ಸಾಯಿಬಾಬಾ ಮಾನವ ಕಲ್ಯಾಣಕ್ಕಾಗಿ ಬದುಕನ್ನೆ ತೇಯ್ದಿದ್ದಾರೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-11-03 15:25 GMT

ಬೆಂಗಳೂರು, ನ. 3: ‘ಸಂಸಾರದ ಕಟ್ಟುಪಾಡುಗಳಿಂದ ದೂರಾಗಿ ಸತ್ಯ ಸಾಯಿಬಾಬಾ ಮಾನವ ಕಲ್ಯಾಣಕ್ಕಾಗಿ ತಮ್ಮ ಬದುಕನ್ನೇ ಗಂಧದ ಕೊರಡಿನಂತೆ ತೇಯ್ದಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುವಾರ ಇಲ್ಲಿನ ಪುಟ್ಟಪರ್ತಿಯ ಪ್ರಶಾಂತಿ ನಿಲಯಂ ವತಿಯಿಂದ ಆಯೋಜಿಸಿದ್ದ ಸತ್ಯಸಾಯಿ ಡಿಜಿಟಲ್ ಮ್ಯೂಸಿಯಂ ಉದ್ಘಾಟಿಸಿ ಮಾತನಾಡಿದ ಅವರು, ‘ಇಲ್ಲಿಗೆ ಭೇಟಿ ನೀಡಿ ನನ್ನಲ್ಲಿ ಪುನೀತ ಭಾವ ಮೂಡಿದೆ. ಬಾಬಾರ ದರ್ಶನವಾಗುವ ಮ್ಯೂಸಿಯಂ  ಉದ್ಘಾಟನೆ ಮಾಡಿದ್ದೇನೆ. ಬಾಬಾ ಸಾಮಾನ್ಯ ಜನರಲ್ಲಿ ಅವತಾರ ಪುರುಷರು ಎಂದು ಕರೆಯುತ್ತಾರೆ. ನಿಜವಾದ ಬಾಬಾ ಅವರನ್ನು ಅರಿಯಲು ನಮ್ಮ ಮನದಾಳದಲ್ಲಿ ದೈವತ್ವ ಬೇಕು. ಅವರು ದೈವತ್ವದ ಪ್ರತಿರೂಪ. ಇತರರಿಗೆ ದೈವತ್ವದ ಪರಿಮಳವನ್ನು ಬಿಟ್ಟುಹೋಗಿರುವ ದೈವೀಪುರುಷ’ ಎಂದು ನುಡಿದರು.

ಜಗತ್ತನ್ನು ಮೀರಿದ ಅಸ್ತಿತ್ವ: ಬಾಬಾರಿಗೆ ಹುಟ್ಟು-ಸಾವು ಇಲ್ಲ. ಕಾಲಾತೀತ, ಜಗತ್ತನ್ನು ಮೀರಿ ಅವರ ಅಸ್ತಿತ್ವವಿದೆ. ಇವೆಲ್ಲವನ್ನು ಅನುಭವಿಸಬೇಕಾದರೆ ನಮ್ಮೊಳಗೆ ದೈವತ್ವದ ಅಂಶವಿರಬೇಕು. ದೈವತ್ವನ್ನು ದೈವತ್ವ ಮಾತ್ರ ಸಂಪರ್ಕಿಸಬಲ್ಲದು. ಹೃದಯ ಮತ್ತು ಆತ್ಮಗಳ ಪಾವಿತ್ರ್ಯತೆಯೇ ದೈವತ್ವ. ಅವರ ಮಾರ್ಗದರ್ಶನದಲ್ಲಿ ನಡೆದರೆ, ನಾವು ದೈವತ್ವಕ್ಕೆ ಹತ್ತಿರವಾಗಬಹುದು ಎಂದರು.  

ಸಸ್ಯಾಹಾರಿಯಾದೆ: ‘1998ರಲ್ಲಿ ನಾನು ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಿದ್ದೆ. ಆಗ ಅವರ ಆಹಾರ ಪದ್ದತಿಯ ಕುರಿತಾದ ಪುಸ್ತಕದ ನೂರು ಪುಟಗಳನ್ನು ಓದಿದ್ದೆ. ನಾನು ಹೇಳಬೇಕಾಗಿದ್ದು ಪುಸ್ತಕದಲ್ಲಿದೆ, ಅದೇ ನನ್ನ ಸಂದೇಶ ಎಂದು ಬಾಬಾ ಮಾತನಾಡದೆಯೇ ತಿಳಿಸಿದ್ದರು. ಅಂದಿನಿಂದ ನಾನು ಸಸ್ಯಾಹಾರಿಯಾದೆ’ ಎಂದು ಅವರು ಸ್ಮರಿಸಿದರು.

ಶಾಸಕ ಅರವಿಂದ ಲಂಬಾವಳಿ, ಸತ್ಯಸಾಯಿ ಆಶ್ರಮ ಟ್ರಸ್ಟ್‍ನ ವ್ಯವಸ್ಥಾಪಕ ನಿರ್ದೇಶಕ ರತ್ನಾಕರ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್, ಉಪಸ್ಥಿತರಿದ್ದರು.

Similar News