ಉಡುಪಿ ಜಿಲ್ಲಾಮಟ್ಟದ ಶಾಲಾ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆ

Update: 2022-11-27 10:39 GMT

ಉಡುಪಿ, ನ.27: ಯಾವುದೇ ನಮ್ಮ ಆಸಕ್ತಿ ಕ್ಷೇತ್ರವಾಗಿರಬಹುದು ಅಲ್ಲಿ ಗಂಭೀರವಾಗಿ ತೊಡಗಿಕೊಂಡು ಕೆಲಸ ಮಾಡಿದರೆ ಯಶಸ್ಸು ಖಂಡಿತ ದೊರೆಯುತ್ತದೆ. ಶ್ರಮ ಇಲ್ಲದಿದ್ದರೆ ನಾವು ಎಲ್ಲ ಕ್ಷೇತ್ರಗಳಲ್ಲು ಸೋಲು ಕಾಣಬೇಕಾಗುತ್ತದೆ. ಕಠಿಣ ಶ್ರಮದ ಮನೋಭಾವದಲ್ಲಿ ಹೋರಾಡಿದರೆ ಅಂತಿಮವಾಗಿ ಗೆಲುವು ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಝೀಟಿವಿ ಡ್ರಾಮ ಜ್ಯೂನಿಯರ್ ಸೀಸನ್-4 ರಿಯಾಲಿಟಿ ಶೋ ಪ್ರಥಮ ಪ್ರಶಸ್ತಿ ವಿಜೇತೆ ಸಮೃದ್ಧಿ ಕುಂದಾಪುರ ಹೇಳಿದ್ದಾರೆ.

ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ನೆಹರೂ ಜಯಂತಿಯ ಪ್ರಯುಕ್ತ ಮಕ್ಕಳ ದಿನಾಚರಣೆಯ ಅಂಗವಾಗಿ ಶುಕ್ರವಾರ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ತರ ಸುವರ್ಣ ಸಂಭ್ರಮ ಸಭಾಭವನದಲ್ಲಿ ಜರಗಿದ ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಈ ದೇಶಕ್ಕೆ ಸಮಾಜವಾದ ನೆಲೆಯನ್ನು ಕೊಟ್ಟು ಪ್ರಜಾಪ್ರಭುತ್ವ ಮಾದರಿಯಲ್ಲಿ ದೇಶವನ್ನು ಬೆಳಸಿ, ವೈಜ್ಞಾನಿಕ ಮತ್ತು ವೈಚಾರಿಕತೆಯನ್ನು ಬಿತ್ತಿದವರು ನೆಹರೂ. ಸ್ವಾತಂತ್ರ್ಯ ಸಿಕ್ಕ ಸಂದರ್ಭ ಕಾಡುತ್ತಿದ್ದ ದೇಶದ ಸಮಸ್ಯೆಗಳ ಪರಿಹಾರಕ್ಕೆ ನೆಹರೂರಂತಹ ದೂರದೃಷ್ಟಿ ಇರುವ ನಾಯಕರ ಅಗತ್ಯ ಇತ್ತು. ನೆಹರೂರಂತಹ ನಾಯಕರ ಕಾರಣದಿಂದ ದೇಶದ ಪ್ರಜಾಪ್ರಭುತ್ವ ಇಂದೂ ಕೂಡಾ ಗಟ್ಟಿಯಾಗಿ ಉಳಿದಿದೆ. ಇಂದಿನ ಮಕ್ಕಳು ನೆಹರೂರವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎಂದರು.

ಹಿಂದೂ ಹಿರಿಯ ಪ್ರಾಥಮಿಕ ಮುಖ್ಯ ಶಿಕ್ಷಕಿ ಹೇಮಲತಾ, ಸಂಸ್ಥೆಯ ನಿರ್ದೇಶಕ ಚಂದ್ರಾವತಿ ಭಂಡಾರಿ, ಶರತ್ ಕುಮಾರ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ರಿಯಾಝ್ ಪಳ್ಳಿ ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯ ದರ್ಶಿ ತಿಲಕರಾಜ್ ಸಾಲ್ಯಾನ್ ವಂದಿಸಿದರು. ನಿರ್ದೇಶಕ ರಮೇಶ್ ಕುಮಾರ್ ಉದ್ಯಾವರ್ ಕಾರ್ಯಕ್ರಮ ನಿರೂಪಿಸಿದರು.

Similar News