ದಿಲ್ಲಿ ಏಮ್ಸ್‌ನ ಸರ್ವರ್‌ಗೆ ರ್ಯಾನ್ಸಮ್‌ವೇರ್ ದಾಳಿ : ರೋಗಿಗಳ ಸೇವೆಗಳಿಗೆ ಅಡ್ಡಿ

Update: 2022-11-24 15:43 GMT

ಹೊಸದಿಲ್ಲಿ, ನ. 24: ದಿಲ್ಲಿ ಏಮ್ಸ್‌(Delhi AIIMS)ನ ಸರ್ವರ್ ರ್ಯಾನ್ಸಮ್‌ವೇರ್(Server Ransomware) ದಾಳಿಗೊಳಗಾದ ಹಿನ್ನೆಲೆಯಲ್ಲಿ ರೋಗಿಗಳಿಗೆ ನೀಡುವ ಹಲವು ಸೇವೆಗಳಿಗೆ ಅಡ್ಡಿ ಉಂಟಾಗಿದೆ. ಇದು ರ್ಯಾನ್ಸಮ್‌ವೇರ್ ದಾಳಿಯ ಘಟನೆ. ಆನ್‌ಲೈನ್ ಸೇವೆಗಳು ಮತ್ತೆ ಲಭ್ಯವಾಗಲು ಹಣ ನೀಡುವಂತೆ ಹ್ಯಾಕರ್‌ಗಳು ಬೇಡಿಕೆ ಇರಿಸಿದ್ದಾರೆ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರ ಹೇಳಿದೆ.

‘‘ಇಂದು (ಬುಧವಾರ) ರಾಷ್ಟ್ರೀಯ ಮಾಹಿತಿ ಕೇಂದ್ರದ ಆಸ್ಪತ್ರೆಯ ಸರ್ವರ್ ಅನ್ನು ದಿಲ್ಲಿಯ ಏಮ್ಸ್ ಬಳುಸುತ್ತಿದೆ.ಸ್ಮಾರ್ಟ್ ಲ್ಯಾಬ್, ಬಿಲ್ಲಿಂಗ್, ವರದಿ ರಚನೆ ಸೇರಿದಂತೆ ಒಳ ರೋಗಿ ಹಾಗೂ ಹೊರ ರೋಗಿಗಳಿಗೆ ಸಂಬಂಧಿಸಿದ ಡಿಜಿಟಲ್ ಆಸ್ಪತ್ರೆ ಸೇವೆಗಳಿಗೆ ಇದರಿಂದ ಅಡ್ಡಿ ಉಂಟಾಗಿದೆ’’ ಎಂದು ಏಮ್ಸ್ ಬುಧವಾರ ತಿಳಿಸಿದೆ.

 ಡಿಜಿಟಲ್ ಸೇವೆಗಳನ್ನು ಮರು ಸ್ಥಾಪಿಸಲು ಏಮ್ಸ್ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್)ನ ನೆರವು ಕೋರಿದೆ. ಸೈಬರ್ ಭದ್ರತೆಗೆ ಬೆದರಿಕೆ ಒಡ್ಡುವುದನ್ನು ನಿರ್ವಹಿಸುವ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ನೋಡೆಲ್ ಏಜೆನ್ಸಿ ಇದಾಗಿದೆ.

ದಿಲ್ಲಿ ಏಮ್ಸ್ ಕಳೆದ ಅಕ್ಟೋಬರ್‌ನಲ್ಲಿ 2023 ಜನವರಿ 1ರಿಂದ ತನ್ನ ಕಾರ್ಯಾಚರಣೆ ಕಾಗದ ರಹಿತವಾಗಲಿದೆ ಎಂದು ಘೋಷಿಸಿತ್ತು. ಇದಕ್ಕೆ ಸಂಬಂಧಿಸಿ ಎಲ್ಲ ವಿಭಾಗದ ಮುಖ್ಯಸ್ಥರು, ಕೇಂದ್ರದ ಮುಖ್ಯಸ್ಥರು ಹಾಗೂ ನೋಡೆಲ್ ಅಧಿಕಾರಿಗಳಿಗೆ ಏಮ್ಸ್ ಮುಖ್ಯಸ್ಥ ಎಂ. ಶ್ರೀನಿವಾಸ (M. Srinivas)ಜ್ಞಾಪನಾ ಪತ್ರ ನೀಡಿದ್ದರು.

Similar News