ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ: ಮೊಕದ್ದಮೆಯಿಂದ ಸೌದಿ ಯುವರಾಜರಿಗೆ ವಿನಾಯಿತಿ; ಅಮೆರಿಕ ಶಿಫಾರಸು

Update: 2022-11-18 17:55 GMT

ವಾಷಿಂಗ್ಟನ್, ನ.18: ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಪ್ರಕರಣದ ಕಾನೂನು ಕ್ರಮದಿಂದ ಸೌದಿ ಅರೆಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮುಕ್ತರಾಗಿದ್ದಾರೆ ಎಂದು ಅಮೆರಿಕದ ಸರಕಾರ ಗುರುವಾರ ಶಿಫಾರಸು ಮಾಡಿದೆ. 

ಕಳೆದ ಸೆಪ್ಟಂಬರ್ನಲ್ಲಿ ಯುವರಾಜ ಮುಹಮ್ಮದ್ ರನ್ನು ಸೌದಿ ಅರೆಬಿಯಾದ ಪ್ರಧಾನಿಯಾಗಿ ನೇಮಕಗೊಳಿಸಲಾಗಿದೆ. ಅವರು ಸೌದಿ ಅರೆಬಿಯಾ ಸರಕಾರದ ಪ್ರಮುಖ ಸ್ಥಾನದಲ್ಲಿ ಇರುವುದರಿಂದ , ಅಮೆರಿಕದ ನ್ಯಾಯಾಲಯಗಳು  ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಇತರ ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ನೀಡುವ ವಿನಾಯಿತಿಗೆ ಅರ್ಹತೆ ಪಡೆಯುತ್ತಾರೆ ಎಂದು ನ್ಯಾಯವಾದಿಗಳು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಬೈಡನ್ ಸರಕಾರ ಕೊಲಂಬಿಯಾ ಜಿಲ್ಲೆಯ ಜಿಲ್ಲಾನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಯಲ್ಲಿ ‘ ಪ್ರತಿವಾದಿ ಮುಹಮ್ಮದ್ ಬಿನ್ ಸಲ್ಮಾನ್ , ಸರಕಾರವೊಂದರ ಮುಖ್ಯಸ್ಥರಾಗಿರುವುದರಿಂದ ಅವರು ಕಾನೂನು ಕ್ರಮದಿಂದ ವಿನಾಯಿತಿ ಪಡೆಯುತ್ತಾರೆ ’ ಎಂದು ಶಿಫಾರಸು ಮಾಡಲಾಗಿದೆ. 
ಆದರೆ, ಪ್ರಸ್ತುತ ಮೊಕದ್ದಮೆಯ ಅರ್ಹತೆಯ ಬಗ್ಗೆ ವಿದೇಶಾಂಗ ಇಲಾಖೆ ಯಾವುದೇ ನಿಲುವು ಹೊಂದಿಲ್ಲ ಮತ್ತು ಖಶೋಗಿಯ ಘೋರ ಹತ್ಯೆಗೆ ತನ್ನ ನಿಸ್ಸಂದಿಗ್ಧವಾದ ಖಂಡನೆಯನ್ನು ಪುನರುಚ್ಚರಿಸುತ್ತದೆ ಎಂದು ಸರಕಾರ ಹೇಳಿದೆ. 

ಈ ಮಧ್ಯೆ, ಅಮೆರಿಕ ಸರಕಾರದ ಶಿಫಾರಸಿನ ಬಗ್ಗೆ ಮೊಕದ್ದಮೆ ದಾಖಲಿಸಿರುವ ಖಶೋಗಿಯ ಗೆಳತಿ ಹ್ಯಾಟಿಸ್ ಕೆಂಗಿರ್ ಸೇರಿದಂತೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಜಮಾಲ್ ಇವತ್ತು ಮತ್ತೊಮ್ಮೆ ಮೃತಪಟ್ಟರು ಎಂದು ಕೆಂಗಿರ್ ಟ್ವೀಟ್ ಮಾಡಿದ್ದಾರೆ. 
ಸೌದಿ ಪ್ರಧಾನಿಗೆ ವಿನಾಯಿತಿ ನೀಡುವ ಮೂಲಕ ಬೈಡನ್ ಸರಕಾರ ಅವರನ್ನು ಹತ್ಯೆಯ ಹೊಣೆಗಾರಿಕೆಯಿಂದ ಮುಕ್ತಗೊಳಿಸಲು ಹೊರಟಿದೆ ಎಂದು ಅಮೆರಿಕ ಮೂಲದ ಎನ್ಜಿಒ  ‘ಡೆಮೊಕ್ರಸಿ ಫಾರ್ ದಿ ಅರಬ್ ವರ್ಲ್ಡ್ ನೌ (ಡಾನ್)ನ ಕಾರ್ಯನಿರ್ವಾಹಕ  ನಿರ್ದೇಶಕಿ ಸಾರಾ ಲೀಹ್ ವಿಸ್ಟನ್ ಟೀಕಿಸಿದ್ದಾರೆ. 

Similar News