ಮೇಲ್‌ಜಾತಿ ಮೀಸಲಾತಿಗೆ ಸುಪ್ರೀಂ ಅನುಮೋದನೆ: ಸರ್ವಪಕ್ಷ ಸಭೆ ಕರೆದ ತಮಿಳುನಾಡು

Update: 2022-11-08 19:28 GMT

ಚೆನ್ನೈ: ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯೂಎಸ್)ಗಳಿಗೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ನವೆಂಬರ್ 12ರಂದು ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಸಭೆಯೊಂದನ್ನು ಕರೆಯುವುದಾಗಿ ತಮಿಳುನಾಡು ಸರಕಾರ ಮಂಗಳವಾರ ತಿಳಿಸಿದೆ.

ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ವಹಿಸಲಿದ್ದಾರೆ.

ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಲಭಿಸುತ್ತಿರುವ ಮೀಸಲಾತಿಯ ಪ್ರಯೋಜನ ಸಿಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಮೀಸಲಾತಿ ನೀಡುವ ಯೋಜನೆಯನ್ನು ಕೇಂದ್ರ ಸರಕಾರವು 2019ರಲ್ಲಿ ಜಾರಿಗೆ ತಂದಿತ್ತು.

ಈ ನೂತನ ಮೀಸಲಾತಿ ಯೋಜನೆಗೆ ಅರ್ಹತೆ ಪಡೆಯಲು ವ್ಯಕ್ತಿಗಳ ಕುಟುಂಬದ ವರಮಾನ ವರ್ಷಕ್ಕೆ 8 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು ಎಂಬ ಶರತ್ತು ರೂಪಿಸಲಾಗಿದೆ. ಐದು ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಅಥವಾ 1,000 ಚದರ ಅಡಿಗಿಂತ ದೊಡ್ಡ ಮನೆಯನ್ನು ಹೊಂದಿರುವವರು ಈ ಮೀಸಲಾತಿಗೆ ಅರ್ಹರಲ್ಲ.

ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಮತ್ತು ಉದ್ಯೋಗಗಳಲ್ಲಿ 10% ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಈ ಮೀಸಲಾತಿಯು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನ ಪೀಠವು 3-2ರ ಬಹುಮತದ ತೀರ್ಪು ನೀಡಿದ್ದು, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಬೇಲಾ ತ್ರಿವೇದಿ ಮತ್ತು ಜೆ.ಬಿ. ಪರ್ದಿವಾಲಾ ಮೀಸಲಾತಿಯನ್ನು ಎತ್ತಿಹಿಡಿದರೆ, ಮುಖ್ಯನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್ ವೀಸಲಾತಿಯನ್ನು ವಿರೋಧಿಸಿ ತೀರ್ಪು ನೀಡಿದರು.

ಶತಮಾನದ ಸಾಮಾಜಿಕ ನ್ಯಾಯ ಹೋರಾಟಕ್ಕೆ ಹಿನ್ನಡೆ: ಸ್ಟಾಲಿನ್

ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯುಎಸ್)ಗಳಿಗೆ ಮೀಸಲಾತಿ ನೀಡುವುದು, ಸಾಮಾಜಿಕ ನ್ಯಾಯಕ್ಕಾಗಿ ಶತಮಾನ ಕಾಲ ನಡೆದಿರುವ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಸೋಮವಾರ ಟ್ವೀಟ್ ಮಾಡಿದ್ದಾರೆ.

‘‘ಇಡಬ್ಲ್ಯುಎಸ್ ಕೋಟ ಎಂಬ ಸಾಮಾಜಿಕ ಅನ್ಯಾಯದ ವಿರುದ್ಧ ಹೊರಾಡಲು ಮತ್ತು ಸಾಮಾಜಿಕ ನ್ಯಾಯಕ್ಕಾಗಿನ ಹೋರಾಟವನ್ನು ಮುಂದುವರಿಸಲು ಎಲ್ಲಾ ಸಮಾನ ಮನಸ್ಕ ಪಕ್ಷಗಳು ಒಂದಾಗಬೇಕು’’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್, ಬಿಜೆಪಿ ಸ್ವಾಗತ; ಪ್ರಾದೇಶಿಕ ಪಕ್ಷಗಳ ವಿರೋಧ

ಕಾಂಗ್ರೆಸ್ ಮತ್ತು ಬಿಜೆಪಿ ಮುಂತಾದ ರಾಷ್ಟ್ರೀಯ ಪಕ್ಷಗಳು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದರೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದಂತೆ ಹಲವಾರು ಪ್ರಾದೇಶಿಕ ಪಕ್ಷಗಳು ತೀರ್ಪನ್ನು ಟೀಕಿಸಿವೆ.

ಪಟ್ಟಾಳಿ ಮಕ್ಕಳ್ ಕಚ್ಚಿ, ಅಮ್ಮ ಮಕ್ಕಳ್ ಮುನ್ನೇತ್ರ ಕಳಗಮ್ ಮತ್ತು ವಿಡುತಲೈ ಚಿರುತೈಗಳ್ ಕಚ್ಚಿ ಮುಂತಾದ ರಾಜಕೀಯ ಪಕ್ಷಗಳೂ ಸುಪ್ರೀಂ ಕೋರ್ಟ್ ತೀರ್ಪನ್ನು ತಿರಸ್ಕರಿಸಿವೆ. ಆರ್ಥಿಕ ಸ್ಥಾನಮಾನವನ್ನು ಸಾಮಾಜಿಕ ನ್ಯಾಯಾಲಯದ ಸೂಚ್ಯಂಕ ಎಂಬುದಾಗಿ ಪರಿಗಣಿಸಲಾಗದು ಎಂಬುದಾಗಿ ಈ ಪಕ್ಷಗಳು ಹೇಳಿವೆ.

ತಮಿಳುನಾಡಿನಲ್ಲಿ ಜಾರಿಯಲ್ಲಿರುವ 69% ಮೀಸಲಾತಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ಎಎಮ್‌ಎಮ್‌ಕೆ ಪಕ್ಷದ ಸ್ಥಾಪಕ ಟಿಟಿವಿ ದಿನಕರನ್ ಮುಖ್ಯಮಂತ್ರಿ ಸ್ಟಾಲಿನ್‌ರನ್ನು ಒತ್ತಾಯಿಸಿದ್ದಾರೆ.

ಅದೇ ವೇಳೆ, ಸುಪ್ರೀಂ ಕೋರ್ಟ್ ತೀರ್ಪಿನ ಮರುಪರಿಶೀಲನೆ ಕೋರಿ ತನ್ನ ಪಕ್ಷವು ಅರ್ಜಿ ಸಲ್ಲಿಸುವುದಾಗಿ ವಿಸಿಕೆ ಪಕ್ಷದ ಮುಖ್ಯಸ್ಥ ತೋಲ್ ತಿರುಮವಾಳವನ್ ಹೇಳಿದ್ದಾರೆ.

ಆದರೆ, ಬಿಜೆಪಿಯ ಮಿತ್ರಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಮ್ (ಎಐಎಡಿಎಮ್‌ಕೆ) ಪಕ್ಷವು ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

Similar News