ದತ್ತಾಂಶ ಸಂರಕ್ಷಣೆ ಮಸೂದೆಯ ನೂತನ ಕರಡಿನಲ್ಲಿ ಮೂಲಭೂತ ದೋಷಗಳಿವೆ: ನ್ಯಾ. ಬಿ.ಎನ್. ಶ್ರೀಕೃಷ್ಣ

Update: 2022-11-28 08:10 GMT

ಹೊಸದಿಲ್ಲಿ: ದತ್ತಾಂಶ ಸಂರಕ್ಷಣೆ ಮಸೂದೆಯ ನೂತನ ಕರಡು (Data Protection Bill) ಮೂಲಭೂತವಾಗಿ ದೋಷಪೂರಿತವಾಗಿದೆ,ಏಕೆಂದರೆ ಅದು ಕಾರ್ಯಾಂಗಕ್ಕೆ ತನ್ನ ಮನಬಂದಂತೆ ವರ್ತಿಸಲು ಅವಕಾಶ ನೀಡುತ್ತದೆ ಮತ್ತು ವೈಯಕ್ತಿಕ ದತ್ತಾಂಶಗಳ ಗೋಪ್ಯತೆಯ ಮೂಲಭೂತ ಹಕ್ಕನ್ನು ಅತಿಕ್ರಮಿಸಲು ಉತ್ತೇಜಿಸಬಹುದು. ತಥಾಕಥಿತ ನಿಯಂತ್ರಕರು ಸರಕಾರದ ಕೈಗೊಂಬೆಯಾಗಲಿದ್ದಾರೆ ಮತ್ತು ಯಾವುದೇ ಸ್ವಾತಂತ್ರವನ್ನು ಹೊಂದಿರುವುದಿಲ್ಲ ಎಂದು 2018ರಲ್ಲಿ ಮಸೂದೆಯ ಮೊದಲ ಕರಡನ್ನು ಪ್ರಸ್ತಾಪಿಸಿದ್ದ ನ್ಯಾ(ನಿವೃತ್ತ).ಬಿ.ಎನ್.ಶ್ರೀಕೃಷ್ಣ (Justice B.N. Srikrishna) ಅವರು The Hindu ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ:

ದತ್ತಾಂಶ ಸಂರಕ್ಷಣೆ ಮಸೂದೆ, ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಮಸೂದೆಯ ನೂತನ ಕರಡಿನ ಕುರಿತಂತೆ ಹೇಳುವುದಾದರೆ ಅದು ಹಿಂದಿನ ಕರಡುಗಳಲ್ಲಿಯ ಕೆಲವು ಒಳ್ಳೆಯ ಅಂಶಗಳನ್ನು ಒಳಗೊಂಡಿದೆ,ಆದರೆ ಕೆಲವು ವಿಷಯಗಳಲ್ಲಿ ತುಂಬ ಎಡವಿದೆ.

ಭಾಷೆಯ ಸರಳತೆ ಮತ್ತು ಗಾತ್ರವನ್ನು ಕಡಿಮೆ ಮಾಡಿರುವುದು ಒಳ್ಳೆಯ ಅಂಶಗಳಾಗಿವೆ, ಆದರೆ ಸರಳತೆಗಾಗಿ ಶಾಸನದ ಸ್ಪಷ್ಟತೆಯನ್ನು ತೊರೆಯಲಾಗುವುದಿಲ್ಲ. ಅನೇಕ ಪರಿಕಲ್ಪನೆಗಳು ಅಸ್ಪಷ್ಟವಾಗಿವೆ ಮತ್ತು ಅವುಗಳನ್ನು ವ್ಯಾಖ್ಯಾನಿಸಲಾಗಿಲ್ಲ. ಕನ್ಸೆಂಟ್ ಮ್ಯಾನೇಜರ್ಗಳು ಉತ್ತಮ ಪರಿಕಲ್ಪನೆಯಾಗಿದ್ದು, ದತ್ತಾಂಶ ಮುಖ್ಯಸ್ಥರಿಗೆ ನೆರವಾಗುತ್ತದೆ. ದತ್ತಾಂಶ ಮಂಡಳಿಯು ಕಾರ್ಯಾಂಗದ ಸೃಷ್ಟಿಯಾಗಿದ್ದು,ಅದರ ಸಂಯೋಜನೆ, ಸ್ಥಾಪನೆ,ಅದರ ಅಧ್ಯಕ್ಷರು ಮತ್ತು ಸದಸ್ಯರ ಅರ್ಹತೆಗಳು ಇತ್ಯಾದಿಗಳ ಬಗ್ಗೆ ಯಾವುದೇ ಮಾರ್ಗಸೂಚಿಗಳಿಲ್ಲ. ಹೀಗಾಗಿ ಅದು ನಿಯಂತ್ರಕವಾಗಿದ್ದರೆ ಅಲ್ಪ ಸ್ವಾತಂತ್ರದೊಂದಿಗೆ ಸರಕಾರದ ಹಿಡಿತದಲ್ಲಿರುತ್ತದೆ, ಇಲ್ಲದಿದ್ದರೆ ನಿಯಂತ್ರಕವೇ ಇರುವುದಿಲ್ಲ. ಮಸೂದೆಯು ಸಂಪೂರ್ಣವಾಗಿ ಸರಕಾರದ ಪರವಾಗಿದೆ.

2008ರ ಕರಡಿನಲ್ಲಿ ಕಲ್ಪಿಸಿದ್ದಂತೆ ದತ್ತಾಂಶ ಸಂರಕ್ಷಣೆ ಪ್ರಾಧಿಕಾರದಂತಹ ಬಲವಾದ ಮತ್ತು ಸ್ವತಂತ್ರ ನಿಯಂತ್ರಕದ ಅಗತ್ಯವಿದೆ.

ಪ್ರಸ್ತುತ ಕರಡಿನಡಿ ಸೃಷ್ಟಿಸಲಾಗಿರುವ ಮಂಡಳಿಯು ಸರಕಾರದ ಹಿಡಿತದಲ್ಲಿರುತ್ತದೆ. ಅರ್ಹತೆ,ಅಧಿಕಾರಾವಧಿ,ನೇಮಕಾತಿ ಪ್ರಕ್ರಿಯೆ ಇವೆಲ್ಲವನ್ನೂ ನಿಯೋಜಿತ ಶಾಸನದಲ್ಲಿ ಬದಲಿಸಲಾಗಿದೆ. ಇದು 2019ರ ಮಸೂದೆಗಿಂತ ಕೆಟ್ಟದ್ದಾಗಿದೆ. ಸಾರಾಸಗಟು ವಿನಾಯತಿಗಳನ್ನು ನೀಡಿದರೆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ತಥಾಕಥಿತ ನಿಯಂತ್ರಕರು ಸರಕಾರದ ಕೈಗೊಂಬೆಯಾಗಲಿದ್ದಾರೆ ಮತ್ತು ಯಾವುದೇ ಸ್ವಾತಂತ್ರವನ್ನು ಹೊಂದಿರುವುದಿಲ್ಲ.

ಕಾನೂನಿನ ಎಲ್ಲ ಅಥವಾ ಯಾವುದೇ ನಿಬಂಧನೆಯಿಂದ ಎಲ್ಲ ಸರಕಾರಿ ಇಲಾಖೆಗಳು ಮತ್ತು ಸರಕಾರಿ ಸಂಸ್ಥೆಗಳಿಗೆ ವಿನಾಯಿತಿಯನ್ನು ನೀಡುವ ಅಧಿಕಾರವನ್ನು ಮಸೂದೆಯು ಹೊಂದಿದೆ. ಇದು ಅಪಾಯಕಾರಿ ಸ್ಥಿತಿಯಾಗಿದೆ ಮತ್ತು ನಿರಂಕುಶವಾಗಿ ವರ್ತಿಸಲು ಕಾರ್ಯಾಂಗಕ್ಕೆ ಸ್ಪಷ್ಟ ಆಹ್ವಾನವಾಗಿದೆ. ಕಾನೂನಿನಲ್ಲಿ ಶಾಸಕಾಂಗ ಮಾರ್ಗದರ್ಶನವಿಲ್ಲದೆ ಸರಕಾರವು ರೂಪಿಸಲಿರುವ ನಿಯಮಗಳ ಮೇಲೆ ಅತಿಯಾದ ಅವಲಂಬನೆಯಿದೆ. ಇದು ಅನಿಯಂತ್ರತೆಗೆ ಅವಕಾಶವನ್ನು ನೀಡುತ್ತದೆ ಮತ್ತು ಕಾನೂನಿನ ಸಾಂವಿಧಾನಿಕ ಅಮಾನ್ಯತೆಗೆ ಕಾರಣವಾಗುತ್ತದೆ. ಮಸೂದೆಯು ಇಂತಹ ನಿದರ್ಶನಗಳಿಂದ ತುಂಬಿಹೋಗಿದೆ. 30 ನಿಬಂಧನೆಗಳ ಪೈಕಿ 18 ವಿಷಯವನ್ನು ನಿರ್ಧರಿಸುವ ಅಧಿಕಾರವನ್ನು ಸರಕಾರಕ್ಕೇ ನೀಡಿವೆ. ಅಲ್ಲದೆ ಪುಟ್ಟಸ್ವಾಮಿ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಮಾಹಿತಿ ಗೋಪ್ಯತೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ಎತ್ತಿ ಹಿಡಿದಿದ್ದನ್ನು ಕಡೆಗಣಿಸಲಾಗಿದೆ.

ಇದನ್ನೂ ಓದಿ: ಸರಕಾರವು ಸರಿಯಾಗಿದ್ದರೆ ಮಾಧ್ಯಮಗಳು ಅದನ್ನು ಹೇಳಬೇಕು: ಉದ್ಯಮಿ ಗೌತಮ್ ಅದಾನಿ

Similar News