ಹಿಂದುಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ: ಇದು ಸೂಕ್ಷ್ಮವಿಷಯ, ಕಾಲಾವಕಾಶ ಬೇಕೆಂದ ಕೇಂದ್ರ ಸರಕಾರ

Update: 2022-11-02 16:43 GMT

 ಹೊಸದಿಲ್ಲಿ,ನ.2: ಹಿಂದುಗಳ ಸಂಖ್ಯೆ ಇತರರಿಗಿಂತ ಕಡಿಮೆಯಾಗಿರುವ ರಾಜ್ಯಗಳಲ್ಲಿ ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂಬ ಬೇಡಿಕೆಗಳ ಕುರಿತು ಸಮಾಲೋಚನೆಗಳನ್ನು ಪೂರ್ಣಗೊಳಿಸಲು ಕೇಂದ್ರವು ಸರ್ವೋಚ್ಚ ನ್ಯಾಯಾಲಯ(The Center is the Supreme Court)ದಿಂದ ಮತ್ತೊಮ್ಮೆ ಸಮಯಾವಕಾಶವನ್ನು ಕೋರಿದೆ. ಇದು ಸೂಕ್ಷ್ಮ ವಿಷಯವಾಗಿದೆ ಮತ್ತು ದೂರಗಾಮಿ ಪರಿಣಾಮಗಳನ್ನು ಹೊಂದಿರಲಿದೆ ಎಂದು ಅದು ನ್ಯಾಯಾಲಯಕ್ಕೆ ತಿಳಿಸಿದೆ.

ವಕೀಲ ಅಶ್ವಿನಿ ಕುಮಾರ್(Ashwini Kumar) ಉಪಾಧ್ಯಾಯ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳಿಗೆ ಉತ್ತರವಾಗಿ ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ಕೇಂದ್ರವು,ಈ ವಿಷಯದಲ್ಲಿ ತಾನು ಈವರೆಗೆ 14 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಂದ ಅಭಿಪ್ರಾಯಗಳನ್ನು ಸ್ವೀಕರಿಸಿದ್ದೇನೆ ಮತ್ತು ಶೀಘ್ರವೇ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಇತರ ರಾಜ್ಯಗಳಿಗೆ ನೆನಪಿನೋಲೆಗಳನ್ನು ಕಳುಹಿಸಿದ್ದೇನೆ ಎಂದು ತಿಳಿಸಿದೆ.

ಟಿಎಂಎ ಪೈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ 2002ರ ಮಹತ್ವದ ತೀರ್ಪನ್ನು ನೆಚ್ಚಿಕೊಂಡಿರುವ ಅರ್ಜಿದಾರರು ಸಮಾಲೋಚನೆ ಪ್ರಕ್ರಿಯೆಯ ಕಾನೂನು ಪಾವಿತ್ರದ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿಯ ತೀರ್ಪಿನ ಬಳಿಕ ಕೇಂದ್ರವು ಇನ್ನು ಮುಂದೆ ಯಾರನ್ನೂ ಅಲ್ಪಸಂಖ್ಯಾತರೆಂದು ಅಧಿಸೂಚಿಸುವಂತಿಲ್ಲ,ಹೀಗಾಗಿ ಅದು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಕಾಯ್ದೆ,1992ರ ಅಡಿಯಲ್ಲಿ ನಡೆಸುತ್ತಿರಬಹುದಾದ ಯಾವುದೇ ಚರ್ಚೆಗಳು ರಾಜ್ಯವೊಂದರಲ್ಲಿ ಯಾರಿಗೂ ಅಲ್ಪಸಂಖ್ಯಾತ ಸ್ಥಾನಮಾನವನ್ನು ದೃಢಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಟಿಎಂಎ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ವಿಧಿ 30ರ ಉದ್ದೇಶಗಳಿಗಾಗಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರನ್ನು ರಾಜ್ಯಮಟ್ಟದಲ್ಲಿ ಗುರುತಿಸಬೇಕು ಎಂದು ಹೇಳಿತ್ತು. ವಿಧಿ 30 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ಆಡಳಿತ ನಡೆಸುವ ಅಲ್ಪಸಂಖ್ಯಾತರ ಹಕ್ಕುಗಳೊಂದಿಗೆ ವ್ಯವಹರಿಸುತ್ತದೆ. ಕೇಂದ್ರವು ಎಲ್ಲ ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಹಾಗೂ ಗೃಹ ಸಚಿವಾಲಯ,ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆ,ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ,ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಮತ್ತು ಅಲ್ಪಸಂಖ್ಯಾತರ ಶಿಕ್ಞಣ ಸಂಸ್ಥೆಗಳ ರಾಷ್ಟ್ರೀಯ ಆಯೋಗದಂತಹ ಇತರ ಪಾಲುದಾರರೊಡನೆ ಸಮಾಲೋಚನಾ ಸಭೆಗಳನ್ನು ನಡೆಸಿದೆ ಎಂದು ಸೋಮವಾರ ಸಲ್ಲಿಸಲಾದ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.

Similar News