ನ್ಯಾಯಾಲಯದಲ್ಲಿ ಸಂಸದರು, ಶಾಸಕರ 962 ಪ್ರಕರಣಗಳು ವಿಚಾರಣೆಗೆ ಬಾಕಿ: ಸುಪ್ರೀಂಕೋರ್ಟ್‌ಗೆ ಆ್ಯಮಿಕಸ್ ಕ್ಯೂರಿ ಮಾಹಿತಿ

Update: 2022-11-16 14:05 GMT

ಹೊಸದಿಲ್ಲಿ, ನ. 15: ಸಂಸದರು ಹಾಗೂ ಶಾಸಕರಿಗೆ ಸಂಬಂಧಿಸಿದ 962 ಪ್ರಕರಣಗಳು 16 ಉಚ್ಚ ನ್ಯಾಯಾಲಯಗಳಲ್ಲಿ ಐದಕ್ಕಿಂತಲೂ ಅಧಿಕ ವರ್ಷ   ವಿಚಾರಣೆಗೆ ಬಾಕಿ ಇದೆ ಎಂದು ಆ್ಯಮಿಕಸ್ ಕ್ಯೂರಿ ನ್ಯಾಯವಾದಿ ವಿಜಯ್ ಹನ್ಸಾರಿಯಾ ಅವರು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.  

ದೋಷಿ ಎಂದು ಪರಿಗಣಿತರಾದ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಅವರು ಕೋರಿದ್ದಾರೆ.  ಉತ್ತರಪ್ರದೇಶ, ರಾಜಸ್ಥಾನ, ಬಿಹಾರ್ ಹಾಗೂ ತೆಲಂಗಾಣದಂತಹ ದೊಡ್ಡ ರಾಜ್ಯಗಳ ಉಚ್ಚ ನ್ಯಾಯಾಲಯಗಳು ಪ್ರಕರಣಗಳು ಬಾಕಿ ಇರುವುದನ್ನು ಉಲ್ಲೇಖಿಸಿ ತಮ್ಮ ಅಫಿಡಾವಿಟ್ ಸಲ್ಲಿಸಿಲ್ಲ ಎಂದು ಹನ್ಸಾರಿಯ ಅವರು ತಿಳಿಸಿದರು. 

ಐದಕ್ಕಿಂತಲೂ ಅಧಿಕ ವರ್ಷಗಳು ಬಾಕಿ ಇರುವ ಪ್ರಕರಣಗಳ ಕುರಿತು ಮಾಹಿತಿ ನೀಡುವಂತೆ ಎಲ್ಲ ಉಚ್ಚ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಅಕ್ಟೋಬರ್ 10ರಂದು ಸೂಚಿಸಿತ್ತು. 

ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಕೋರಿ ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿತ್ತು. ವಿಜಯ ಅನ್ಸಾರಿ ಅವರು ತಮ್ಮ ಅಫಿಡವಿಟ್‌ನಲ್ಲಿ ಪ್ರಕರಣಗಳ ತುರ್ತು ವಿಲೇವಾರಿಗೆ ಕೆಲವು ನಿರ್ದೇಶನಗಳನ್ನು ಕೂಡ ನೀಡಿದ್ದಾರೆ.

Similar News