ಜ್ಞಾನದೊಂದಿಗೆ ವಿವೇಕ ಸೇರಿದರೆ ವಿದ್ಯೆ ಸಫಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಮಾಹೆ ವಿವಿಯ 30ನೇ ಘಟಿಕೋತ್ಸವ

Update: 2022-11-18 14:34 GMT

ಉಡುಪಿ, ನ.18: ವಿದ್ಯೆಯೆಂಬುದು ಕೇವಲ ಸೈದ್ಧಾಂತಿಕ ಹಾಗೂ ವ್ಯಾವಹಾರಿಕ ಜ್ಞಾನವಲ್ಲ. ವಿದ್ಯೆ ಎಂದರೆ ಜ್ಞಾನದೊಂದಿಗೆ ವಿವೇಕವನ್ನು ಬೆಳೆಸಿಕೊಳ್ಳುವುದಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಇಂದು ನಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ 30ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಿ ಘಟಿಕೋತ್ಸವ ಭಾಷಣ ಮಾಡಿದರು.

ವಿದ್ಯಾರ್ಥಿಯೊಬ್ಬ ಜ್ಞಾನದೊಂದಿಗೆ ವಿವೇಕವನ್ನು ಬೆಳೆಸಿಕೊಂಡರೆ ವಿದ್ಯೆ ಪರಿಪೂರ್ಣವೆನಿಸುತ್ತದೆ. ಜೀವನದಲ್ಲಿ ಕೇವಲ ಜ್ಞಾನವಿದ್ದರೆ ಸಾಲದು, ಅದನ್ನು ಹೇಳಿ ಅಳವಡಿಸಿಕೊಳ್ಳಬೇಕೆಂಬ ವಿವೇಕವನ್ನು ಹೊಂದಿರಬೇಕಾಗುತ್ತದೆ. ಹೀಗಾಗಿ ವಿವೇಕ ಮತ್ತು ಜ್ಞಾನ ಬದುಕಿನ ಅಂಗವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಶಿಕ್ಷಣದ ಮೂಲಕ ಜಗತ್ತನ್ನು ಉತ್ತಮಗೊಳಿಸಬಹುದು. ವಿದ್ಯೆ ಅಥವಾ ಶಿಕ್ಷಣ ಎಂಬುದು ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ. ಶಿಕ್ಷಣ ಬದುಕಿಗೆ ಬಲಿಷ್ಠ ಪಂಚಾಂಗ ವಿದ್ದಂತೆ. ಮನುಷ್ಯ ಜೀವನದಲ್ಲಿ ನಡತೆಗೆ ಮಹತ್ವದ ಸ್ಥಾನವಿದೆ. ಶಿಕ್ಷಣ ನಿಮಗೆ ಬದುಕಿನ ಮಾರ್ಗ ತೋರಿಸಿದರೆ, ಅದನ್ನು ಕ್ರಮಿಸಲು ಉತ್ತಮ ನಡತೆಯ ಅಗತ್ಯವಿದೆ ಎಂದರು.

ಇದೀಗ ಪದವೀಧರರಾಗಿ ಹೊರಬರುತ್ತಿರುವ ವಿದ್ಯಾರ್ಥಿಗಳು ಸಂಶೋಧನೆ,  ಹೊಸ ಕಲ್ಪನೆಗಳ ಸಾಕಾರ, ಹೊಸ ತಂತ್ರಜ್ಞಾನದ ಅಭಿವೃದ್ಧಿಗೆ ಒಲವು ಹೊಂದಿರಬೇಕು. ಅವರು ಕಂಪೆನಿಗಳು, ಸಂಶೋಧನಾ ಸಂಸ್ಥೆ ಹಾಗೂ ಸ್ಟಾರ್ಟ್‌ಅಪ್‌ನ್ನು ಪ್ರಾರಂಭಿಸಲು ಒತ್ತು ನೀಡಬೇಕು. ಈ ಮೂಲಕ ‘ಹೊಸ ಭಾರತ’ ಕಟ್ಟುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸಾಗಿಸಬೇಕು ಎಂದು ಸಲಹೆ ನೀಡಿದರು.

ಮಣಿಪಾಲದಲ್ಲಿ ಕಲಿತು ಪದವೀಧರರಾದ ಅನೇಕ ಮಂದಿ ವಿಶ್ವದ ದೊಡ್ಡ ದೊಡ್ಡ, ಪ್ರಮುಖ ಕಂಪೆನಿಗಳನ್ನು ಮುನ್ನಡೆಸುವ ಅರ್ಹತೆಯನ್ನು ಪಡೆಯಬಹುದಾದರೆ, ಯಾಕೆ ಇವರು ವಿಶ್ವದಲ್ಲೇ ಅಗ್ರಗಣ್ಯ ಕಂಪೆನಿಯನ್ನು ಭಾರತದಲ್ಲಿ ಪ್ರಾರಂಭಿಸಬಾರದು ಎಂದು ಪ್ರಶ್ನಿಸಿದ ರಾಜನಾಥ್ ಸಿಂಗ್, ಮೈಕ್ರೋಸಾಫ್ಟ್‌ನ ಸಿಇಓ ಸತ್ಯನ್ ನಾಡೆಲ್ಲರ ಉದಾಹರಣೆ ನೀಡಿ, ಮೈಕ್ರೋಸಾಫ್ಟ್‌ನಂಥ ಕಂಪೆನಿಯೊಂದನ್ನು ಭಾರತದಲ್ಲೇ ಹುಟ್ಟುಹಾಕುವಂತೆ ತಿಳಿಸಿದರು.

ಪುರಾಣ ಕಾಲದಿಂದಲೂ ಭಾರತ ಹೇಗೆ ಜ್ಞಾನದ ರಾಜಧಾನಿಯಾಗಿತ್ತೆಂಬುದನ್ನು ವಿವಿಧ ಉದಾಹರಣೆಗಳೊಂದಿಗೆ ವಿವರಿಸಿದ ಅವರು, ಶೂನ್ಯ ಎಂಬುದು ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಅದೇ ರೀತಿ ಪಶ್ಚಿಮದ ದೇಶಗಳು ಭೂಮಿ ಗುಂಡಗಿದೆ ಎಂಬುದನ್ನು ತಿಳಿಯುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಭಾರತದಲ್ಲಿ ಋಷಿಗಳು ಅದನ್ನು ಜಗತ್ತಿಗೆ ಸಾರಿದ್ದರು. ಪೈಥಾಗೋರಸ್ ಸಿದ್ಧಾಂತ ಬರುವುದಕ್ಕೆ 300 ವರ್ಷ ಪೂರ್ವದಲ್ಲಿ ಅದು ಭಾರತದಲ್ಲಿ ಪ್ರಚಲಿತವಿತ್ತು ಎಂದು ಅವರು ವಿವರಿಸಿದರು.

ಭಾರತ ಮತ್ತೆ ಜ್ಞಾನದ ಕೇಂದ್ರವಾಗಬೇಕೆಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಂಡಿದೆ. ದೇಶದ ಪ್ರಗತಿಗೆ ‘ಹೊಸ ಭಾರತ’ ಮುನ್ನುಡಿ ಬರೆಯಲಿದೆ ಎಂದು ರಕ್ಷಣಾ ಸಚಿವರು ನುಡಿದರು.

ನಾಸಿಕ್‌ನ ಎಂಯುಎಚ್‌ಎಸ್ ವಿವಿಯ ಕುಲಪತಿ ಲೆ.ಜ.(ಡಾ.) ಮಾಧುರಿ ಕಾಣಿಟ್ಕರ್ ಅವರು ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಾಹೆ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಘಟಿಕೋತ್ಸವದ ಪ್ರಾರಂಭವನ್ನು ಘೋಷಿಸಿದರು.

ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ.ರಂಜನ್ ಪೈ ಉಪಸ್ಥಿತರಿದ್ದರು. ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಮಾಹೆಯ ಸಂಕ್ಷಿಪ್ತ ಪಕ್ಷಿನೋಟ ನೀಡಿದರು.

ಮಂಗಳೂರಿನ ಪ್ರೊ. ವೈಸ್‌ಚಾನ್ಸಲರ್ ಡಾ.ದಿಲೀಪ್ ಜಿ.ನಾಯಕ್ ಅತಿಥಿ ಗಳನ್ನು ಸ್ವಾಗತಿಸಿದರೆ, ಮಣಿಪಾಲ ಕೆಎಂಸಿಯ ಡೀನ್ ಡಾ.ಶರತ್‌ ಕುಮಾರ್ ಹಾಗೂ ಬೆಂಗಳೂರಿನ ಡಾ.ಪ್ರಜ್ಞಾ ರಾವ್ ಅತಿಥಿಗಳನ್ನು ಪರಿಚಯಿಸಿದರು. ರಿಜಿಸ್ಟ್ರಾರ್ ಡಾ.ನಾರಾಯಣ್ ಸಭಾಹಿತ್ ವಂದಿಸಿ, ಡಾ.ಅನಿಲ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೆ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಫ್ಲಾನಿಂಗ್‌ನ ಆಕರ್ಷಕ ಹೊಸ ಕಟ್ಟಡವನ್ನು ಉದ್ಘಾಟಿಸಿದರು.

2047ಕ್ಕೆ ಭಾರತವನ್ನು ಆರ್ಥಿಕ ಬಲಾಢ್ಯ ದೇಶವಾಗಿಸುವ ಗುರಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವದಲ್ಲೇ ಬಲಿಷ್ಠ ದೇಶವನ್ನಾಗಿಸುವ ಹಲವು ಗುರಿಗಳನ್ನು ಹಾಕಿಕೊಂಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಭಾರತ, ವಿಶ್ವದ ಮೂರು ಆರ್ಥಿಕ ಬಲಾಢ್ಯ ದೇಶಗಳಲ್ಲಿ ಒಂದೆನಿಸಿಕೊಳ್ಳುವ ಗುರಿ ಹೊಂದಲಾಗಿದೆ. ಅಲ್ಲದೇ 2047ರೊಳಗೆ ಭಾರತವನ್ನು ಆರ್ಥಿಕತೆಯಲ್ಲಿ ವಿಶ್ವದ ಅತ್ಯಂತ ಬಲಾಢ್ಯ ದೇಶವಾಗಿರುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಆತಂಕವಾದದ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದ ರಕ್ಷಣಾ ಸಚಿವರು,  ಭಯೋತ್ಪಾದಕತೆ ವಿರುದ್ಧದ ಹೋರಾಟದಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿ ಯಲ್ಲಿದೆ. ಈ ವಿಷಯದಲ್ಲಿ ನಾವು ಯಾರನ್ನೂ ಕೆಣಕಲು ಹೋಗುವುದಿಲ್ಲ ಆದರೆ, ನಮ್ಮನ್ನು ಕೆಣಕಲು ಬರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.

ಚಿನ್ನದ ಪದಕ ವಿಜೇತರು

ಇಂದು ಮಾಹೆಯ ಐವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಡಾ.ಟಿ.ಎಂ.ಎ.ಪೈ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಕೆಎಂಸಿ ಮಣಿಪಾಲದ ಹಿಮಾಂಶು, ನರ್ಸಿಂಗ್ ಕಾಲೇಜಿನ ವಿನಿತಾ ರೋಸಾ ಮೊನಿಸ್, ಇನ್‌ಫಾರ್ಮೇಶನ್ ಸಾಯನ್ಸ್‌ನ ಸತೀಶ್ ನಾಯಕ್, ಎಂಐಟಿಯ ಶಾ ದಿಯಾ ಹೇಮಂತ ಕುಮಾರ್ ಹಾಗೂ ವಾಗ್ಷಾದ ಅಹನಾ ಭಂಬಾನಿ.

Similar News