ಬೆಂಗಳೂರಿನ 28 ಕ್ಷೇತ್ರಗಳ ಮತದಾರ ಪಟ್ಟಿ ಪರಿಷ್ಕರಣೆಯಲ್ಲೂ ಅಕ್ರಮ: ದಿನೇಶ್ ಗುಂಡೂರಾವ್ ಆರೋಪ

Update: 2022-11-27 05:27 GMT

ಬೆಂಗಳೂರು, ನ.27: ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ. ಆದರೆ ಚುನಾವಣಾ ಆಯೋಗ ಕೇವಲ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತನಿಖೆ ಸೀಮಿತಗೊಳಿಸಿದೆ. ಹಾಗಾದರೆ ಇನ್ನುಳಿದ 25 ಕ್ಷೇತ್ರಗಳಲ್ಲಿ ನಡೆದ ಅಕ್ರಮದ ತನಿಖೆ ಏಕಿಲ್ಲ.‌? ಚು.ಆಯೋಗ ಬೆಂಗಳೂರು ವ್ಯಾಪ್ತಿಯ 28 ಕ್ಷೇತ್ರಗಳ ಅಕ್ರಮದ ತನಿಖೆ ಮಾಡಲಿ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, Voter ID ಹಗರಣ ಸಂಬಂಧ ಪೊಲೀಸರು BBMPಯ ನಾಲ್ವರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈ ಅಕ್ರಮದಲ್ಲಿ ಕೇವಲ ನಾಲ್ಕು ಅಧಿಕಾರಿಗಳು ಮಾತ್ರ ಭಾಗಿಯಾಗಿಲ್ಲ. ಸರ್ಕಾರದ ಉನ್ನತ ಅಧಿಕಾರಿಗಳು, ಪ್ರಭಾವಿ ಸಚಿವರು ಕೂಡ ಶಾಮೀಲಾಗಿದ್ದಾರೆ. ಅವರ ವಿರುದ್ಧವೂ ತನಿಖೆಯಾಗಬೇಕಲ್ಲವೆ.? ಅವರ ಬಂಧನವೂ ಆಗಬೇಕಲ್ಲವೆ.? ಕೇವಲ 4 ಅಧಿಕಾರಿಗಳ ಬಂಧನ ಕಣ್ಣೊರೆಸುವ ತನಿಖೆಯೇ? ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಯ ಗಮನಕ್ಕೆ ಬಾರದೆ Voter ID ಹಗರಣ ನಡೆಯಲು ಸಾಧ್ಯವೇ ಇಲ್ಲ.‌ ಈ ಹಗರಣದಲ್ಲಿ ಬೊಮ್ಮಾಯಿಯವರ ಪಾತ್ರ ಏನು ಎಂಬುದು ಜನರಿಗೆ ತಿಳಿಯಬೇಕು. ಆದರೆ ಈ ಸತ್ಯ ಪೊಲೀಸರ ತನಿಖೆಯಿಂದ ಹೊರಬರಲು ಸಾಧ್ಯವಿಲ್ಲ.‌ ಪೊಲೀಸರು ಬೊಮ್ಮಾಯಿ ವಿರುದ್ಧ ನಿರ್ಭೀತ ಹಾಗೂ‌ ಪ್ರಾಮಾಣಿಕವಾಗಿ ತನಿಖೆ ನಡೆಸಲು ಸಾಧ್ಯವೇ.? ಹಾಗಾಗಿ ನ್ಯಾಯಾಂಗ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದ್ದಾರೆ.

Similar News