಟೆಕ್ನಾಲಜೀಸ್ ವಿಭಾಗದ ಜನರಲ್ ಮ್ಯಾನೇಜರ್ ನಿಕ್ ಕಾಲ್ಡ್‍ವೆಲ್ ಕೂಡ ರಾಜೀನಾಮೆಯನ್ನು ದೃಢಪಡಿಸಿದ್ದಾರೆ.

ಇವರ ಹೊರತಾಗಿ ಮುಖ್ಯ ಮಾರುಕಟ್ಟೆ ಅಧಿಕಾರಿ ಲೆಸ್ಲೀ ಬೆರ್ಲಾಂಡ್, ಟ್ವಿಟ್ಟರ್‍ನ ಹೆಡ್ ಆಫ್ ಪ್ರೊಡಕ್ಟ್ ಜಯ್ ಸುಲ್ಲಿವನ್ ಮತ್ತು ಗ್ಲೋಬಲ್ ಸೇಲ್ಸ್ ಉಪಾಧ್ಯಕ್ಷ ಜೀನ್-ಫಿಲಿಪ್ ಮೇಹ್ಯೂ ಅವರು ಕೂಡ ರಾಜೀನಾಮೆ ನೀಡಿದ್ದಾರೆ.

Similar News