ಅಹೋ ರಾತ್ರಿ ಧರಣಿ ನಿರತ ಕಬ್ಬು ಬೆಳೆಗಾರ ರೈತರಿಂದ ವಿಧಾನಸೌಧದ ಕಡೆಗೆ ಉರುಳುಸೇವೆ

Update: 2022-11-24 17:34 GMT

ಬೆಂಗಳೂರು, ನ.24: ಕಬ್ಬಿನ ಎಫ್‍ಆರ್‍ಪಿ ಹೆಚ್ಚುವರಿ ದರ ನಿಗದಿಗೆ ಒತ್ತಾಯಿಸಿ, ಕಬ್ಬು ಬೆಳೆಗಾರ ರೈತರ ಅಹೋ ರಾತ್ರಿ ಧರಣಿಯು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಮುಂದುವರಿದಿದ್ದು, ಧರಣಿಯ ಮೂರನೆ ದಿನ ಉರುಳು ಸೇವೆ ಆರಂಭಿಸಿ ವಿಧಾನಸೌಧದ ಕಡೆಗೆ ಉರುಳುತ್ತಾ ಹೋಗುವ ಮೂಲಕ ಪ್ರತಿಭಟನೆ ನಡೆಸಿದರು. ಉರುಳು ಸೇವೆಗೆ ರಸ್ತೆ ಮಧ್ಯದಲ್ಲಿ ತಡೆ ಹಾಕಿದ ಪೊಲೀಸರು, ರೈತರನ್ನು ಸಮಾಧಾನಪಡಿಸಿದರು.

ಕೇಂದ್ರ ಸರಕಾರದ ಸಕ್ಕರೆ ನಿಯಂತ್ರಣ ಕಾಯ್ದೆ 1966 ಪ್ರಕಾರ ಕಬ್ಬು ಪೂರೈಕೆ ಮಾಡಿದ ರೈತರಿಗೆ 14 ದಿನದಲ್ಲಿ ಹಣ ಪಾವತಿಸಬೇಕು. ಹಾಗೊಂದು ಬಾರಿ ವಿಳಂಬವಾದರೇ ಶೇ.15 ಬಡ್ಡಿ ಸೇರಿಸಿ ರೈತರಿಗೆ ಹಣ ಪಾವತಿಸಬೇಕೆಂಬ ಕಾನೂನು ಜಾರಿಯಲ್ಲಿದೆ. ಕಾನೂನು ಜಾರಿಯಲ್ಲಿದ್ದರೂ 2-3 ತಿಂಗಳ ತನಕ ಹಣ ಪಾವತಿಸದೆ ಕಾರ್ಖಾನೆಗಳು ವಿಳಂಬ ಮಾಡುತ್ತವೆ. ಆದರೂ ಅವುಗಳ ವಿರುದ್ಧ ಸರಕಾರಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಪ್ರಶ್ನಿಸಿದರು.  

ದೇಶದ ಜನರಿಗೆ ಕಬ್ಬು ಬೆಳೆದು ಸಿಹಿ ನೀಡುವ ರೈತ, ರಸ್ತೆಯಲ್ಲಿ ಮಳೆ ಚಳಿಯಲ್ಲಿ ಮಲಗಿ ಕಹಿ ಅನುಭವಿಸಬೇಕೆ, ಇದು ಪ್ರಜಾ ಸರಕಾರಕ್ಕೆ ಶೋಭೆ ತರುತ್ತದೆಯೇ ಎನ್ನುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಸುರೇಶ್ ಮಲ್ಲನಗೌಡ ಪಾಟೀಲ್ ಸೇರಿ ಹಲವು ಮುಖಂಡರು ಹಾಜರಿದ್ದರು. 

Similar News