28 ಕ್ಷೇತ್ರಗಳ ಚುನಾವಣಾಧಿಕಾರಿಗಳ ವಿರುದ್ಧವೂ ಎಫ್‍ಐಆರ್ ದಾಖಲಿಸಬೇಕು: ಡಿ.ಕೆ.ಶಿವಕುಮಾರ್ ಆಗ್ರಹ

ಮತದಾರರ ಮಾಹಿತಿ ಕದ್ದ ಆರೋಪ ಪ್ರಕರಣ

Update: 2022-11-21 12:43 GMT

ಬೆಂಗಳೂರು, ನ. 21: ‘ಮತದಾರರ ಮಾಹಿತಿ ಕದ್ದ ಆರೋಪ ಪ್ರಕರಣ ಸಂಬಂಧ ಇದರಲ್ಲಿ ಭಾಗಿಯಾಗಿರುವ ಶಾಸಕರು, ಸಚಿವರು ಹಾಗೂ ನಗರದ 28 ಕ್ಷೇತ್ರಗಳ ಚುನಾವಣಾಧಿಕಾರಿಗಳ ವಿರುದ್ಧ ಕೂಡಲೇ ಎಫ್‍ಐಆರ್ ದಾಖಲಾಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸೋಮವಾರ ಇಲ್ಲಿನ ಸದಾಶಿವನಗರದಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾಳೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ಭೇಟಿಗೆ ಕಾಲಾವಕಾಶ ಕೇಳಿದ್ದೇವೆ. ಮತಪಟ್ಟಿ ಹಗರಣ ಸಂಬಂಧ ಪೊಲೀಸ್ ಅಧಿಕಾರಿಗಳು ಯಾವ ರೀತಿ ವಿಚಾರಣೆ ಮಾಡುತ್ತಾರೆಂದು ಕಾದು ನೋಡುತ್ತಿದ್ದೇವೆ’ ಎಂದು ಹೇಳಿದರು. 

‘ನಮ್ಮ ಬಳಿ ದಾಖಲೆಗಳು ಇವೆ. ನಮಗೆ ಮೇಲಿನಿಂದ ಆದೇಶ ಬಂದ ಹಿನ್ನೆಲೆಯಲ್ಲಿ ನಾವು ಈ ಕೆಲಸ ಮಾಡಿದ್ದೇವೆಂದು ಚುನಾವಣಾಧಿಕಾರಿಗಳೇ ಒಪ್ಪಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಅಕ್ರಮಕ್ಕೆ ಆದೇಶ ಕೊಟ್ಟ ಮೇಲಿನವರು ಯಾರು? ಕೆಳಮಟ್ಟದಲ್ಲಿರುವ ಒಂದಿಬ್ಬರನ್ನು ಬಂಧಿಸುವುದರಿಂದ ಪ್ರಕರಣ ಇತ್ಯರ್ಥವಾದಂತಲ್ಲ. ಯಾರು ಪ್ರಕರಣದ ರೂವಾರಿಗಳಾಗಿದ್ದಾರೋ, ಯಾರು ಕಿಂಗ್‍ಪಿನ್ ಗಳಿದ್ದಾರೋ ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಶಿವಕುಮಾರ್ ಒತ್ತಾಯಿಸಿದರು.

‘ಮಲ್ಲೇಶ್ವರಂ ಮತದಾರರ ಪಟ್ಟಿ ಬದಲಾವಣೆ ಸಂಬಂಧ ನಾನು ಇಲ್ಲಿ ಮಾತನಾಡುವುದಿಲ್ಲ. ಈ ಪ್ರಕರಣ ಮುಚ್ಚಿಹಾಕಲು ಪೊಲೀಸ್ ಅಧಿಕಾರಿಗಳು ಹೇಗೆ ಪ್ರಯತ್ನಿಸುತ್ತಿದ್ದಾರೆಂದು ನೋಡುತಿದ್ದೇವೆ ಈ ಹಿಂದೆ ಅತ್ಯಾಚಾರ ಪ್ರಕರಣ, ಶೇ.40ರಷ್ಟು ಕಮಿಷನ್ ಪ್ರಕರಣದಲ್ಲಿ ಸಿಎಂ ಹಾಗೂ ಬಿಎಸ್‍ವೈ ಕ್ಲೀನ್‍ಚಿಟ್ ನೀಡಿದ್ದರು. ಅದೇ ರೀತಿ ‘ಬಿ’ ರಿಪೋರ್ಟ್ ಬರೆದಿದ್ದಾರೆ. ಈ ಪ್ರಕರಣದಲ್ಲೂ ಹಾಗೆ ಮಾಡುವ ಅನುಮಾನವಿದೆ’ ಎಂದು ಸಂಶಯ ವ್ಯಕ್ತಪಡಿಸಿದರು.

‘ಇದೀಗ ಕಾಂಗ್ರೆಸ್ ಮೇಲೆ ತಪ್ಪು ಹೊರಿಸಲು ಪ್ರಯತ್ನಿಸುತ್ತಿದ್ದಾರೆ. 2013ರಿಂದ ಈ ಚಿಲುಮೆ ವ್ಯವಹಾರ ತನಿಖೆ ಮಾಡಿಸಲು ಮುಂದಾಗಿರುವ ಸಿಎಂ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ನಾವು ಮತದಾರರ ಮಾಹಿತಿ ದುರ್ಬಳಕೆ ಮಾಡಿಕೊಂಡಿದ್ದರೆ ನಮಗೂ ಶಿಕ್ಷೆ ಆಗಲಿ. ಬಿಜೆಪಿ ಸರಕಾರ ಮತದಾರರ ಮಾಹಿತಿ ಪಡೆದು ಅದರ ದುರ್ಬಳಕೆ ಮಾಡಿಕೊಂಡಿದೆ. ಮತ ಮತ್ತು ಮತದಾರರನ್ನೆ ಮಾರಾಟ ಮಾಡಲು ಮುಂದಾಗಿದೆ. ಆ ಮೂಲಕ ಭ್ರಷ್ಟಾಚಾರ ಮಾಡಲಾಗುತ್ತಿದೆ. 

ಕಾಂಗ್ರೆಸ್‍ಗೆ ಮತ ಹಾಕುವ ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ಪರಿಶಿಷ್ಟರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮತಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ಒಬ್ಬರು, ಇಬ್ಬರು ಭಾಗಿಯಾಗಿಲ್ಲ. ಅನೇಕರು ಇದ್ದಾರೆ. ನಾವು ಇದರ ಭಾಗವಾಗಿದ್ದ ಹುಡುಗರ ಜತೆ ಮಾತನಾಡುತ್ತಿದ್ದೇವೆ. ಈ ಹಗರಣದಲ್ಲಿ ಎಷ್ಟು ಹಣ ಕಲೆ ಹಾಕಲಾಗಿದೆ ಎಂದು ಗೊತ್ತಿದೆ’ ಎಂದು ಅವರು ಹೇಳಿದರು.

‘ಪೊಲೀಸರು ಹೇಗೆ ತನಿಖೆ ಮಾಡುತ್ತಾರೆ, ಈ ಪ್ರಕರಣದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಧ್ಯಪ್ರವೇಶ ಮಾಡುತ್ತಾರೆಂದು ಕಾದು ನೋಡುತ್ತೇವೆ. ಅದರ ಆಧಾರದ ಮೇಲೆ ನಾವು ಮುಂದಿನ ಹೆಜ್ಜೆ ತೀರ್ಮಾನಿಸುತ್ತೇವೆ. ಈ ಪ್ರಕರಣದಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿರುವ ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಅವರು ನುಡಿದರು.

ಇದನ್ನೂ ಓದಿ: ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ನನಗೆ, ಸಿದ್ದರಾಮಯ್ಯಗೆ ಇಲ್ಲ: ಡಿಕೆಶಿ ಸ್ಪಷ್ಟನೆ

Similar News