ಸಿಎಎ ತಮಿಳು ನಿರಾಶ್ರಿತರನ್ನು ಹೊರಗಿಟ್ಟಿದೆ : ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ ಡಿಎಂಕೆ

Update: 2022-11-30 11:17 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆಯು (CAA) ʻತಮಿಳು ಜನಾಂಗದ ವಿರುದ್ಧವಾಗಿದೆ" ಏಕೆಂದರೆ ಅದು  ತನ್ನ ವ್ಯಾಪ್ತಿಯಿಂದ ಶ್ರೀಲಂಕಾದಲ್ಲಿ ಧಾರ್ಮಿಕ ಕಾರಣಗಳಿಗಾಗಿ ದೌರ್ಜನ್ಯ ಎದುರಿಸಿ ಅಲ್ಲಿಂದ ಭಾರತಕ್ಕೆ ಆಗಮಿಸಿದ ತಮಿಳು ನಿರಾಶ್ರಿತರನ್ನು  ಹೊರಗಿಟ್ಟಿದೆ ಎಂದು ತಮಿಳುನಾಡಿನ ಡಿಎಂಕೆ (DMK) ಇಂದು ಸುಪ್ರೀಂ ಕೋರ್ಟ್‌ (Supreme Court) ಮುಂದೆ ಹೇಳಿದೆ.

ತಮಿಳುನಾಡಿನಲ್ಲಿ ದಶಕಗಳಿಂದ ವಾಸಿಸುತ್ತಿರುವ ಶ್ರೀಲಂಕಾದ ತಮಿಳು ನಿರಾಶ್ರಿತರು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಲಾಗಿರುವ ಹೆಚ್ಚುವರಿ ಅಫಿಡವಿಟ್‌ನಲ್ಲಿ ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್‌ ಎಸ್‌ ಭಾರತಿ ಹೇಳಿದ್ದಾರೆ.

ಈ ಕಾಯಿದೆಯು ಏಕಪಕ್ಷೀಯವಾಗಿದೆ, ಏಕೆಂದರೆ ಅದು ಕೇವಲ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಮಾತ್ರ ಸಂಬಂಧಿಸಿದೆ ಹಾಗೂ ಕೇವಲ ಹಿಂದು ಸಿಖ್‌, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಸ್ಲಿಮರನ್ನು ಹೊರಗಿಟ್ಟಿದೆ ಎಂದು ಡಿಎಂಕೆ ಹೇಳಿದೆ.

ಭಾರತ ಸರ್ಕಾರ ಸಲ್ಲಿಸಿರುವ ಪ್ರತಿ ಅಫಿಡವಿಟ್‌,  ತಮಿಳು ನಿರಾಶ್ರಿತರ ಸಮಸ್ಯೆಗಳ ಬಗ್ಗೆ ಮೌನವಾಗಿದೆ ಹಾಗೂ ತಮಿಳು ನಿರಾಶ್ರಿತರ ಬಗ್ಗೆಗಿನ ಕೇಂದ್ರದ ಮಲತಾಯಿ ಧೋರಣೆಯು ಅವರ ಭವಿಷ್ಯವನ್ನು ಅನಿಶ್ಚಿತತೆಯಲ್ಲಿರಿಸಿದೆ ಎಂದು ಡಿಎಂಕೆ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

Similar News