ಕುಲಪತಿಗಳ ನೇಮಕಾತಿಗಳಲ್ಲಿ ರಾಜಕೀಯ ಹಸ್ತಕ್ಷೇಪದ ಮುಖ್ಯಮಂತ್ರಿ ಆರೋಪಕ್ಕೆ ಕೇರಳ ರಾಜ್ಯಪಾಲರ ಪ್ರತಿಕ್ರಿಯಿಸಿದ್ದು ಹೀಗೆ.

Update: 2022-11-03 16:35 GMT

ತಿರುವನಂತಪುರ,ನ.3: ಸರಕಾರಿ ಸ್ವಾಮ್ಯದ ವಿವಿಗಳಿಗೆ ಕುಲಪತಿಗಳ ನೇಮಕಾತಿಗಳಲ್ಲಿ ರಾಜಕೀಯ ಹಸ್ತಕ್ಷೇಪ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿದ್ದರೆ ತಾನು ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸುವುದಾಗಿ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್(Arif Muhammad Khan) ಅವರು ಗುರುವಾರ ಸವಾಲು ಹಾಕಿದ್ದಾರೆ.

ಕೇರಳದ ಒಂಭತ್ತು ವಿವಿಗಳ ಕುಲಪತಿಗಳು ತಕ್ಷಣ ರಾಜೀನಾಮೆ ನೀಡಬೇಕು ಎಂದು ಖಾನ್ ಸೂಚಿಸಿದ್ದು ಅವರ ಅಧಿಕಾರವ್ಯಾಪ್ತಿಯನ್ನು ಮೀರಿದೆ ಎಂದು ವಿಜಯನ್ ಬುಧವಾರ ಆರೋಪಿಸಿದ್ದರು. ನೇಮಕಾತಿಗಳಲ್ಲಿ ಖಾನ್ ಅವರ ಹಸ್ತಕ್ಷೇಪವು ಆರೆಸ್ಸೆಸ್ (RSS)ಮತ್ತು ಸಂಘ ಪರಿವಾರ ರಾಜ್ಯದ ವಿವಿಗಳ ಕೇಸರೀಕರಣವನ್ನು ಬಯಸುತ್ತಿವೆ ಎನ್ನುವುದನ್ನು ಸೂಚಿಸುತ್ತಿದೆ ಎಂದೂ ಅವರು ಹೇಳಿದ್ದರು.


ಅ.23ರಂದು ಖಾನ್ ಅವರು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಕುಲಪತಿಗಳಿಂದ ರಾಜೀನಾಮೆಗಳನ್ನು ಕೇಳಿದಾಗ ವಿವಾದ ಆರಂಭಗೊಂಡಿತ್ತು. ತಿರುವನಂತಪುರದ ಎಪಿಜೆ ಅಬ್ದುಲ್ ಕಲಾಂ ತಂತ್ರಜ್ಞಾನ ವಿವಿಯ ಕುಲಪತಿ ಹುದ್ದೆಗೆ ರಾಜಶ್ರೀ ಎಂ.ಎಸ್.ಅವರ ಹೆಸರನ್ನು ಶಿಫಾರಸು ಮಾಡಿದ್ದ ಶೋಧ ಸಮಿತಿಯು ಯುಜಿಸಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಬೆಟ್ಟು ಮಾಡಿತ್ತು.


ವಿವಿ ಕಾಯ್ದೆ 2015ರಂತೆ ಸಮಿತಿಯು ಹುದ್ದೆಗೆ ಮೂವರು ವ್ಯಕ್ತಿಗಳನ್ನು  ಸರ್ವಾನುಮತದಿಂದ ಹೆಸರಿಸಬೇಕು,ಆದರೆ ಅದು ರಾಜಶ್ರೀಯವರ ಹೆಸರನ್ನು ಮಾತ್ರ ಶಿಫಾರಸು ಮಾಡಿದೆ ಎಂದೂ ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು.
ರಾಜೀನಾಮೆ ನೀಡುವಂತೆ ಕುಲಪತಿಗಳಿಗೆ ಖಾನ್ ಸೂಚನೆ ನೀಡಿದ್ದ ಮರುದಿನ ಅವರ ಆದೇಶವನ್ನು ತಡೆಹಿಡಿದಿದ್ದ ಕೇರಳ ಉಚ್ಚ ನ್ಯಾಯಾಲಯವು,ವಿವಿಗಳ ಪದನಿಮಿತ್ತ ಕುಲಾಧಿಪತಿಯಾಗಿರುವ ರಾಜ್ಯಪಾಲರು ಶೋಕಾಸ್ ನೋಟಿಸ್ನ್ನು ಆಧರಿಸಿ ಆದೇಶವನ್ನು ಹೊರಡಿಸುವವರೆಗೆ ಕುಲಪತಿಗಳು ತಮ್ಮ ಹುದ್ದೆಗಳಲ್ಲಿ ಮುಂದುವರಿಯಬಹುದು ಎಂದು ಹೇಳಿತ್ತು.


ತಕ್ಷಣವೇ ಕುಲಪತಿಗಳಿಗೆ ನೋಟಿಸ್ಗಳನ್ನು ಹೊರಡಿಸಿದ್ದ ಖಾನ್,ತಮ್ಮ ನೇಮಕಾತಿಗಳನ್ನು ಅಕ್ರಮ ಎಂದು ಏಕೆ ಘೋಷಿಸಬಾರದು ಎನ್ನುವುದಕ್ಕೆ ಕಾರಣವನ್ನು ನ.3ರೊಳಗೆ ತಿಳಿಸುವಂತೆ ನಿರ್ದೇಶನ ನೀಡಿದ್ದರು.
ಖಾನ್ ಜಾರಿಗೊಳಿಸಿರುವ ಶೋಕಾಸ್ ನೋಟಿಸ್ಗಳ ವಿರುದ್ಧ ಬುಧವಾರ ಕೇರಳ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿರುವ ಏಳು ಕುಲಪತಿಗಳು,ಅವು ಕಾನೂನುಬಾಹಿರವಾಗಿವೆ ಎಂದು ಪ್ರತಿಪಾದಿಸಿದ್ದಾರೆ.


ಕುಲಪತಿಗಳಿಂದ ರಾಜೀನಾಮೆಗಳನ್ನು ಕೇಳುವ ತನ್ನ ನಿರ್ಧಾರವು ರಾಜಕೀಯ ಪ್ರೇರಿತವಾಗಿರಲಿಲ್ಲ ಎಂದು ಖಾನ್ ಗುರುವಾರ ಹೇಳಿದರು.

Similar News