ಬೆಂಗಳೂರು | ಶ್ರೀಲಂಕಾ ಪ್ರಜೆಗಳಿಗೆ ನಕಲಿ ಪಾಸ್‍ಪೋರ್ಟ್ ತಯಾರಿಸಿದ್ದ ಆರೋಪ: 9 ಮಂದಿ ಬಂಧನ

Update: 2022-11-09 16:13 GMT

ಬೆಂಗಳೂರು, ನ.9: ಶ್ರೀಲಂಕಾ ಪ್ರಜೆಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತೀಯ ಪಾಸ್‍ಪೋರ್ಟ್ (passport) ಮಾಡಿಸಿಕೊಡುತ್ತಿದ್ದ ಆರೋಪದಡಿ ಶ್ರೀಲಂಕಾದ ಐವರು ಸೇರಿ 9 ಮಂದಿಯ ಗುಂಪನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ, ಬೆಂಗಳೂರಿನ ಇಬ್ಬರು, ಮಂಗಳೂರಿನ ಇಬ್ಬರು ಸೇರಿ 9 ಮಂದಿ ಆರೋಪಿಗಳಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ತಿಳಿಸಿದರು.

ಆರೋಪಿಗಳಲ್ಲಿ ಓರ್ವ ಖಾಸಗಿ ಪಾಸ್‍ಪೋರ್ಟ್ ಮಧ್ಯವರ್ತಿ ಆಗಿದ್ದು, ಆತನ ವಿರುದ್ಧ ಜಯನಗರ, ಡಿ.ಜೆ ಹಳ್ಳಿ, ಪುಲಿಕೇಶಿ ನಗರ, ಅನ್ನಪೂರ್ಣೇಶ್ವರಿ ನಗರ, ಭಾರತಿ ನಗರ, ಸಿಟಿ ಮಾರ್ಕೆಟ್, ಮಾದನಾಯಕನಹಳ್ಳಿ ಸೇರಿದಂತೆ 6 ಪೊಲೀಸ್ ಠಾಣೆಗಳಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಭಾರತೀಯ ಪಾಸ್‍ಪೋರ್ಟ್ ಕೊಡಿಸಿದ ಕೃತ್ಯದಡಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. 

ಈತನ ಸಹಚರನಾದ ಮತ್ತೊಬ್ಬ ಆರೋಪಿಯ ಸಹಾಯದಿಂದ ಸುಳ್ಳು ವಿಳಾಸದ ನಕಲಿ ಆಧಾರ್ ಕಾರ್ಡ್ ಮತದಾರರ ಗುರುತಿನಪತ್ರ, ಜನ್ಮದಿನಾಂಕ ದೃಢೀಕರಣಕ್ಕಾಗಿ  ಶಾಲಾ ವರ್ಗಾವಣಾ ಪ್ರಮಾಣಪತ್ರವನ್ನು ಕಂಪ್ಯೂಟರ್ ಮೂಲಕ ಸೃಷ್ಟಿಸಿ ಪಾಸ್‍ಪೋರ್ಟ್ ಕಚೇರಿಗೆ ಸಲ್ಲಿಸಿ ಪಾಸ್‍ಪೋರ್ಟ್ ಪಡೆಯಲಾಗಿದೆ ಎಂದು ಅವರು ವಿವರಿಸಿದರು.

ಆರೋಪಿಗಳಿಂದ ಸುಮಾರು 50 ಮಂದಿಗೆ ಪಾಸ್‍ಪೋರ್ಟ್‍ಗಳು, ಚಾಲನಾ ಪರವಾನಗಿಗಳನ್ನು ಅಕ್ರಮ ಮಾರ್ಗದಿಂದ ಮಾಡಿಸಿಕೊಟ್ಟಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಕೃಷ್ಣಕಾಂತ್ ಸೇರಿದಂತೆ ಪ್ರಮುಖರಿದ್ದರು.

Similar News