ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕ ಇಂದು ಮಧ್ಯಾಹ್ನ ಪ್ರಕಟ

Update: 2022-11-03 05:12 GMT

ಹೊಸದಿಲ್ಲಿ: ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಇಂದು ಮಧ್ಯಾಹ್ನ ಪ್ರಕಟಿಸಲಿದೆ.

ಮೊರ್ಬಿಯಲ್ಲಿ ಇತ್ತೀಚೆಗೆ 135 ಜನರ ಸಾವಿಗೆ ಕಾರಣವಾದ ಸೇತುವೆ ದುರಂತ ಭಾರೀ ಚರ್ಚೆಯಲ್ಲಿರುವಾಗಲೇ ಬಿಜೆಪಿಯ ಭದ್ರಕೋಟೆಯಲ್ಲಿ ಹೈ ವೋಲ್ಟೇಜ್ ಚುನಾವಣೆಯ ಬಹು ನಿರೀಕ್ಷಿತ ದಿನಾಂಕ ಘೋಷಣೆಯಾಗಲಿದೆ.

ಸುಮಾರು 25 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಸೇತುವೆ ಕುಸಿತದ ಬಳಿಕ ಭೂಪೇಂದ್ರ ಪಟೇಲ್  ನೇತೃತ್ವದ ಸರಕಾರ ಭಾರೀ ಟೀಕೆಗೆ ಗುರಿಯಾಗಿದೆ.

ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಈ ವರ್ಷದ ಆರಂಭದಲ್ಲಿ ಪಂಜಾಬ್‌ನಲ್ಲಿ ತನ್ನ ಭರ್ಜರಿ ಗೆಲುವಿನಿಂದ ಉತ್ತೇಜಿತವಾಗಿದ್ದು, ಗುಜರಾತ್‌ನ ರಾಜಕೀಯದಲ್ಲಿ ಪ್ರಮುಖ  ಪಕ್ಷವಾಗಿ ಹೊರಹೊಮ್ಮಲು ಶ್ರಮಿಸುತ್ತಿದೆ.

2017 ರ ರಾಜ್ಯ ಚುನಾವಣೆಯಲ್ಲಿ 77 ಸ್ಥಾನ ಗೆದ್ದು ಉತ್ತಮ ನಿರ್ವಹಣೆ ತೋರಿದರೂ ಅಧಿಕಾರದಿಂದ ವಂಚಿತವಾಗಿದ್ದ ಕಾಂಗ್ರೆಸ್ ಈ ಬಾರಿ ಗೆಲುವಿನ ವಿಶ್ವಾಸದಲ್ಲಿದೆ. ತನ್ನ ಮನೆ-ಮನೆ ಪ್ರಚಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಒತ್ತಿ ಹೇಳಿದೆ. ಎಎಪಿ ಹಾಗೂ  ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ವಿರುದ್ಧ ಮತದಾರರಿಗೆ ಎಚ್ಚರಿಕೆ ನೀಡಿರುವ ಕಾಂಗ್ರೆಸ್ ಈ ಎರಡು ಪಕ್ಷವನ್ನು ಬಿಜೆಪಿಯ "ಬಿ ಟೀಮ್" ಎಂದು ಕರೆದಿದೆ.

Similar News