ಮಂಗೋಡು ಷಷ್ಠಿ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ

ಸಂಘಪರಿವಾರ ಕಾರ್ಯಕರ್ತರ ನಡವಳಿಕೆಗೆ ಗ್ರಾಮಸ್ಥರು, ಮಹಿಳೆಯರು ತೀವ್ರ ಆಕ್ಷೇಪ

Update: 2022-11-29 16:19 GMT

ಉಡುಪಿ, ನ.29: ಉದ್ಯಾವರ ಸಮೀಪದ ಕುತ್ಪಾಡಿ ಮಂಗೋಡು ದೇವಸ್ಥಾನದಲ್ಲಿ ಇಂದು ನಡೆದ ಷಷ್ಠಿ ಮಹೋತ್ಸವ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಸಂಘಪರಿವಾರದ ಕಾರ್ಯಕರ್ತರು ವ್ಯಾಪಾರ ಮಾಡಲು ಅವಕಾಶ ನಿರಾಕರಿಸಿರುವ ಘಟನೆ ನಡೆದಿದೆ.

ಪ್ರತಿ ವರ್ಷದಂತೆ ಈ ವರ್ಷವು ಮುಸ್ಲಿಮ್ ವ್ಯಾಪಾರಿಗಳು ದೇವಸ್ಥಾನದವರಿಂದ ಅನುಮತಿ ಪಡೆದು ದೇವಸ್ಥಾನದ ಸಮೀಪ ಹಾಗೂ ಕೆಲವರು ಖಾಸಗಿ ಜಾಗದಲ್ಲಿ ಅಂಗಡಿಗಳನ್ನು ಹಾಕಲು ಸೋಮವಾರ ರಾತ್ರಿ ಸಿದ್ಧತೆ ನಡೆಸಿದ್ದರು. ಈ ವೇಳೆ ಆಗಮಿಸಿದ ಸಂಘ ಪರಿವಾರದ ಕಾರ್ಯಕರ್ತರು ಮುಸ್ಲಿಮ್ ವ್ಯಾಪಾರಿಗಳು ವ್ಯಾಪಾರ ನಡೆಸಿವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ದೂರಲಾಗಿದೆ.

ಈ ವಿಚಾರವಾಗಿ ಗ್ರಾಮಸ್ಥರು ಮತ್ತು ಸಂಘಪರಿವಾರದ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತೆನ್ನಲಾಗಿದೆ. ಇಂದು ಮತ್ತೆ ತಗಾದೆ ತೆಗೆದ ಸಂಘಪರಿವಾರದ ಕಾರ್ಯಕರ್ತರು, ಮುಸ್ಲಿಮ್ ವ್ಯಾಪಾರಿಗಳನ್ನು ದೇವಸ್ಥಾನ ಸಮೀಪ ಹಾಗೂ ಖಾಸಗಿ ಜಾಗದಿಂದ ತೆರವುಗೊಳಿಸಿ ಹೊರಗೆ ಕಳುಹಿಸಿದ್ದಾರೆಂದು ದೂರಲಾಗಿದೆ.

ಈ ವೇಳೆ ಮುಸ್ಲಿಮ್ ವ್ಯಾಪಾರಿಗಳು ಕೂಡ ಸಂಘಪರಿವಾರದ ಕಾರ್ಯಕರ್ತರೊಂದಿಗೆ ಮಾತಿಗೆ ಇಳಿದರು ಎಂದು ತಿಳಿದುಬಂದಿದೆ. ಸಂಘಪರಿವಾರದ ಕಾರ್ಯಕರ್ತರ ನಡವಳಿಕೆಗೆ ಗ್ರಾಮಸ್ಥರು ಹಾಗೂ ಮಹಿಳೆಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

Similar News