ಸಂಪುಟದಿಂದ ಸಚಿವ ಭೈರತಿ ಬಸವರಾಜ ವಜಾಕ್ಕೆ ಕಾಂಗ್ರೆಸ್ ಆಗ್ರಹ

Update: 2022-11-09 14:56 GMT

ಬೆಂಗಳೂರು, ನ.9: ‘ದಾವಣಗೆರೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ಸಂಗ್ರಹ ಮಾಡುವ ಗುತ್ತಿಗೆದಾರನಿಂದ 15 ಲಕ್ಷ ರೂ.ಲಂಚ ಸ್ವೀಕರಿಸಿರುವ ಆರೋಪ ಎದುರಿಸುತ್ತಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರನ್ನು ಮುಖ್ಯಮಂತ್ರಿ ಸಂಪುಟದಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ಆಗ್ರಹಿಸಿದರು.

ಬುಧವಾರ ನಗರದ ಕೆ.ಆರ್.ಪುರ ಬಿಬಿಎಂಪಿ ಕಚೇರಿ ಎದುರು ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರ ಸ್ಪಂದನೆ ಸಿಗದ ಯಾತ್ರೆಯಲ್ಲಿ ಕಾಂಗ್ರೆಸ್‍ನವರ ಧಮ್ಮು, ತಾಕತ್ತು ಬಗ್ಗೆ ಮಾತನಾಡುತ್ತಾರೆ. ನಿಮಗೆ ಧಮ್ಮು, ತಾಕತ್ತು ಇದ್ದರೆ ಈ 40 ಪರ್ಸೆಂಟ್ ಕಮಿಷನ್ ಪಡೆಯುವ ಸಚಿವನನ್ನು ಸಂಪುಟದಿಂದ ವಜಾ ಮಾಡಿ ಎಂದು ಆಗ್ರಹಿಸಿದರು.

ಎರಡು ನಿನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೆನ್ನಿಗೆ ಚೂರಿ ಹಾಕಿ, 50 ಕೋಟಿ ರೂ.ದುಡ್ಡು ತೆಗೆದುಕೊಂಡು ಬಿಜೆಪಿ ಪಕ್ಷಕ್ಕೆ ಮಾರಾಟವಾಗಿರುವ ಭೈರತಿ ಬಸವರಾಜಗೆ ಮಾನ ಮರ್ಯಾದೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರು ಇವರ ಸಹೋದರರಿಗೆ ಕೆಲಸ ಆರಂಭಿಸುವ ಮುನ್ನ ಲಂಚ ಕೊಡಬೇಕಂತೆ. ತಹಶೀಲ್ದಾರ್, ಬಿಬಿಎಂಪಿ ಜಂಟಿ ಆಯುಕ್ತರಾಗಿ ಈ ಭಾಗಕ್ಕೆ ಬರಲು 2 ಕೋಟಿ ರೂ., ಕಂದಾಯ ನಿರೀಕ್ಷಕನಾಗಲು 50 ಲಕ್ಷ ರೂ.ನೀಡಬೇಕಂತೆ, ಈ ಕ್ಷೇತ್ರದಲ್ಲಿ ಭೈರತಿ ಬಸವರಾಜ ಮಾಡಿರುವ ಸಾಧನೆ ಏನು? ಲೂಟಿ ಏನು ಅನ್ನೋದು ಸಾರ್ವಜನಿಕವಾಗಿ ಬಹಿರಂಗ ವೇದಿಕೆಯಲ್ಲಿ ಚರ್ಚಿಸಲು ನಾನು ಸಿದ್ಧ. ಸಮಯ, ದಿನಾಂಕ ಅವರೇ ನಿಗದಿ ಮಾಡಲಿ ಎಂದು ನಾರಾಯಣಸ್ವಾಮಿ ಸವಾಲು ಹಾಕಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಬಾಬು ಮಾತನಾಡಿ, ಭೈರತಿ ಬಸವರಾಜನ ಭ್ರಷ್ಟಾಚಾರಕ್ಕೆ ಕೆ.ಆರ್.ಪುರ ಪೊಲೀಸ್ ಇನ್ಸ್‍ಪೆಕ್ಟರ್ ನಂದೀಶ್ ಬಲಿಯಾದ. 800 ಕೋಟಿ ರೂ.ಗಳನ್ನು ಕೆಲಸ ಮಾಡದೆ ನುಂಗಿ ಹಾಕಿದ್ದಾರೆ ಎಂದು ಲೋಕಾಯುಕ್ತದಲ್ಲಿ ಎಫ್‍ಐಆರ್ ದಾಖಲಾಗಿದೆ. ಆರೋಪ ಮಾಡಿರುವವರಿಗೆ 5 ಕೋಟಿ ಲಂಚ ನೀಡಿ ಸುಮ್ಮನಾಗಿಸಿದ್ದಾರೆ ಎಂದರು.

ಕೆ.ಆರ್.ಪುರ ಕ್ಷೇತ್ರಕ್ಕೆ ಬಂದಿರುವ 3500ಕೋಟಿ ರೂ.ಏನಾಗಿದೆ. ಈತನ ಚೇಲಾಗಳ ಮೂಲಕ ದೌರ್ಜನ್ಯ, ಭ್ರಷ್ಟಾಚಾರ ನಡೆಯುತ್ತಿದೆ. ಲ್ಯಾಂಡ್ ಮಾಫಿಯಾ ಈ ಕ್ಷೇತ್ರದಲ್ಲಿ ಸೃಷ್ಟಿ ಆಗಿದೆ. ನಿಮ್ಮ ದೌರ್ಜನ್ಯಕ್ಕೆ ನಾವು ಬೆದರುವುದಿಲ್ಲ. ನಿಮ್ಮ ದಾಖಲೆಗಳು ನಮ್ಮ ಬಳಿ ಇದೆ. ವಾರ್ಡ್ ಮಟ್ಟದಲ್ಲಿ ಈ ಹೋರಾಟ ನಡೆಯಲಿದೆ. ಭ್ರಷ್ಟ ಸಚಿವ ವಜಾ ಆಗಬೇಕು ಎಂದು ಅವರು ಹೇಳಿದರು.

2023ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತೆ. ಆಗ ನೀವು ನಿಮ್ಮ ಪಾಪದ ಕರ್ಮಗಳನ್ನು ಅನುಭವಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಈ ಕ್ಷೇತ್ರಕ್ಕೆ ಬರಲು 25 ಲಕ್ಷ ರೂ. ನೀಡಬೇಕಂತೆ, ದೇವಸ್ಥಾನಗಳ ಹೆಸರಲ್ಲಿ ಲೂಟಿ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ಒಂದೇ ಒಂದು ಶಾಶ್ವತ ಯೋಜನೆ ಮಾಡಲು ಇವರಿಗೆ ಸಾಧ್ಯವಾಗಿಲ್ಲ. ಮೇಡಹಳ್ಳಿಯಲ್ಲಿ ಸರಕಾರಿ ಭೂಮಿಯಲ್ಲಿ ಇವರ ಚೇಲಾಗಳಿಗೆ ನಿವೇಶನ ನೀಡಲು ಹೊರಟಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮೋಹನ್ ಬಾಬು ಹೇಳಿದರು.

Similar News