ಮುಂದಿನ ಬಜೆಟ್‍ನಲ್ಲಿ 300-400 ವಂದೇ ಭಾರತ್ ರೈಲುಗಳ ಘೋಷಿಸುವ ಸಾಧ್ಯತೆ: ವರದಿ

Update: 2022-11-26 02:16 GMT

ಹೊಸದಿಲ್ಲಿ: ಕೇಂದ್ರ ಸರ್ಕಾರ ಮುಂದಿನ ಬಜೆಟ್‍ನಲ್ಲಿ 300- 400 ವಂದೇ ಭಾರತ್ ರೈಲುಗಳನ್ನು (300-400 Vande Bharat (VB) trains in the next Budget) ಘೋಷಿಸುವ ಸಾಧ್ಯತೆ ಇದೆ. ಇದರ ಜತೆಗೆ ಮುಂದಿನ ಒಂದು ವರ್ಷದಲ್ಲಿ ಈ ಸೆಮಿ ಹೈಸ್ಪೀಡ್ ರೈಲುಗಳ "ಸ್ಟ್ಯಾಂಡರ್ಡ್ ಗೇಜ್" ("standard gauge" SG) ಪರಿವರ್ತನೆಯ ಉದ್ದೇಶವನ್ನು ಕೂಡಾ ಹೊಂದಿದ್ದು, ಇದು 2025-26ರ ವೇಳೆಗೆ ಯೂರೋಪ್, ದಕ್ಷಿಣ ಅಮೆರಿಕ ಮತ್ತು ಪೂರ್ವ ಏಷ್ಯಾ ಮಾರುಕಟ್ಟೆಗೆ ರಫ್ತು ಮಾಡಲು ಕೂಡಾ ಅವಕಾಶ ಕಲ್ಪಿಸಲಿದೆ ಎಂದು timesofindia.com ವರದಿ ಮಾಡಿದೆ.

ಮುಂದಿನ 3- 4 ವರ್ಷಗಳಲ್ಲಿ 475 ಹೊಸ ಅರೆ ಹೈಸ್ಪೀಡ್ ರೈಲುಗಳ ಕಾರ್ಯಾಚರಣೆಯನ್ನು ಅರಂಭಿಸುವ ಬಗ್ಗೆ ಈಗಾಗಲೇ ಮಾಡಿರುವ ಘೋಷಣೆಯ ಹೊರತಾಗಿ 400 ಹೊಸ ರೈಲುಗಳನ್ನು ಘೋಷಿಸಲಾಗುತ್ತದೆ ಎಂದು ವರದಿ ಮಾಡಲಾಗಿದೆ.

ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಮತ್ತು ಪ್ರಯಾಣಿಕರಿಗೆ ಉತ್ತಮ ಸವಾರಿ ಅನುಭವ ಒದಗಿಸುವ ನಿಟ್ಟಿನಲ್ಲಿ ಪ್ರತಿ ವರ್ಷ 300-400 ಇಂಥ ರೈಲುಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಮೂಲಗಳು ಹೇಳಿವೆ.

ಹಾಲಿ ಇರುವ ಹಳಿಗಳಲ್ಲಿ ಈ ರೈಲುಗಳ ವೇಗ ಹೆಚ್ಚಿಸುವ ಉದ್ದೇಶದಿಂದ ಈ ರೈಲುಗಳ ವಿನ್ಯಾಸವನ್ನು ಸುಧಾರಿಸುವ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ, ಭಾರತದ ಮೊದಲ ಆದ್ಯತೆ 2025-26ರ ವೇಳೆಗೆ ಟಿಲ್ಟಿಂಗ್ ತಂತ್ರಜ್ಞಾನದ ರೈಲುಗಳನ್ನು ಅಭಿವೃದ್ಧಿಪಡಿಸುವುದಾಗಿದೆ ಎಂದು ಉನ್ನತ ಅಧಿಕಾರಿ ವಿವರಿಸಿದರು.

ಈಗಾಗಲೇ 100 ವಂದೇಭಾರತ್ ರೈಲುಗಳು ಕಾರ್ಯಾಚರಣೆಗೆ ಇಳಿದಿದ್ದು, 475 ರೈಲುಗಳು ಈ ತಂತ್ರಜ್ಞಾನ ಬಳಸಿಕೊಳ್ಳಲಿವೆ. ಇದು ತಿರುವುಗಳಲ್ಲಿ ರೈಲು ಹೆಚ್ಚಿನ ವೇಗದಲ್ಲಿ ಚಲಿಸಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸಿದರು.

2024ರ ಮೊದಲ ತ್ರೈಮಾಸಿಕದಲ್ಲಿ ಸ್ಲೀಪರ್ ಕೋಚ್ ಹೊಂದಿದ ಮೊದಲ ವಂದೇಭಾರತ್ ರೈಲು ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಬಗ್ಗೆ  timesofindia.com ವರದಿ ಮಾಡಿದೆ.

Similar News