ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್‌ ತಪಾಸಣೆ ವೇಳೆ ಕಾಂಡೋಮ್, ಗರ್ಭ ನಿರೋಧಕ ಗುಳಿಗೆಗಳು ಪತ್ತೆ!

Update: 2022-11-30 07:03 GMT

ಬೆಂಗಳೂರು (Bengaluru): ಮಕ್ಕಳು ಶಾಲೆಗಳಿಗೆ ಮೊಬೈಲ್‌ ಫೋನ್‌ಗಳನ್ನು ನಿಯಮಗಳಿಗೆ ವಿರುದ್ಧವಾಗಿ ತರುತ್ತಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ 8ನೇ, 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಶಾಲಾ ಬ್ಯಾಗ್‌ಗಳನ್ನು (school bag) ಪರಿಶೀಲಿಸಿದ ಶಾಲೆಗಳ ಅಧಿಕಾರಿಗಳಿಗೆ ಆಘಾತ ಕಾದಿತ್ತು. ಕೆಲ ಮಕ್ಕಳ ಬ್ಯಾಗ್‌ಗಳಲ್ಲಿ ಫೋನ್‌ಗಳ ಹೊರತಾಗಿ ಕಾಂಡೋಮ್ ಗಳು, ಗರ್ಭ ನಿರೋಧಕ ಗುಳಿಗೆಗಳು, ಲೈಟರ್‌ಗಳು, ಸಿಗರೇಟ್‌ಗಳು, ವೈಟ್ನರ್‌ಗಳು ಮತ್ತು ಬಹಳಷ್ಟು ನಗದು ಹಣ ಪತ್ತೆಯಾಗಿವೆ ಎಂದು deccanherald.com ವರದಿ ಮಾಡಿದೆ. 

ಈಗಾಗಲೇ ನಗರದ ಹಲವು ಶಾಲೆಗಳ ಆಡಳಿತಗಳು ಮಕ್ಕಳ ಬ್ಯಾಗ್‌ಗಳ ಪರಿಶೀಲನೆ ನಡೆಸುತ್ತಿದ್ದು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತಗಳ ಸಂಘಟನೆ (ಕೆಎಎಂಎಸ್) ಕೂಡ ಈ ಕ್ರಮಕ್ಕೆ ಶಿಫಾರಸು ಮಾಡಿತ್ತು.

ಮಕ್ಕಳ ಬ್ಯಾಗ್‌ಗಳಲ್ಲಿ ಹಲವು ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೆಲವು ಶಾಲೆಗಳು ವಿಶೇಷ ಪೋಷಕರ-ಶಿಕ್ಷಕರ ಸಭೆಗಳನ್ನೂ ನಡೆಸಿವೆ. ತಪಾಸಣೆ ಹಾಗೂ ಪತ್ತೆಯಾದ ವಸ್ತುಗಳ ಬಗ್ಗೆ ತಿಳಿದು ಹೆತ್ತವರೂ ಆಘಾತಗೊಂಡಿದ್ದಾರೆ ಎಂದು  ಕೆಲ ಶಾಲೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಈ ವಿಚಾರವನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಲು ಶಾಲೆಗಳು ಮುಂದಾಗಿದ್ದು, ಸಂಬಂಧಿತ ವಿದ್ಯಾಥಿಗಳನ್ನು ಡಿಬಾರ್‌ ಮಾಡುವ ಬದಲು ಅವರ ಹೆತ್ತವರನ್ನು ಬರಹೇಳಿ ಮಕ್ಕಳನ್ನು ಆಪ್ತಸಮಾಲೋಚನೆಗೆ ಒಳಪಡಿಸುವಂತೆ ಸೂಚಿಸಲಾಗಿದೆ.

ಶಾಲೆಗಳಲ್ಲೂ ಈ ಸೌಲಭ್ಯವಿದ್ದರೂ  ಹೆತ್ತವರಿಗೇ ಈ ಜವಾಬ್ದಾರಿ ವಹಿಸಲಾಗಿದೆಯಲ್ಲದೆ ವಿದ್ಯಾಥಿಗಳಿಗೆ ಹತ್ತು ದಿನಗಳ ರಜೆಯನ್ನೂ ನೀಡಲಾಗಿದೆ.

ವಿದ್ಯಾರ್ಥಿನಿಯೊಬ್ಬಳ ಬ್ಯಾಗ್‌ನಲ್ಲಿ ಕಾಂಡೋಮ್ ಪತ್ತೆಯಾದ ಬಗ್ಗೆ ಆಕೆಯನ್ನು ಕೇಳಿದಾಗ ಆಕೆ ತನ್ನ ಸಹಪಾಠಿಗಳನ್ನು ಅಥವಾ ಟ್ಯೂಷನ್‌ ತರಗತಿಯಲ್ಲಿನ ವಿದ್ಯಾರ್ಥಿಗಳನ್ನು ದೂರಿದ್ದಾಳೆ ಎನ್ನಲಾಗಿದೆ.

ಕೆಲ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿದ್ದ ನೀರಿನ ಬಾಟಲಿಗಳಲ್ಲಿ ಮದ್ಯ ಪತ್ತೆಯಾಗಿವೆ ಎಂದು ಕೆಎಎಂಎಸ್‌ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್‌ ಹೇಳಿದ್ದಾರೆ. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕಿರುಕುಳ ನೀಡುತ್ತಾರೆ, ಕೆಟ್ಟ ಭಾಷೆ ಪ್ರಯೋಗಿಸುತ್ತಾರೆ ಎಂದು ಅವರು ಅವರು ಹೇಳಿದರು.

ಇದನ್ನೂ ಓದಿ: ನ್ಯಾಯಾಲಯದಲ್ಲಿ ಗದ್ದಲ: ಬೇಷರತ್ ಕ್ಷಮೆ ಕೋರಿದ ವಕೀಲ ಜಗದೀಶ್ ಗೆ ದಂಡ ವಿಧಿಸಿ, ಪ್ರಕರಣ ಕೈಬಿಟ್ಟ ಹೈಕೋರ್ಟ್

Similar News