ಮೊದಲ ಬಾರಿಗೆ CRPFನಲ್ಲಿ ಇಬ್ಬರು ಮಹಿಳೆಯರಿಗೆ ಇನ್‍ಸ್ಪೆಕ್ಟರ್ ಜನರಲ್ ಶ್ರೇಣಿ

Update: 2022-11-03 03:35 GMT

ಹೊಸದಿಲ್ಲಿ: ದೇಶದ ಅರೆ ಮಿಲಿಟರಿ ಪಡೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (Central Reserve Police Force - CRPF)ಯಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಇನ್‍ಸ್ಪೆಕ್ಟರ್ ಜನರಲ್ (Inspector General -IG) ಶ್ರೇಣಿಗೆ ಬಡ್ತಿ ನೀಡಲಾಗಿದೆ.

ಐಜಿ ಹುದ್ದೆಯ CRPFನ ಒಂದು ವಲಯದ ಮುಖ್ಯ ಅಧಿಕಾರಿ ಹುದ್ದೆಯಾಗಿರುತ್ತದೆ. CRPFನಲ್ಲಿ ಮೊದಲ ಮಹಿಳಾ ಬೆಟಾಲಿಯನ್ ಅಸ್ತಿತ್ವಕ್ಕೆ ಬಂದ 35 ವರ್ಷಗಳ ಬಳಿಕ ಮಹಿಳಾ ಅಧಿಕಾರಿಗಳು ಈ ಹುದ್ದೆಗೇರಿದ್ದಾರೆ. ಉಭಯ ಅಧಿಕಾರಿಗಳು 1987ರಲ್ಲಿ ಸೇರ್ಪಡೆಯಾಗಿದ್ದರು.

CRPF ಕೇಂದ್ರ ಕಚೇರಿಯ ಆದೇಶದ ಪ್ರಕಾರ, ಆ್ಯನಿ ಅಬ್ರಹಾಂ ಅವರನ್ನು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್)ನ ಐಜಿ ಆಗಿ ನೇಮಕ ಮಾಡಲಾಗಿದ್ದರೆ, ಸೀಮಾ ಧೂಂಡಿಯಾ ಅವರನ್ನು ಬಿಹಾರ ವಲಯದ ಐಜಿ ಆಗಿ ನಿಯೋಜಿಸಲಾಗಿದೆ. ಮಹಿಳೆಯೊಬ್ಬರು ಆರ್‌ಎಎಫ್‍ನ ಮುಖ್ಯಸ್ಥರಾಗುತ್ತಿರುವುದು ಇದೇ ಮೊದಲು.

"ನಾವು 1986ರಲ್ಲಿ CRPF ಸೇರಿದ್ದು, ಒಂದು ವರ್ಷ ಬಳಿಕ ನಿಯುಕ್ತರಾಗಿದ್ದೆವು. ಅಲ್ಲಿಂದ ಇಲ್ಲಿಯವರೆಗೆ ಹಲವು ಕಷ್ಟಕರ ಸನ್ನಿವೇಶಗಳನ್ನು ಕಂಡಿದ್ದೇವೆ" ಎಂದು ಅಬ್ರಹಾಂ ಎನ್‍ಡಿಟಿವಿ ಜತೆ ಮಾತನಾಡುವ ವೇಳೆ ವಿವರಿಸಿದರು. ತರಬೇತಿ ಬಳಿಕ ಅಯೋಧ್ಯೆಗೆ ನಿಯೋಜನೆಗೊಂಡಿದ್ದ ಅವರು, ಆಗಷ್ಟೇ ಚಕಮಕಿಗಳು ಆರಂಭವಾಗಿದ್ದವು. ಆದರೆ ನಾವು ಅದರಿಂದ ಸಾಕಷ್ಟು ಕಲಿತೆವು ಎಂದು ಹೇಳಿದರು.

ಉಭಯ ಅಧಿಕಾರಿಗಳು ವಿಶ್ವಸಂಸ್ಥೆಯಲ್ಲಿ ಎಲ್ಲ ಮಹಿಳೆಯರನ್ನೇ ಹೊಂದಿರುವ ಭಾರತೀಯ ಪೊಲೀಸ್ ಪಡೆಯ ನೇತೃತ್ವವನ್ನೂ ವಹಿಸಿದ್ದರು. ಇವರಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪದಕ, ಉತ್ತಮ ಸೇವೆಗಾಗಿ ಪೊಲೀಸ್ ಪದಕ, ಅತಿ ಉತ್ಕೃಷ್ಟ ಸೇವಾ ಪದಕಗಳು ಲಭಿಸಿದ್ದವು ಎಂದು CRPF ವಕ್ತಾರರು ಹೇಳಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.

Similar News