ಬೆಂಗಳೂರು | ಪತಿಯ ಕೊಲೆ: ಪತ್ನಿ ಸೇರಿ ಇಬ್ಬರ ಬಂಧನ

Update: 2022-11-30 11:49 GMT

ಬೆಂಗಳೂರು, ನ.30: ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. 

ಸೋಲದೇವನಹಳ್ಳಿಯ ದಾಸೇಗೌಡ (48) ಕೊಲೆಯಾದವರು ಎಂದು ತಿಳಿದು ಬಂದಿದೆ.  ಪ್ರಕರಣ ಸಂಬಂಧ ದಾಸೇಗೌಡ ಅವರ ಪತ್ನಿ ಹಾಗೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 

ದಾಸೇಗೌಡ ನಾಪತ್ತೆಯಾಗಿದ್ದ ಬಗ್ಗೆ ಸೋಲದೇವನಹಳ್ಳಿ ಠಾಣೆಗೆ ಕಳೆದ ನ.28 ರಂದು ದಾಸೇಗೌಡನ ಪತ್ನಿ ನಾಪತ್ತೆ ದೂರು ನೀಡಿದ್ದಳು. ರಾಮನಗರ ಗ್ರಾ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಸೇಗೌಡನ ಮೃತದೇಹ ಪತ್ತೆಯಾಗಿದ್ದು, ದಾಸೇಗೌಡನ ಪತ್ನಿ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ.

ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಒಂದೊಂದು ಕಡೆ ವಸ್ತುಗಳನ್ನು ಆರೋಪಿಗಳು ಎಸೆದಿದ್ದರು. ದಾಸೇಗೌಡ ಮೃತದೇಹವನ್ನು ಸೋಲದೇವನಹಳ್ಳಿ ಫಾರ್ಮ್ ಹೌಸ್‍ನಿಂದ ಕಾರಿನಲ್ಲಿ ಸಾಗಾಟ ಮಾಡಿದ್ದು, ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮೋರಿಯಲ್ಲಿ ಹಾಕಿ ಸುಮಾರು 50 ಮೀಟರ್ ನಷ್ಟು ಆಳಕ್ಕೆ ಶವವನ್ನು ಹಾಕಿದ್ದಾರೆನ್ನಲಾಗಿದೆ. 

ಉಸಿರುಗಟ್ಟಿಸಿ ಕೊಲೆ ಮಾಡಲು ಬಳಸಿದ್ದ ಹಗ್ಗವನ್ನು ಬೇರೆಡೆ ಎಸೆದಿದ್ದು, ಸಾಕ್ಷ್ಯ ಸಿಗದಂತೆ ಒಂದೊಂದು ಕಡೆ ವಸ್ತುಗಳು ಎಸೆದಿದ್ದಾರೆ. ಬಾಡಿಗೆ ಕಾರಿನಲ್ಲಿ ಮೃತದೇಹ ಸಾಗಾಟ ಮಾಡಿ ಕಾರನ್ನು ಆರೋಪಿಗಳು ಬೇರೆಡೆ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ, ಪತಿ ಮನೆಯಲ್ಲಿ ಇಲ್ಲದಾಗ ಯುವಕ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದ್ದು, ಪತ್ನಿ ಅನೈತಿಕ ಸಂಬಂಧ ಬಗ್ಗೆ ಪತಿ ದಾಸೇಗೌಡನಿಗೆ ಅನುಮಾನ ಬಂದಿತ್ತು. ಈ ಬಗ್ಗೆ ನ.25ರ ರಾತ್ರಿ ಗಲಾಟೆ ವೇಳೆ ಪ್ರಿಯಕರನಿಗೆ ಕರೆ ಮಾಡಿ ಪತಿ ಬೈಯುವುದನ್ನು ಪತ್ನಿ ಕೇಳಿಸಿದ್ದಳು. ಈ ವೇಳೆ ಮನೆಗೆ ಹಿಂಬಾಗಿಲಿನ ಮೂಲಕ ಬಂದು ದನದ ಕೊಟ್ಟಿಗೆಯಲ್ಲಿದ್ದ ಹಗ್ಗ ತಂದು ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

Similar News