ಕುಂದಾಪುರದಲ್ಲಿ ಕಾರ್ಟೂನ್ ಹಬ್ಬ-2022 ಉದ್ಘಾಟನೆ

Update: 2022-11-23 15:11 GMT

ಕುಂದಾಪುರ, ನ. 23: ನಮ್ಮ ಜೀವನದಲ್ಲಿನ ಸಮಸ್ಯೆ, ಸಂಕಷ್ಟ, ಬೇಸರ, ದುಖ: ಸೇರಿದಂತೆ ಯಾವುದೇ ರೀತಿಯ ನೋವನ್ನು ತಣಿಸಿ ನಗುವನ್ನು ತರಿಸುವ ಶಕ್ತಿ ವ್ಯಂಗ್ಯಚಿತ್ರಗಳಿಗೆ ಇವೆ ಎಂದು ಹೊಂಬಾಳೆ ಫಿಲ್ಮ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ ನೇತೃತ್ವದ ಕಾರ್ಟೂನ್ ಬಳಗದ ವತಿಯಿಂದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಆಯೋಜಿಸಲಾದ ಕಾರ್ಟೂನ್ ಹಬ್ಬ-2022 ವನ್ನು ಕ್ಯಾರಿಕೇಚರ್ ಬಿಡಿಸುವ ಮೂಲಕ ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸತೀಶ್ ಆಚಾರ್ಯ ಅವರ ‘ಗೋ ಕೊರೋನಾ ಗೋ’ ಪುಸ್ತಕದ 2ನೇ ಆವೃತ್ತಿ ಬಿಡುಗಡೆಗೊಳಿಸಿದ ಹಿರಿಯ ವ್ಯಂಗ್ಯಚಿತ್ರಗಾರ ಜೇಮ್ಸ್ ವಾಜ್ ಮಾತನಾಡಿ,  ಗೋ ಕೊರೋನಾ ಗೋ ಪ್ರಥಮ ಸಂಚಿಕೆ ಕೊರೋನಕ್ಕೆ ಮೊದಲ ಡೋಸ್ ನೀಡಿದರೆ, ಎರಡನೇ ಆವೃತ್ತಿ ಸಣ್ಣ ಸಣ್ಣ ವೈರಸ್‌ಗಳನ್ನು ಓಡಿಸಿದೆ. ಈ ಎರಡು ಆವೃತ್ತಿಗಳು ವ್ಯಂಗ್ಯ ಚಿತ್ರಕಾರರ ವೃತ್ತಿ ಬದುಕಿಗೆ ಒಳ್ಳೆಯ ಕೈಪಿಡಿಯಾಗಿದೆ ಎಂದು ತಿಳಿಸಿದರು.

ಬರಹಗಾರ ಶಂಕರ ಕೆಂಚನೂರು ಮಾತನಾಡಿ, ಕಾರ್ಟೂನ್‌ಗಳು ಸತ್ಯವನ್ನು ತಮಾಷೆಯಾಗಿ ಹೇಳುವುದರಿಂದ ಮನ ಮುಟ್ಟುತ್ತವೆ. ಸಮಾಜಕ್ಕೆ ಕಟು ಸತ್ಯವನ್ನು ನೀಡುವ ಕೆಲಸವನ್ನು ಕಾರ್ಟೂನ್‌ಗಳು ಮಾಡುತ್ತಿವೆ. ವ್ಯಂಗ್ಯ ಚಿತ್ರಗಳಲ್ಲಿನ ಮೊನಚುಗಳಿಂದಾಗಿ ಮಾಧ್ಯಮಗಳಲ್ಲಿ ಅವಕಾಶ ಕಡಿಮೆಯಾಗುತ್ತಿದ್ದರೂ, ಸಾಮಾಜಿಕ ಜಾಲತಾಣ ಗಳ ಮೂಲಕ ವೇದಿಕೆ ದೊರಕುತಿತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎಂ.ದಿನೇಶ್ ಹೆಗ್ಡೆ ಮಾತನಾಡಿ, ಪ್ರಜಾಪ್ರಭುತ್ವದ ಬೆಳವಣಿಗೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದ ಹಾಗೂ ನೀಡುತ್ತಿರುವ ಮಾಧ್ಯಮಗಳಲ್ಲಿ ರೇಖೆಗಳ ಮೂಲಕ ಜನರಿಗೆ ಅಗತ್ಯ ಮಾಹಿತಿಯನ್ನು ಬೇಗನೆ ಹಾಗೂ ನೇರವಾಗಿ ನೀಡುವ ಕಾರ್ಯಗಳು ವ್ಯಂಗ್ಯ ಚಿತ್ರಗಳಿಂದ ಆಗುತ್ತಿದೆ. ದೇಶದ ವರ್ತಮಾನದ ಆಗು-ಹೋಗುಗಳನ್ನು ವಿಭಿನ್ನ ಆಯಾಮಗಳಲ್ಲಿ ಅಧ್ಯಯನ ಮಾಡಿ, ವಿಮರ್ಶೆ ಮಾಡಿ, ಜನರ ಮುಂದಿಡುವ ಕೆಲಸಗಳು ವ್ಯಂಗ್ಯಚಿತ್ರಕಾರರಿಂದ ಆಗುತ್ತಿದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ್ ಎ.ಪಾಯಸ್, ಚಲನಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ವ್ಯಂಗ್ಯ ಚಿತ್ರಕಾರರಾದ ರಾಮಕೃಷ್ಣ ಹೇರ್ಳೆ, ಚಂದ್ರಶೇಖರ ಶೆಟ್ಟಿ, ಕೇಶವ್ ಸಸಿಹಿತ್ಲು ಉಪಸ್ಥಿತರಿದ್ದರು. ಕಾರ್ಟೂನ್ ಬಳಗದ ಸತೀಶ್ ಆಚಾರ್ಯ ಸ್ವಾಗತಿಸಿದರು. ಉಪನ್ಯಾಸಕಿ ಪ್ರೀಯಾಂಕ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು.

Similar News