ಆರೆಸ್ಸೆಸ್‍ಗಿಂತ ಮೂಲ ನಿವಾಸಿ ಪರಿವಾರ ಶಕ್ತಿಶಾಲಿ: ವಾಮನ್ ಮೇಶ್ರಾಮ್

Update: 2022-11-14 13:15 GMT

ಬೆಂಗಳೂರು, ನ.14: ದೇಶದಲ್ಲಿ ಸಂಘಪರಿವಾರ (RSS)ಕ್ಕಿಂತ ಮೂಲ ನಿವಾಸಿ ಪರಿವಾರ ಶಕ್ತಿಶಾಲಿ ಎಂಬುದು ಅ.6ರಂದು ನಾಗಪುರದಲ್ಲಿರುವ ಆರೆಸ್ಸೆಸ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ನಾವು ನಡೆಸಿದ ಹೋರಾಟದ ಬಳಿಕ ಎಲ್ಲರಿಗೂ ಗೊತ್ತಾಗಿದೆ ಎಂದು ಭಾರತ ಮುಕ್ತಿ ಮೋರ್ಚಾ ಹಾಗೂ ಬಹುಜನ ಮುಕ್ತಿ ಮೋರ್ಚಾ ಅಧ್ಯಕ್ಷ ವಾಮನ್ ಮೇಶ್ರಾಮ್ ಹೇಳಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆ ಸಭಾಂಗಣದಲ್ಲಿ ಭಾರತ ಮುಕ್ತಿ ಮೋರ್ಚಾ, ಬಹುಜನ ಮುಕ್ತಿ ಮೋರ್ಚಾ ಹಾಗೂ ಎಲ್ಲ ಸಹ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ನಾಗಪುರದಲ್ಲಿ ನಡೆಸಿದ ಆಂದೋಲನದಲ್ಲಿ ಅಂದು 2.50 ಲಕ್ಷ ಜನರು ಭಾಗಿಯಾಗಿದ್ದರು. ಈ ಪೈಕಿ 45 ಸಾವಿರ ಜನ ಬಂಧನಕ್ಕೊಳಗಾಗಿದ್ದರು. ಹರಿಯಾಣದಲ್ಲಿ ಗೂಂಡಾಗಳು ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದರು. ಅದನ್ನು ಖಂಡಿಸಿ ದಿಲ್ಲಿಯಲ್ಲಿ ಕಾರ್ಯಕ್ರಮ ಮಾಡಿ, ಆರೆಸ್ಸೆಸ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವ ಘೋಷಣೆ ಮಾಡಿದ್ದೆವು ಎಂದು ಅವರು ಹೇಳಿದರು.

ಆರೆಸ್ಸೆಸ್ ಕೇಂದ್ರ ಕಚೇರಿಯವರು ನಮ್ಮ ಹೋರಾಟಕ್ಕೆ ಹೆದರಿ, ಕೇಂದ್ರ ಸರಕಾರದ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಿಕೊಂಡರು. ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ, ನಮ್ಮ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರು. ಆದರೂ, ಲಕ್ಷಾಂತರ ಜನ ಅಂದು ಬೀದಿಗಿಳಿದಿದ್ದರು. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಎಂಟು ದಿನ ಮೊದಲೆ ಭೋಪಾಲ್‍ಗೆ ಓಡಿ ಹೋಗಿದ್ದರು ಎಂದು ವಾಮನ್ ಮೇಶ್ರಾಮ್ ವ್ಯಂಗ್ಯವಾಡಿದರು.

ಆರೆಸ್ಸೆಸ್ ಮತ್ತು ಮೂಲ ನಿವಾಸಿಗಳಿಗೆ ಪರಸ್ಪರ ಮುಖಾಮುಖಿಯಾಗಲು ಪೊಲೀಸರು ಅವಕಾಶ ಕೊಡಬೇಕು. ಶೇ.3.5ರಷ್ಟಿರುವ ಆರೆಸ್ಸೆಸ್‍ನವರಿಗೆ ಶೇ.85ರಷ್ಟಿರುವ ಮೂಲ ನಿವಾಸಿಗಳ ಜೊತೆ ಹೋರಾಟ ಮಾಡುವ ಶಕ್ತಿ ಇಲ್ಲ. ಅ.6ಕ್ಕಿಂತ ಮುಂಚೆ ಆರೆಸ್ಸೆಸ್‍ನವರು ಪ್ರತಿಯೊಂದಕ್ಕೂ ಹಿಂದು-ಮುಸ್ಲಿಮ್ ಎನ್ನುತ್ತಿದ್ದರು. ಆದರೆ, ಈಗ ಆ ಚರ್ಚೆಯನ್ನು ಅವರು ಕೈ ಬಿಟ್ಟಿದ್ದಾರೆ ಎಂದು ವಾಮನ್ ಮೇಶ್ರಾಮ್ ಹೇಳಿದರು.

ಬ್ರಾಹ್ಮಣರು, ಮುಸ್ಲಿಮರ ವಿರುದ್ಧ ಎಸ್ಸಿ, ಎಸ್ಟಿ, ಒಬಿಸಿಗಳನ್ನು ಬಳಸಿ ಗಲಭೆ ಮಾಡಿಸುತ್ತಾರೆ. ಆದರೆ, ಇದೇ ವರ್ಗದ ಜನರನ್ನು ನನ್ನ ವಿರುದ್ಧ ಹೋರಾಟ ಮಾಡಲು ಬಿಡಲ್ಲ. ನನ್ನ ಬಯಕೆ ಒಂದೆಡೆ ನಾನು ಮತ್ತೊಂದೆಡೆ ಬ್ರಾಹ್ಮಣರು ಇರಲಿ. ಸಾವಿರಾರು ವರ್ಷಗಳಿಂದ ಬ್ರಾಹ್ಮಣರು ಮಾಡಿಕೊಂಡು ಬಂದಿರುವ ಕುಟಿಲತೆ ನನಗೆ ಗೊತ್ತಿದೆ ಎಂದು ಅವರು ತಿಳಿಸಿದರು.

2030 ವೇಳೆಗೆ ದೇಶದ 6 ಲಕ್ಷ ಗ್ರಾಮಗಳಲ್ಲೂ ನಮ್ಮ ಸಂಘನೆ ಇರಬೆಕು. ಸುಮಾರು 15 ಕೋಟಿ ಜನರು ಸಂವಿಧಾನದ ರಕ್ಷಣೆಗಾಗಿ ಬೀದಿ ಇಳಿಯುತ್ತೇವೆ. ನಮ್ಮನ್ನು ತಡೆಯಲು ಪೊಲೀಸರ ಬಳಿ ಅಷ್ಟು ಗುಂಡುಗಳಿವೆಯೇ? ಗಾಂಧಿಜಿ 1 ಕೋಟಿ ಜನರನ್ನು ಬೀದಿಗಿಳಿಸಿದ್ದರಿಂದ ಬ್ರಿಟಿಷರು ಓಡಿ ಹೋದರು. ಬ್ರಿಟಿಷರಂತೆ ವಿದೇಶಿಗಳಾಗಿರುವ ಬ್ರಾಹ್ಮಣರು ಅದೇ ರೀತಿ ಆಡಳಿತವನ್ನು ಕೈ ಬಿಟ್ಟು ಹೋಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಆಂದೋಲನ ಜನಾಂದೋಲನವಾಗಿ ಪರಿವರ್ತನೆಯಾಗಲಿದೆ. ಆರೆಸ್ಸೆಸ್ ಪೋಷಿಸುತ್ತಿರುವವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಪ್ರಬಲ ಇಚ್ಛಾಶಕ್ತಿಯಿಂದ ಹೋರಾಟ ಮಾಡಬಹುದು. ಜೀವನದ ಲಕ್ಷ್ಯ ನಿರ್ಧಾರ ಮಾಡಿ ಹೋರಾಟಕ್ಕೆ ಮುಂದಾಗಿ ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ... ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ಸರಕಾರ ರದ್ದುಗೊಳಿಸಿದೆ: ನಳಿನ್ ಕುಮಾರ್ ಕಟೀಲ್

Similar News