ಬಿಬಿಎಂಪಿ, ಬಿಡಿಎ ಆಸ್ತಿಗಳು ಜನ ಸೇವೆಗೆ ಬಳಕೆಯಾಗಬೇಕು: ಮುಖ್ಯಮಂತ್ರಿ ಬೊಮ್ಮಾಯಿ

Update: 2022-11-21 14:07 GMT

ಬೆಂಗಳೂರು, ನ. 21: ‘ಬಿಬಿಎಂಪಿ ಹಾಗೂ ಬಿಡಿಎ ಆಸ್ತಿಗಳು ಜನರ ಸೇವೆಗೆ ಬಳಕೆಯಾಗಬೇಕು. ಸರಕಾರದ ಆಸ್ತಿಗಳಾದ ವಾಣಿಜ್ಯ ಸಂಕೀರ್ಣಗಳು ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಿರಿಸದೇ, ಸರಕಾರಿ ಕಚೇರಿಗಳು ಹಾಗೂ ಸಾರ್ವಜನಿಕರ ಸೇವೆಗೆ ಮೀಸಲಿಡುವುದು ಮುಖ್ಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕೆಆರ್‍ಐಡಿಎಲ್ ವತಿಯಿಂದ ನಿರ್ಮಿಸುತ್ತಿರುವ ವಾಣಿಜ್ಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರು ಅತ್ಯಂತ  ವೇಗವಾಗಿ ಬೆಳೆಯುತ್ತಿರುವ ನಗರ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ, ಇಂಜಿನಿಯರ್ಸ್, ಜಂಟಿ ಆಯುಕ್ತರನ್ನೂ ನೇಮಿಸಲಾಗುತ್ತಿದೆ. ಆದರೆ, ಈ ಅಧಿಕಾರಿಗಳಿಗೆ ಸ್ಥಳದ ಅಭಾವದಿಂದ ಮುಖ್ಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ’ ಎಂದರು.

‘ಪ್ರತಿವರ್ಷ ಕಚೇರಿಗಳ ನಿರ್ಮಾಣಕ್ಕೆ ಸರಕಾರ ಹಣ ವ್ಯಯಿಸುತ್ತದೆ. ಕೆಲವೊಮ್ಮೆ ಸ್ಥಳದ ಅಭಾವ ವಿರುತ್ತದೆ. ಸರಕಾರದ ಅಧೀನದ  ಕೆಆರ್‍ಡಿಎಲ್ ಮುಖಾಂತರ ಶಂಕುಸ್ಥಾಪನೆಗೊಂಡಿರುವ ಸಂಕೀರ್ಣ ಮಾದರಿಯಲ್ಲಿಯೆ ವಾಣಿಜ್ಯ ಚಟುವಟಿಕೆ ಹಾಗೂ ಸರಕಾರಿ ಕಚೇರಿಗಳು ಕಾರ್ಯ ನಿರ್ವಹಿಸಬಹುದಾದ ರಾಜ್ಯದ ಹಲವೆಡೆ ಕಟ್ಟಡ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಗುವುದು. ವಿಜಯಪುರ, ಮಂಗಳೂರಿನಲ್ಲಿ ಇಂತಹುದೇ ಯೋಜನೆಯನ್ನು ಈಗಾಗಲೇ ಕೈಗೆತ್ತಿಗಕೊಂಡಿದ್ದು, ಈ ಯೋಜನೆ ಕೆಆರ್‍ಡಿಎಲ್ ಸಂಸ್ಥೆ ಉಳಿದ ಜಿಲ್ಲಾ ಕೇಂದ್ರಗಳಲ್ಲಿಯೂ ನಿರ್ಮಿಸಬೇಕು’ ಎಂದರು.

‘ಕೆಆರ್‍ಐಡಿಎಲ್ ಸಂಸ್ಥೆ ತನ್ನದೆ ಆದ ಆಸ್ತಿಗಳ ಸೃಜನೆ ಹಾಗೂ ತನ್ನದೇ ಆದ ಜವಾಬ್ದಾರಿ ನಿರ್ವಹಿಸುತ್ತಿದೆ. ವಾಣಿಜ್ಯ ಸಂಕೀರ್ಣವೂ ಸರಕಾರದ ಆಸ್ತಿಯಾಗುತ್ತದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ, ಪ್ರತಿವರ್ಷವೂ ಸರಕಾರದ ಆಸ್ತಿಯಿಂದ ಆದಾಯ ಪಡೆಯಬಹುದಾಗಿದ್ದು, 91ಕೋಟಿ ರೂ.ವೆಚ್ಚದಲ್ಲಿ 9 ಮಹಡಿಗಳ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈ ಭಾಗದ ಜನರಿಗೆ ಬಹಳ ಅವಶ್ಯಕತೆಯಿತ್ತು. ಸರಕಾರಿ ಆಸ್ತಿ ಖಾಸಗಿಯವರಿಗೆ ವಹಿಸಿಕೊಡಲಾಗುತ್ತದೆ. ಖಾಸಗಿ ಸಹಭಾಗಿತ್ವದಲ್ಲಿ ಇಂತಹ ಕಟ್ಟಡಗಳನ್ನು ನಿರ್ಮಿಸಿದರೆ ಅನುಕೂಲವಾಗಲಿದೆ ಎಂದರು.

12 ಹೈಡೆನ್ಸಿಟಿ ರಸ್ತೆ ನಿರ್ಮಾಣ: ದಿಲ್ಲಿಯಂತೆ ಬೆಂಗಳೂರಿಗೂ ದೊಡ್ಡಸಂಖ್ಯೆಯಲ್ಲಿ ವಿದೇಶಿಯರು ಭೇಟಿ ನೀಡುತ್ತಿದ್ದು, ನಿತ್ಯ 5 ಸಾವಿರಕ್ಕಿಂತ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತವೆ. ನಗರದಲ್ಲಿ 1.30 ಕೋಟಿ ಜನಸಂಖ್ಯೆಯಿದ್ದು, 1.56ಕೋಟಿ ವಾಹನ ಸಂಖ್ಯೆಯಿದೆ. ನಗರಗಳಲ್ಲಿ ಜನದಟ್ಟಣೆ ಸಾಮಾನ್ಯ. ಈ ಸವಾಲನ್ನು ಎದುರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 12 ಹೈಡೆನ್ಸಿಟಿ ರಸ್ತೆ ನಿರ್ಮಾಣಕ್ಕೆ 280ಕೋಟಿ ರೂ.ಗೆ ಮಂಜೂರಾತಿ ನೀಡಿದ್ದು, ಆಪೈಕಿ ಪ್ರಮುಖ ನಗರಗಳನ್ನು ಬೆಂಗಳೂರಿಗೆ ಸಂಪರ್ಕಿಸುವ ರಸ್ತೆಗಳಾಗಿವೆ. ನಗರೋತ್ಥಾನ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ.ಗಳ ವಿವಿಧ ಯೋಜನೆಗಳಡಿ ನೀಡಲಾಗಿದೆ ಎಂದರು.

ದಟ್ಟಣೆಯ ಪ್ರದೇಶಗಳಲ್ಲಿ ಹೊಸ ಠಾಣೆಗಳ ಸ್ಥಾಪನೆ: ‘ನಗರದಲ್ಲಿ ವಾಹನ ದಟ್ಟಣೆಯ ನಿರ್ವಹಣೆಗಾಗಿ ವಿಶೇಷ ಆಯುಕ್ತರನ್ನು ನೇಮಿಸಲಾಗಿದೆ. ವಿಶೇಷ ಸಾರಿಗೆ ಆಯುಕ್ತರ ಕಚೇರಿಯನ್ನು ಹಾಗೂ ನೂತನ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು. ಹೆಚ್ಚಿನ ವಾಹನ ಸಂದಣಿಯಿರುವ ಪ್ರದೇಶಗಳಿಗೆ ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ನಿರ್ಮಾಣಕ್ಕೆ ಅನುಮೋದನೆ ಪಡೆಯಲು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಸಂಕಷ್ಟಗಳಿಗೆ ಸ್ಪಂದಿಸುವ ನಾಯಕ: ಸತೀಶ್ ರೆಡ್ಡಿ ಜನಪ್ರಿಯ ಶಾಸಕರು ಮಾತ್ರವಲ್ಲ ಜನೋಪಯೋಗಿ ಶಾಸಕರಾಗಿದ್ದಾರೆ. ಸಮಸ್ಯೆಗಳನ್ನು ಅರಿತು, ಪರಿಹಾರವನ್ನು ನೀಡಿ, ಜನರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. 80ಹಾಸಿಗೆ ಸಾಮರ್ಥ್ಯ ಆಸ್ಪತ್ರೆಯನ್ನು ಈ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಾಯಕರಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Similar News