ಕರ್ನಾಟಕ ದೇಶದಲ್ಲೇ ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ರಾಜ್ಯ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Update: 2022-11-02 13:43 GMT

ಬೆಂಗಳೂರು, ನ.2: ಕರ್ನಾಟಕವು ಭವಿಷ್ಯದಲ್ಲಿ ದೇಶದಲ್ಲೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ರಾಜ್ಯವಾಗಲಿದೆ. ಕರ್ನಾಟಕದ ಜನಸಂಖ್ಯೆ ದೇಶದ ಜನಸಂಖ್ಯೆಗೆ ಹೋಲಿಸಿದರೆ ಶೇ.5ರಷ್ಟಿದೆ. ಆದರೆ, ಜಿಡಿಪಿಗೆ ಶೇ.8.8ರಷ್ಟು ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಬುಧವಾರ ನಗರದ ಅರಮನೆ ಆವರಣದಲ್ಲಿ ಆಯೋಜಿಸಿದ್ದ ‘ಇನ್ವೆಸ್ಟ್ ಕರ್ನಾಟಕ-2022 ಬಿಲ್ಡ್ ಫಾರ್ ದ ವರ್ಲ್ಟ್’ ಜಾಗತಿಕ ಹೂಡಿಕೆದಾರರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ಯಂತ್ರೋಪಕರಣಗಳ ಉತ್ಪಾದನೆ, ರಕ್ಷಣಾ, ಎಲೆಕ್ಟ್ರಿಕಲ್ ಡಿಸೈನ್ ಸೇರಿದಂತೆ ಹಲವಾರು ರಂಗಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಭವಿಷ್ಯದಲ್ಲಿ ಅತಿದೊಡ್ಡ ಉದ್ಯೋಗದಾತ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ಹೇಳಿದರು.

ಕೋವಿಡ್ ಹಾಗೂ ಯುದ್ಧ ಭೀತಿಯಿಂದಾಗಿ ಹಲವಾರು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲೂ ಪ್ರಮುಖವಾಗಿ ಪೆಟ್ರೋಲಿಯಂ ಉತ್ಪನ್ನಗಳು, ಆಹಾರ ಪದಾರ್ಥಗಳು ಸೇರಿ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವ ದೇಶಗಳು ಯುದ್ಧಭೀತಿಯಲ್ಲಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದು ಅವರು ಹೇಳಿದರು.

ಭಾರತದ ಆರ್ಥಿಕತೆಯ ಮೇಲೆ ಹೊರಗಿನ ಪರಿಸ್ಥಿತಿಗಳು ಹಾನಿ ಮಾಡದಂತೆ ಕೇಂದ್ರ ಸರಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕದಲ್ಲಿಯೂ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣವಿದ್ದು, ಹೂಡಿಕೆದಾರರ ಸ್ನೇಹಿ ಸರಕಾರವಿದೆ. ಇಲ್ಲಿನ ನೀತಿಗಳು ಬಂಡವಾಳ ಹೂಡಿಕೆಗೆ ಪ್ರೋತ್ಸಾಹದಾಯಕವಾಗಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಈ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸುಮಾರು 7 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಹೂಡಿಕೆಯಾಗುತ್ತಿದೆ. ಈಗಾಗಲೆ 2.80 ಲಕ್ಷ ಕೋಟಿ ರೂ.ಹೂಡಿಕೆಗೆ ಸಂಬಂಧಿಸಿದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅಲ್ಲದೆ, ಗ್ರೀನ್ ಎನರ್ಜಿ, ಕಲ್ಲಿದ್ದಲು, ಬಂದರುಗಳ ಅಭಿವೃದ್ಧಿಗೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ಹೇಳಿದರು.



 

Similar News