8 ಶತಕೋಟಿ ತಲುಪಿದ ವಿಶ್ವದ ಜನಸಂಖ್ಯೆ: ವಿಶ್ವಸಂಸ್ಥೆ

ಚೀನಾವನ್ನು ಹಿಂದಿಕ್ಕಲಿರುವ ಭಾರತ

Update: 2022-11-07 16:23 GMT

ನ್ಯೂಯಾರ್ಕ್, ನ.7: ಜಾಗತಿಕ ಜನಸಂಖ್ಯೆಯು ನವೆಂಬರ್ ಮಧ್ಯದ ವೇಳೆಗೆ 8 ಶತಕೋಟಿಯ ಗಡಿ ತಲುಪಲಿದೆ ಮತ್ತು ಮುಂಬರುವ ದಶಕಗಳಲ್ಲಿ ಪ್ರಾದೇಶಿಕ ಅಸಮಾನತೆಗಳೊಂದಿಗೆ ನಿಧಾನಗತಿಯಲ್ಲಿ ಬೆಳೆಯುತ್ತಲೇ ಇರುತ್ತದೆ ಎಂದು ವಿಶ್ವಸಂಸ್ಥೆ(WHO) ಅಂದಾಜಿಸಿದೆ.

 ಅಲ್ಲದೆ 2023ರ ಅಂತ್ಯಕ್ಕೆ ಭಾರತವು ಚೀನಾವನ್ನು ಹಿಂದಿಕ್ಕಿ ಅತ್ಯಧಿಕ ಜನರಿರುವ ದೇಶ ಎನಿಸಿಕೊಳ್ಳಲಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

1950ರಲ್ಲಿ ಜಾಗತಿಕ ಜನಸಂಖ್ಯೆ 2.5 ಶತಕೋಟಿಯಷ್ಟಿತ್ತು. 1960ರವರೆಗೆ ವೇಗವಾಗಿ ಬೆಳೆಯುತ್ತಿದ್ದ ಜನಸಂಖ್ಯೆ 1960ರ ಬಳಿಕ ನಾಟಕೀಯವಾಗಿ ನಿಧಾನಗತಿಗೆ ತಿರುಗಿತು. 1962ರಿಂದ 1965ರ ಅವಧಿಯಲ್ಲಿ ವಾರ್ಷಿಕ ಅಭಿವೃದ್ಧಿ ದರ 2.1%ದಷ್ಟಿದ್ದರೆ ಇದು 2020ರ ವೇಳೆಗೆ 1%ಕ್ಕೂ ಕಡಿಮೆಯಾಗಿದೆ. ಆದರೂ 1950ರಿಂದ 2022ರ ನವೆಂಬರ್ ಅವಧಿಯಲ್ಲಿ ಜಾಗತಿಕ ಜನಸಂಖ್ಯೆಯಲ್ಲಿ 3 ಪಟ್ಟು ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಜನಸಂಖ್ಯಾ ವಿಭಾಗದ ರಚೆಲ್ ಸ್ನೋ ಹೇಳಿದ್ದಾರೆ.

  ಫಲವತ್ತತೆ ದರಗಳಲ್ಲಿ ನಿರಂತರ ಕುಸಿತದಿಂದಾಗಿ ಈ ಪ್ರಮಾಣವು 2050ರ ವೇಳೆಗೆ 0.5%ಕ್ಕೆ ಕುಸಿಯಬಹುದು. ಜೀವಿತಾವಧಿಯಲ್ಲಿ ಮತ್ತು ಹೆರಿಗೆಯ ವಯಸ್ಸಿನ ಜನರ ಹೆಚ್ಚಳದಿಂದಾಗಿ ಜನಸಂಖ್ಯೆಯು 2030ರಲ್ಲಿ ಸುಮಾರು 8.5 ಶತಕೋಟಿ, 2050ರಲ್ಲಿ 9.7 ಶತಕೋಟಿ ಮತ್ತು 2080ರಲ್ಲಿ 10.4 ಶತಕೋಟಿಗೆ ತಲುಪಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

 1950ರಲ್ಲಿ ತನ್ನ ಜೀವಿತಾವಧಿಯಲ್ಲಿ ಪ್ರತೀ ಮಹಿಳೆಗೆ ಫಲವತ್ತತೆ ದರ ಸುಮಾರು 5 ಮಕ್ಕಳು ಎಂದಿದ್ದರೆ, ಈ ಪ್ರಮಾಣ 2021ರಲ್ಲಿ ಸರಾಸರಿ 2.3 ಮಕ್ಕಳ ಪ್ರಮಾಣಕ್ಕೆ ಇಳಿದಿದೆ. 2050ರ ವೇಳೆಗೆ ಈ ಪ್ರಮಾಣ 2.1ಕ್ಕೆ ಇಳಿಯಬಹುದು ಎಂದು ವರದಿ ಹೇಳಿದೆ. ಈ ಜಗತ್ತಿನ ಬಹುಪಾಲು ಜನತೆ ಪ್ರತೀ ಮಹಿಳೆಗೆ 2.1 ಮಕ್ಕಳ ಫಲವತ್ತತೆ ದರ ಹೊಂದಿರುವ ದೇಶಗಳಲ್ಲಿ ವಾಸಿಸುವ ಹಂತವನ್ನು ನಾವೀಗ ತಲುಪಿದ್ದೇವೆ ಎಂದು ಸ್ನೋ ಹೇಳಿದ್ದಾರೆ.

ಸರಾಸರಿ ಜೀವಿತಾವಧಿ ಹೆಚ್ಚುತ್ತಲೇ ಇರುವುದು ಜಾಗತಿಕ ಜನಸಂಖ್ಯೆಯ ಬೆಳವಣಿಗೆಯನ್ನು ಪ್ರೇರೇಪಿಸುವ ಪ್ರಮುಖ ಅಂಶವಾಗಿದೆ. 1990ರಲ್ಲಿ ಸರಾಸರಿ ಜೀವಿತಾವಧಿ 63 ವರ್ಷವಾಗಿದ್ದರೆ ಇದು 2019ರಲ್ಲಿ 72.8 ವರ್ಷಕ್ಕೆ ಹೆಚ್ಚಿದೆ. 2050ರ ವೇಳೆಗೆ 77.2 ವರ್ಷಕ್ಕೆ ತಲುಪಬಹುದು.

ಜೀವಿತಾವಧಿಯ ಹೆಚ್ಚಳ ಮತ್ತು ಫಲವತ್ತತೆಯ ಕುಸಿತದ ಕಾರಣದಿಂದ 65 ವರ್ಷಕ್ಕಿಂತ ಅಧಿಕ ವಯಸ್ಸಿನವರ ಪ್ರಮಾಣ 2022ರಲ್ಲಿ 10% ಇದ್ದರೆ, 2050ರ ವೇಳೆ 16%ಕ್ಕೆ ಹೆಚ್ಚಬಹುದು. ಇದು ಕಾರ್ಮಿಕ ಮಾರುಕಟ್ಟೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಹಾಗೂ ವಯಸ್ಸಾದವರ ಆರೈಕೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.

  2050ರ ವೇಳೆಗೆ ಒಟ್ಟು ಜಾಗತಿಕ ಜನಸಂಖ್ಯೆಯ ಬೆಳವಣಿಗೆಯ 50%ಕ್ಕಿಂತ ಹೆಚ್ಚು ಜನರು ಕಾಂಗೊ ಗಣರಾಜ್ಯ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪ್ಪೀನ್ಸ್ ಮತ್ತು ತಾಂಝಾನಿಯಾ ದೇಶಗಳಿಂದ ಬರುತ್ತಾರೆ. ವಿಭಿನ್ನ ಪ್ರದೇಶಗಳಲ್ಲಿ ಸರಾಸರಿ ವಯಸ್ಸು ಸಹಾ ಅರ್ಥಪೂರ್ಣವಾಗಿದೆ. ಈ ಪ್ರಾದೇಶಿಕ ಜನಸಂಖ್ಯಾ ವ್ಯತ್ಯಾಸವು ಭೌಗೋಳಿಕ ರಾಜಕೀಯವು ಮುಂದೆ ಸಾಗುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾವನ್ನು ಹಿಂದಿಕ್ಕಲಿರುವ ಭಾರತ

  ವಿಶ್ವಸಂಸ್ಥೆ ಮತ್ತೊಂದು ಮಹತ್ವದ ಅಂಶವನ್ನು ಮುಂದಿರಿಸಿದೆ. 2023ರ ವೇಳೆಗೆ ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾ ಮತ್ತು ದ್ವಿತೀಯ ಸ್ಥಾನದಲ್ಲಿರುವ ಭಾರತ ತಮ್ಮ ಸ್ಥಾನವನ್ನು ಅದಲು ಬದಲು ಮಾಡಿಕೊಳ್ಳಲಿವೆ.

2023ರ ವೇಳೆಗೆ ಭಾರತದ ಜನಸಂಖ್ಯೆ ಚೀನಾದ ಜನಸಂಖ್ಯೆಯನ್ನು ಮೀರಲಿದ್ದು 2050ರ ವೇಳೆಗೆ ಜನಸಂಖ್ಯೆ 1.7 ಶತಕೋಟಿಗೆ ಹೆಚ್ಚಲಿದೆ. ಈಗ 1.4 ಶತಕೋಟಿ ಜನಸಂಖ್ಯೆ ಇರುವ ಚೀನಾ 2050ರ ವೇಳೆಗೆ 1.3 ಶತಕೋಟಿ ಜನಸಂಖ್ಯೆಯನ್ನು ಹೊಂದಲಿದೆ.

ಈ ಶತಮಾನದ ಅಂತ್ಯಕ್ಕೆ ಚೀನಾದ ಜನಸಂಖ್ಯೆ ಕೇವಲ 800 ದಶಲಕ್ಷಕ್ಕೆ ಇಳಿಯಬಹುದು. 2050ರ ವೇಳೆಗೆ ಅಮೆರಿಕ ಮತ್ತು ನೈಜೀರಿಯಾ ದೇಶಗಳು 375 ದಶಲಕ್ಷ ಜನಸಂಖ್ಯೆಯೊಂದಿಗೆ ಜಂಟಿಯಾಗಿ 3ನೇ ಸ್ಥಾನ ಪಡೆಯಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

Similar News