ಕೆಂಪೇಗೌಡ ಪ್ರತಿಮೆ ವೀಕ್ಷಣೆಗೆ ಯಾವುದೇ ಶುಲ್ಕ ಇಲ್ಲ: ಸಚಿವ ಅಶ್ವತ್ಥನಾರಾಯಣ ಸ್ಪಷ್ಟನೆ

Update: 2022-11-14 11:31 GMT

ಬೆಂಗಳೂರು, ನ. 14: ''ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ‘ಕೆಂಪೇಗೌಡ ಥೀಮ್ ಪಾರ್ಕ್’ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರತಿಮೆ ವೀಕ್ಷಣೆಗೆ ವ್ಯವಸ್ಥಿತ ಸೌಲಭ್ಯ ಮಾಡಲಾಗುವುದು. ಅಲ್ಲಿಯ ವರೆಗೆ ಇದು ತಾತ್ಕಾಲಿಕ ವ್ಯವಸ್ಥೆ ಆಗಿರುತ್ತದೆ. ಪ್ರತಿಮೆ ವೀಕ್ಷಣೆಗೆ ಯಾವುದೇ ಶುಲ್ಕ ಇರುವುದಿಲ್ಲ'' ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಖುದ್ದು ಸ್ಥಳ ಪರಿಶೀಲನೆ ನಡೆಸಿದ ಅವರು, ಉದ್ಘಾಟನೆಯಾದ ಬೆನ್ನಲ್ಲೇ ಆಕರ್ಷಕ ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ವೀಕ್ಷಿಸಲು ಹೆಚ್ಚಿನ ಜನರು ಬರುತ್ತಿದ್ದು, ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧಿಕಾರಿಗಳು ಮತ್ತು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಯ್ ದೀಪ್ ಹಾಜರಿದ್ದರು.

''ಸದ್ಯಕ್ಕೆ 23 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ  ಐಓಸಿ ಪೆಟ್ರೋಲ್ ಬಂಕ್ ಕಡೆಯಿಂದ ಪ್ರವಾಸಿಗರು ಪ್ರತಿಮೆಯನ್ನು ತಲುಪಿ ವೀಕ್ಷಿಸಲು ಅನುಕೂಲ ಮಾಡಿಕೊಡಬೇಕು. ಜೊತೆಗೆ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಗರಿಷ್ಠ 80 ವಾಹನಗಳಿಗೆ ಪಾಕಿರ್ಂಗ್ ಅವಕಾಶ ಕಲ್ಪಿಸಲಾಗುವುದು. ಈ ಅನುಕೂಲವು ವಾರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಪ್ರತಿಮೆ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನಗಳು ಗರಿಷ್ಠ ಅರ್ಧಗಂಟೆ ನಿಲ್ಲಿಸಲು ಅವಕಾಶ ನೀಡಲಾಗುವುದು'' ಎಂದು ಅವರು ಮಾಹಿತಿ ನೀಡಿದರು.

ಶುಕ್ರವಾರ ಪ್ರಧಾನಿ ಮೋದಿ 108 ಅಡಿ ಎತ್ತರದ ಈ ಕಂಚಿನ ಪ್ರತಿಮೆ ಉದ್ಘಾಟಿಸಿದ ನಂತರ ಮಧ್ಯರಾತ್ರಿ ಒಂದು ಗಂಟೆಯಾದರೂ ಸಹಸ್ರಾರು ಆಸಕ್ತರು ತಂಡೋಪತಂಡವಾಗಿ ಆಗಮಿಸುತ್ತಲೇ ಇದ್ದಾರೆ. ಬಂದವರಿಗೆ ನಿರಾಸೆ ಆಗಬಾರದು ಎನ್ನುವುದು ಸರಕಾರದ ಬಯಕೆಯಾಗಿದೆ. ಪ್ರತಿಮೆಯು ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸುವಂತೆ ಮಾಡಲು ರಾತ್ರಿ ವೇಳೆ ಬೆಳಕಿನ ಅಲಂಕಾರಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದು ಅಶ್ವತ್ಥ ನಾರಾಯಣ ಹೇಳಿದರು.

Similar News