ಬೆಂಗಳೂರು | ಗುತ್ತಿಗೆ ಮೀಸಲಾತಿ 1 ಕೋಟಿ ರೂ.ಗೆ ಹೆಚ್ಚಿಸಲು ಆಗ್ರಹ: ಎಸ್ಸಿ-ಎಸ್ಟಿ ಗುತ್ತಿಗೆದಾರರ ದಿಢೀರ್ ಧರಣಿ

Update: 2022-11-30 17:39 GMT

ಬೆಂಗಳೂರು, ನ.30: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರಿಗೆ ಮೀಸಲಿಟ್ಟ ಸರಕಾರಿ ಕಾಮಗಾರಿ ಮೊತ್ತದ ಮಿತಿಯನ್ನು 50ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ಗೆ ಹೆಚ್ಚಿಸುವ ಬಗ್ಗೆ ಆಯವ್ಯಯದಲ್ಲಿ ಘೋಷಣೆಯಾಗಿರುತ್ತದೆ. ಆದರೆ ಇದುವರೆಗೂ ಅನುμÁ್ಠನಕ್ಕೆ ಬಂದಿರುವುದಿಲ್ಲ ಎಂದು ಎಸ್ಸಿ-ಎಸ್ಟಿ ಗುತ್ತಿಗೆದಾರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಬುಧವಾರ ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ವಿಧಾನ ಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಗೆ ಏಕಾಏಕಿ ಮುತ್ತಿಗೆ ಹಾಕಿದ ಸಂಘವು, ಬಿಜೆಪಿ ಸರಕಾರ ಬಜೆಟ್‍ನಲ್ಲಿ ನೀಡಿದ್ದ ಆಶ್ವಾಸನೆ ಈಡೇರಿಸಲು ವಿಫಲವಾಗಿದೆ. ಹೀಗಾಗಿ ಕೂಡಲೇ ಭರವಸೆ ಈಡೇರಿಸಬೇಕು ಎಂದು ಆಗ್ರಹಿಸಿದೆ.

ಸುದ್ದಿಗಾರರೊಂದಿಗೆ ಸಂಘದ ಅಧ್ಯಕ್ಷ ಎನ್.ಮಹದೇವಸ್ವಾಮಿ ಮಾತನಾಡಿ, ಸರಕಾರಿ ಕಾಮಗಾರಿಗಳಲ್ಲಿ ಕಾಮಗಾರಿ ಮೊತ್ತ 50 ಲಕ್ಷ ರೂ.ಗಳವರೆಗೆ ಇದ್ದರೆ, ಆ ಕಾಮಗಾರಿಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರಿಗೆ ಮೀಸಲಾಗಿರುತ್ತದೆ. ಈ ಮೊತ್ತವನ್ನು ಕೂಡಲೇ ಒಂದು ಕೋಟಿ ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು. 

ಮೀಸಲಾತಿ ಮಿತಿ ಹೆಚ್ಚಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದು ಮುಖ್ಯಮಂತ್ರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲು ಆರ್ಥಿಕ ಇಲಾಖೆಗೆ ಸೂಚಿಸಿರುತ್ತಾರೆ. ಅರ್ಥಿಕ ಇಲಾಖೆಯು ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಮಿತಿ ರೂ. 50 ಲಕ್ಷಗಳಿಂದ ಒಂದು ಕೋಟಿಗೆ ಹೆಚ್ಚಿಸಲು ಮಂತ್ರಿಗಳಿಗೆ ಕಡತವನ್ನು ಮಂಡಿಸಿರುತ್ತಾರೆ. ಆದರೆ ಇದುವರೆಗೂ ಅನುಮೋದನೆ ನೀಡಿರುವುದಿಲ್ಲ. ಅಲ್ಲದೆ, ಜಾರಿಯಲ್ಲಿರುವ ಮೀಸಲು ಗುತ್ತಿಗೆ ಕಾಮಗಾರಿಗಳಲ್ಲಿ ಪಾಲ್ಗೊಳ್ಳದಂತೆ ತಡೆಯಲು ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಕಿಡಿಕಾರಿದರು.

ನಾವು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಗೆ ಹೋಗಿ, ಸಭೆಯ ಅಧ್ಯಕ್ಷರಿಗೆ ಮೀಸಲಾತಿ ಕಾಮಗಾರಿಗಳ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡುವ ಮೂಲಕ ಮೌನ ಪ್ರತಿಭಟನೆ ನಡೆಸಿದ್ದೇವೆ ಎಂದರು.

ಎಸ್ಸಿ-ಎಸ್ಟಿ ವರ್ಗದ ಅಭಿವೃದ್ಧಿ ಯೋಜನೆಗಳ ಬಗ್ಗೆ ಬಿಜೆಪಿ ಸರಕಾರಕ್ಕೆ ತಾತ್ಸರ ಮನೋಭಾವ ಇದ್ದಂತೆ ಕಾಣುತ್ತಿದೆ. ಕೂಡಲೇ ಎಸ್ಸಿ ಎಸ್ಟಿ ಗುತ್ತಿಗೆ ಮೀಸಲಾತಿ ಒಂದು ಕೋಟಿ ರೂ.ಹೆಚ್ಚಳ ಮಾಡದಿದ್ದರೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ. 

- ಎನ್. ಮಹದೇವಸ್ವಾಮಿ, ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ 

Similar News