ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ ವಿಚಾರ: ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಹಲವರ ಪ್ರತಿಕ್ರಿಯೆ ಇಲ್ಲಿದೆ...

''ಮೀಸಲಾತಿ ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ..''

Update: 2022-11-07 16:20 GMT

ಬೆಂಗಳೂರು, ನ. 7: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಕೇಂದ್ರ ಸರಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ (Supreme Court of India) ಎತ್ತಿ ಹಿಡಿದಿದ್ದು, ತೀರ್ಪಿನ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಜನಪರ ಸಂಘಟನೆಗಳ ನಾಯಕರು ಹಾಗೂ ಕಾನೂನು ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿದ್ದು ಇಲ್ಲಿ ನೀಡಲಾಗಿದೆ.

'ಸಂವಿಧಾನ ಹೇಳಿಲ್ಲ': ‘ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿರುವ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, 5 ಜನರ ನ್ಯಾಯಮೂರ್ತಿಗಳ ಪೀಠ, ಇದರಲ್ಲಿ 3 ಜನರ ಅಭಿಪ್ರಾಯ ಒಂದು ರೀತಿ ಇದೆ, ಇನ್ನುಳಿದ ಇಬ್ಬರು ನ್ಯಾಯಮೂರ್ತಿಗಳ ಅಭಿಪ್ರಾಯ ಬೇರೆ ರೀತಿ ಇದೆ. ನಾನು ಸುಪ್ರೀಂ ಕೋರ್ಟ್ ನಿರ್ಣಯದ ಬಗ್ಗೆ ಮಾತನಾಡುವುದಿಲ್ಲ. ಆದರೆ, ‘ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ ‘ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬಹುದು’ ಎಂದು ಸಂವಿಧಾನದ 15 ಮತ್ತು 16ನೆ ವಿಧಿ ಹೇಳುವುದಿಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಹೇಳಿದೆ. ಈಗ ಕೋರ್ಟ್ ತೀರ್ಪು ಬಂದಿದೆ, ಈ ತೀರ್ಪಿನ ಪೂರ್ಣ ಪ್ರತಿ ಸಿಕ್ಕ ಮೇಲೆ ನೋಡಿ ಮಾತನಾಡುತ್ತೇನೆ’ 

-ಸಿದ್ದರಾಮಯ್ಯ ವಿಪಕ್ಷ ನಾಯಕ
............

ಅಸಂವಿಧಾನಿಕ: ‘ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಸುಪ್ರಿಂ ಕೋರ್ಟ್ ತೀರ್ಪು ಅಸಂವಿಧಾನಿಕ. ಸಾಮಾಜಿಕ ಸ್ಥಿತಿಗತಿಯ ಕನಿಷ್ಟ ಅರಿವಿಲ್ಲದ ಕಾರಣಕ್ಕೆ ಇಂತಹ ತೀರ್ಪು ಬಂದಿದ್ದು, ಕೋರ್ಟ್‍ನಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಮೀಸಲಾತಿ ಬಡತನ ನಿರ್ಮೂಲನೆ ಕಾರ್ಯಕ್ರಮ ಅಲ್ಲ. ಶೇ.6.5ರಷ್ಟಿರುವವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿದರೆ, ಶೇ.70ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಎಸ್‍ಸಿ, ಎಸ್‍ಟಿ, ಒಬಿಸಿಗಳಿಗೆ ಕೇವಲ ಶೇ.50ರಷ್ಟು ಮೀಸಲಾತಿ ಯಾವ ನ್ಯಾಯ. ಎಸ್‍ಸಿ-ಎಸ್‍ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಯೋಗದ ಶಿಫಾರಸ್ಸು ಕೇಳುವ ಕೋರ್ಟ್ ಶೇ.10ರಷ್ಟು ಮೀಸಲಾತಿ ಕಲ್ಪಿಸಲು ಯಾವ ಆಯೋಗದ ಅಧ್ಯಯನ, ಶಿಫಾರಸ್ಸು ಮಾಡಿದೆ ಎಂದು ಹೇಳಬೇಕಿತ್ತು. ಇದು ಅತ್ಯಂತ ಅನ್ಯಾಯದಿಂದ ಕೂಡಿದ ತೀರ್ಪು’

-ಮಾವಳ್ಳಿ ಶಂಕರ್ ದಸಂಸ ಮುಖಂಡ
..........
ಸಮಾನತೆಗೆ ಕೊನೆಯ ಮೊಳೆ: ‘ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿರುವ ಕ್ರಮ ಎತ್ತಿ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪು ಸಮಾನತೆ-ಸಾಮಾಜಿಕ ನ್ಯಾಯದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡಿದಿದೆ. ಬಡವರ ಹೆಸರಿನಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿದ್ದು, ಅದು ಕೇವಲ ಬ್ರಾಹ್ಮಣರು, ವೈಶ್ಯರು, ಕೆಲ ಸಣ್ಣಪುಟ್ಟ ಶೇ.5ರಷ್ಟಿರುವ ಜಾತಿಗಳಿಗೆ ಮಾತ್ರ ಅನುಕೂಲವಾಗಲಿದೆ. ಇದರ ವಿರುದ್ಧ ಹಿಂ.ವರ್ಗದಲ್ಲಿನ ಲಿಂಗಾಯತ, ಒಕ್ಕಲಿಗ ಸಮುದಾಯ ಬೀದಿಗೆ ಬರಬೇಕಿತ್ತು. ಸುಪ್ರೀಂ ಕೋರ್ಟ್ ತೀರ್ಪು ಖಂಡನಾರ್ಹ, ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು. ಚಾರ್ತುವರ್ಣ ವ್ಯವಸ್ಥೆಯ ಪುನರ್ ಸ್ಥಾಪನೆ ವಿರುದ್ಧ ಸಂಘರ್ಷವೊಂದೇ ಮಾರ್ಗ.

-ಗುರುಪ್ರಸಾದ್ ಕೆರಗೊಡು ದಲಿತ ಮುಖಂಡ
............
ಸ್ವಾಗತ: ‘ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿ ಸಂವಿಧಾನಕ್ಕೆ ಮಾಡಲಾದ 103ನೆ ತಿದ್ದುಪಡಿಯು ಸಂವಿಧಾನಬದ್ಧ ಎಂದು ಸುಪ್ರೀಂ ಕೋರ್ಟ್ ನೀಡಿರುವುದು ಸಾವಗತಾರ್ಹ. ಮೀಸಲಾತಿ ಪ್ರಸ್ತಾವನೆಯನ್ನು ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದ್ದೆವು. ಅದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ’

-ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
............
ಅಶಾಂತಿ ಸೃಷ್ಟಿ: ‘ಮುಂದುವರಿದ ಜಾತಿಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿ ಸಂವಿಧಾನಕ್ಕೆ ಮಾಡಲಾದ 103ನೇ ತಿದ್ದುಪಡಿಯು ಸಂವಿಧಾನಬದ್ಧ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ, ಈ ತೀರ್ಪಿನಿಂದ ಬಡವರಿಗೆ, ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗಲಿದೆ. ದೇಶದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಲಿದೆ’

-ಎ.ಪಿ.ರಂಗನಾಥ್ ಮಾಜಿ ಅಧ್ಯಕ್ಷ, ಬೆಂಗಳೂರು ವಕೀಲರ ಸಂಘ
.............
'ಅಜೆಂಡಾ ಜಾರಿಯಿಂದ ದೇಶದ ಭವಿಷ್ಯ ಹಾಳು': ‘ಆರ್ಥಿಕ ದುರ್ಬಲ ವರ್ಗಗಳಿಗೆ(ಇಡಬ್ಲ್ಯೂಎಸ್) ಶೇ.10ರಷ್ಟು ಮೀಸಲಾತಿ ಕಲ್ಪಿಸಿರುವುದರಿಂದ ಹಾಗೂ ಇದೇ ರೀತಿಯಾಗಿ ಮೀಸಲಾತಿ ಹೆಚ್ಚಳ ಮಾಡುತ್ತ ಹೋಗುವುದರಿಂದ ದೇಶದಲ್ಲಿ ಹೊಸ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಮೀಸಲಾತಿ ವಿಚಾರದಲ್ಲಿ ಸರಕಾರಗಳು ಕೈಗೊಳ್ಳುವ ನಿರ್ಣಯಗಳು ಸಂವಿಧಾನದ ವಿರುದ್ಧ. ಸರಕಾರಗಳು ತಮ್ಮ ಅಜೆಂಡಾಗಳನ್ನು ಜಾರಿ ಮಾಡಿ, ದೇಶದ ಭವಿಷ್ಯವನ್ನು ಹಾಳು ಮಾಡುತ್ತಿವೆ’ 

-ಶಂಕರಪ್ಪ ಹೈಕೋರ್ಟ್ ಹಿರಿಯ ವಕೀಲ 
.................
'ಗರೀಬ್ ಕಲ್ಯಾಣ್ ಯೋಜನೆಗೆ ಬಲ': ‘ಶಿಕ್ಷಣ ಮತ್ತು ಉದ್ಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿರುವ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಪ್ರಧಾನಿ ಮೋದಿ ನೇತೃತ್ವದ ಸರಕಾರದ ಗರೀಬ್ ಕಲ್ಯಾಣ್ ಯೋಜನೆಗೆ ಬಲ ನೀಡಿದೆ’

-ಎಚ್.ಎಸ್.ಸಚ್ಚಿದಾನಂದ ಮೂರ್ತಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ
..............

‘ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿರುವ ಸಂಬಂಧದ ಸುಪ್ರೀಂ ಕೋರ್ಟ್ ತೀರ್ಪು ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಈ ತೀರ್ಪನ್ನು ನಾನು ಸ್ವಾಗತಿಸುವುದಿಲ್ಲ. ಕೋರ್ಟ್ ತೀರ್ಪಿಗೆ ಬದ್ಧರಾಗಿರುವಂತೆಯೆ ಅದನ್ನು ವಿಮರ್ಶೆ ಮಾಡುವ ಹಕ್ಕನ್ನು ಜನತೆಗೆ ಇದೆ. ಮೀಸಲಾತಿ ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ. ವಂಚಿತ ಸಮುದಾಯಗಳಿಗೆ ಸಂವಿಧಾನ ಕಲ್ಪಿಸಿರುವ ಅವಕಾಶ ಮೀಸಲಾತಿ. ಹೀಗಾಗಿ ಕೋರ್ಟ್ ತೀರ್ಪಿನ ಬಗ್ಗೆ ರಚನಾತ್ಮಕ, ಆರೋಗ್ಯಕರ ಚರ್ಚೆ ಆಗಬೇಕು’

-ಎಚ್.ಎನ್.ನಾಗಮೋಹನ್ ದಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
..............

‘ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ(ಇಡಬ್ಲ್ಯುಎಸ್) ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದರಿಂದ ಶತಮಾನದ ಸಾಮಾಜಿಕ ನ್ಯಾಯ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ. ಮೀಸಲಾತಿ ಎನ್ನುವುದು ಸಾಮಾಜಿಕ ಮತ್ತು ಶೈಕ್ಷಣಿಕ ಮಟ್ಟವನ್ನು ಪರಿಗಣಿಸಬೇಕೇ ಹೊರತು ಆರ್ಥಿಕತೆಯನ್ನು ಅಲ್ಲ. ಇಂತಹ ತೀರ್ಪಿನಿಂದ ಸಂವಿಧಾನ ಮೂಲ ಆಶಯಕ್ಕೆ ಧಕ್ಕೆ’

-ಡಾ.ಸಿ.ಎಸ್.ದ್ವಾರಕನಾಥ್, ಮಾಜಿ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ 

--------------------------------------------

ಇದನ್ನೂ ಓದಿ: ಸಂಸೆ| ವಿದ್ಯುತ್ ಕಡಿತದಿಂದ BSNL ನೆಟ್‍ವರ್ಕ್ ಸ್ಥಗಿತ; ಗುಡ್ಡ ಏರಿ ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಿಸಿದ ಗ್ರಾಮಸ್ಥರು

Similar News