ಟೊಯೊಟಾ ಕಿರ್ಲ್ಕೋಸ್ಕರ್‌ ಉಪಾಧ್ಯಕ್ಷ ವಿಕ್ರಂ ಕಿರ್ಲ್ಕೋಸ್ಕರ್‌ ನಿಧನ

Update: 2022-11-30 12:39 GMT

ಬೆಂಗಳೂರು, ನ.30:ಆಟೊ ಮೊಬೈಲ್ಸ್ ಉದ್ಯಮದಲ್ಲಿ ಭಾರತದ ದಿಗ್ಗಜರಲ್ಲಿ ಒಬ್ಬರಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‍ನ ಉಪಾಧ್ಯಕ್ಷ ವಿಕ್ರಮ್ ಎಸ್. ಕಿರ್ಲೋಸ್ಕರ್(64) ಹೃದಯಾಘಾತದಿಂದ ಮಂಗಳವಾರ ನಿಧನರಾದರು.

ಮಂಗಳವಾರ ಮುಂಜಾನೆ ಎದೆನೋವಿನಿಂದ ವಿಕ್ರಮ್ ಕಿರ್ಲೋಸ್ಕರ್ ಅವರುಕುಸಿದು ಬಿದ್ದರು. ಬಳಿಕ ಅವರನ್ನು ತ್ವರಿತವಾಗಿ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಕೊನೆಯುಸಿರುಳೆದರು.

ಬುಧವಾರ ಮಧ್ಯಾಹ್ನ ಸುಮಾರಿಗೆ ಬೆಂಗಳೂರಿನ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ಜರುಗಿತು ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಯಮಿ ವಿಕ್ರಮ್ ಎಸ್. ಕಿರ್ಲೋಸ್ಕರ್ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು,ಭಾರತದ ಆಟೋಮೋಟಿವ್ ಉದ್ಯಮದ ದಿಗ್ಗಜರಲ್ಲಿ ಒಬ್ಬರಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‍ನ ಉಪಾಧ್ಯಕ್ಷ ವಿಕ್ರಮ್ ಅವರ ದುಃಖ ಮತ್ತು ಅಕಾಲಿಕ ನಿಧನಕ್ಕೆ ಹೃತ್ಪೂರ್ವಕ ಸಂತಾಪಗಳು ಎಂದಿದ್ದಾರೆ.

ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಪ್ರತಿಕ್ರಿಯಿಸಿ ವಿಕ್ರಮ್ ಅವರ ನಿಧನದಿಂದ ನಾನು ಆಘಾತಗೊಂಡಿದ್ದೇನೆ. ಅವರು ಅಂತಹ ಆತ್ಮೀಯ ಸ್ನೇಹಿತರಾಗಿದ್ದರು, ಅವರನ್ನು ನಾನು ತುಂಬಾ ನೆನಪು ಮಾಡಿಕೊಳ್ಳುತ್ತೇನೆ ಎಂದು ನುಡಿದಿದ್ದಾರೆ.

ಅದೇ ರೀತಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ವಿಕ್ರಮ್ ಎಸ್. ಕಿರ್ಲೋಸ್ಕರ್ ಸಂತಾಪ ಸೂಚಿಸಿದ್ದಾರೆ.

Similar News