ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಗೌತಮ್ ಅದಾನಿಯ ಜೀವನಚರಿತ್ರೆ ಬಿಡುಗಡೆ : ಕೇವಲ 20 ಜನರ ಉಪಸ್ಥಿತಿ

Update: 2022-11-30 14:42 GMT

ಹೊಸದಿಲ್ಲಿ: ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಗೌತಮ ಅದಾನಿ(Gautama Adani)ಯವರ ಜೀವನಚರಿತ್ರೆಯು ಮಂಗಳವಾರ ಸಂಜೆ ದಿಲ್ಲಿಯ ಹೃದಯಭಾಗದಲ್ಲಿರುವ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಬಿಡುಗಡೆಗೊಂಡಿದ್ದು,ಹೆಚ್ಚೆಂದರೆ 20 ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು theprint.in ವರದಿ ಮಾಡಿದೆ. 

‘ಗೌತಮ ಅದಾನಿ:ರಿಇಮೇಜಿಂಗ್ ಇಂಡಿಯಾ ಆ್ಯಂಡ್ ದಿ ವರ್ಲ್ಡ್ ’ಕುರಿತು ಚರ್ಚೆಯಲ್ಲಿ ಲೇಖಕರು ಸೇರಿದಂತೆ ಇಬ್ಬರು ಭಾಷಣಕಾರರ ಪೈಕಿ ಓರ್ವರಾದ ದಿಲೀಪ್ ಚೆರಿಯನ್ (Dilip Cherian)ಅವರ ಆರಂಭಿಕ ಮಾತುಗಳು ಕಾರ್ಯಕ್ರಮದ ಮೂಡ್ ಅನ್ನು ಕಟ್ಟಿಕೊಟ್ಟಿದ್ದವು. ‘ಇಲ್ಲಿರುವುದು ನಿಜಕ್ಕೂ ಆನಂದವನ್ನುಂಟು ಮಾಡಿದೆ.....ಏಕೆಂದರೆ ನಾವು ಹೆಚ್ಚುಕಡಿಮೆ ಈ ಸ್ಥಳವನ್ನು ಬಿಟ್ಟು ನಮಗಾಗಿ ಡ್ರಾಯಿಂಗ್ ರೂಮ್ ಪಡೆದುಕೊಂಡು ಉತ್ತಮ ಸಂವಾದವನ್ನು ನಡೆಸಬಹುದಿತ್ತು ’ ಎಂದು ಅವರು ಹೇಳಿದರು.

ತಮ್ಮ ಮಾತಿನಲ್ಲಿ ಹಾಸ್ಯ ಬೆರೆಸಿದ ಚೆರಿಯನ್ ‘ಸಾಮಾನ್ಯ ಸನ್ನಿವೇಶಗಳಲ್ಲಿ,ಈ ಹಾಲ್ ಭರ್ತಿಯಾಗುತ್ತದೆ ಎಂದು ನಾನು ಭಾವಿಸುತ್ತಿದ್ದೆ. ಆದರೆ ನಿಗೂಢ ಕಾರಣಗಳಿಂದಾಗಿ ಇಲ್ಲಿಗೆ ಬರುವ ಜನರನ್ನು ಎಲ್ಲಿಯೋ ತಡೆಯಲಾಗಿದೆ ಎಂದು ನಾನು ಶಂಕಿಸಿದ್ದೇನೆ’ ಎಂದು ಹೇಳಿದಾಗ ಸಭಿಕರ ನಗು ಖಾಲಿ ಸಭಾಂಗಣವನ್ನು ಅಣಕಿಸಿದಂತಿತ್ತು.

ಪುಸ್ತಕ ಕುರಿತು ಚರ್ಚೆಯಲ್ಲಿ ಉಪಸ್ಥಿತರಿದ್ದ ಕೆಲವೇ ಅತಿಥಿಗಳ ಪೈಕಿ ಓರ್ವರಾಗಿದ್ದ ತನಿಖಾ ಪತ್ರಕರ್ತ ಗುಹಾ ಠಾಕುರ್ತಾ (Guha Thakurta)ಅವರೂ ಕಡಿಮೆ ಜನರು ಆಗಮಿಸಿದ್ದನ್ನು ಬೆಟ್ಟು ಮಾಡಿದರು. ಸಭಾಂಗಣದಲ್ಲಿ 200ಕ್ಕೂ ಅಧಿಕ ಜನರಿಗೆ ಸ್ಥಳಾವಕಾಶವಿತ್ತು,ಆದರೆ ನೀವು ನೋಡುತ್ತಿರುವಂತೆ ಹೆಚ್ಚೆಂದರೆ 20 ಜನರು ಸೇರಿದ್ದರು ಎಂದು ಕಾರ್ಯಕ್ರಮದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಠಾಕುರ್ತಾ ಹೇಳಿದರು.

ಅದಾನಿ ಗ್ರೂಪ್ ದಾಖಲಿಸಿರುವ ಆರು ಮಾನನಷ್ಟ ಮೊಕದ್ದಮೆಗಳನ್ನು ಎದುರಿಸುತ್ತಿರುವ ಠಾಕುರ್ತಾ, ಪುಸ್ತಕ ಅಥವಾ ಅದಾನಿ ಬಗ್ಗೆ ಪ್ರತಿಕ್ರಿಯಿಸಲು ಹಿಂಜರಿದಂತಿತ್ತು. ‘ನನ್ನ ವಿರುದ್ಧ ಪ್ರಕರಣಗಳಿವೆ, ಹೀಗಾಗಿ ನಾನು  ಹೆಚ್ಚು ಹೇಳಲು ಸಾಧ್ಯವಿಲ್ಲ’ ಎಂದರು.

ಅದಾನಿ ಜೀವನಚರಿತ್ರೆಯ ಲೇಖಕ ಆರ್.ಎನ್.ಭಾಸ್ಕರ(RN Bhaskar) ಮತ್ತು ಕಾರ್ಯಕ್ರಮದ ಆತಿಥೇಯ ಹಾಗೂ ಕಾರ್ಪೊರೇಟ್ ಸಲಹೆಗಾರ,ಇಮೇಜ್ ಗುರು ಚೆರಿಯನ್ ನಡುವೆ ಸಂವಾದ ಅಧಿವೇಶನ ನಿಗದಿಯಂತೆ ಸಂಜೆ ಆರು ಗಂಟೆಗೆ ಆರಂಭಗೊಳ್ಳಬೇಕಿತ್ತು,ಆದರೆ ಏಳು ಗಂಟೆಗೂ ಮೊದಲು ಆರಂಭಿಸಲು ಸಾಧ್ಯವಾಗಿರಲಿಲ್ಲ ಮತ್ತು ಕೇವಲ 40 ನಿಮಿಷಗಳಲ್ಲಿ ಮುಗಿದುಹೋಗಿತ್ತು.

‘ಭಾಸ್ಕರ್ 20 ವರ್ಷಗಳ ಕಾಲ ಅದಾನಿ ಮತ್ತು ಅವರ ಕುಟುಂಬ ಸದಸ್ಯರ ಮಾತುಗಳನ್ನು ಆಲಿಸಿದ್ದಕ್ಕೆ ನಾವು ನಿಜಕ್ಕೂ ಅವರಿಗೆ ಶಹಬ್ಬಾಸ್ ಹೇಳಲೇಬೇಕು. ಅಧಿಕೃತ ಜೀವನ ಚರಿತ್ರೆಗೆ ಅನುಮತಿ ಪಡೆಯಲಾಗದಿದ್ದರೂ ಪುಸ್ತಕವನ್ನು ತರುವ ತನ್ನ ಪ್ರಯತ್ನಗಳನ್ನು ಅವರು ನಿರಂತರವಾಗಿ ಮುಂದುವರಿಸಿದ್ದರು ’ ಎಂದು ಚೆರಿಯನ್ ಹೇಳಿದರು.

254 ಪುಟಗಳ ಪುಸ್ತಕವು ಉನ್ನತ ಪ್ರಗತಿಯ ಮೆಟ್ಟಿಲುಗಳನ್ನು ಹತ್ತುವಲ್ಲಿ ಅದಾನಿ ಮತ್ತು ಅವರ ಗುಂಪು ಅಳವಡಿಸಿಕೊಂಡ ಉದ್ಯಮ ಕಾರ್ಯತಂತ್ರಗಳ ಮೇಲೆ ಬೆಳಕು ಚೆಲ್ಲಿದೆ. ಅದಾನಿಯವರ ಅಸಾಧಾರಣ ಉನ್ನತಿಯ ಹೆಗ್ಗಳಿಕೆಯನ್ನು ಅದಾನಿ ಸಾಮ್ರಾಜ್ಯದ ಆಯಕಟ್ಟಿನ ಜಾಗಗಳಲ್ಲಿರುವ ಅದಾನಿ ಕುಟುಂಬ ಸದಸ್ಯರು ಮತ್ತು ವೃತ್ತಿಪರರಿಗೆ ನೀಡಿರುವ ಭಾಸ್ಕರ್, ಅವರಿಲ್ಲದ್ದಿರೆ ಗೌತಮ್ ಭಾಯಿ ಇಂತಹದೊಂದು ಬೃಹತ್ ಸಾಮ್ರಾಜ್ಯವನ್ನು ಸೃಷ್ಟಿಸುತ್ತಿದ್ದರೇ ಎಂಬ ಅನುಮಾನವಿದೆ ಎಂದು ಪುಸ್ತಕದಲ್ಲಿ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಅದಾನಿಯವರ ಉದ್ಯಮ ಸಾಮ್ರಾಜ್ಯ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಹಿಂದಿಕ್ಕಿ ಅತ್ಯಂತ ವೇಗವಾಗಿ ಬೆಳೆದಿದೆ.

ಸಭಿಕರೊಂದಿಗೆ ಸಂವಾದದ ಸಂದರ್ಭದಲ್ಲಿ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರದಿದ್ದರೂ ಅದಾನಿಯವರು ಇದೇ ಬೆಳವಣಿಗೆಯನ್ನು ಸಾಧಿಸುತ್ತಿದ್ದರೇ ಎಂದು ಓರ್ವರು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರವಾಗಿ ಭಾಸ್ಕರ್, ಮುಂದ್ರಾ ಬಂದರಿಗಾಗಿ ಭೂಮಿ ಖರೀದಿಸಿದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಮೊದಲ ವಿದ್ಯುತ್ ಸ್ಥಾವರ ಆರಂಭಗೊಂಡಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಮೊದಲ ಬಂದರನ್ನು ನಿರ್ಮಿಸಿದ ಬಳಿಕ ಎರಡನೆಯದು ಸುಲಭವಾಗುತ್ತದೆ, ಏಕೆಂದರೆ ನಿಮ್ಮ ಬಳಿ ಸಿದ್ಧ ಮಾದರಿಯಿರುತ್ತದೆ ಎಂದು ಹೇಳಿದರು.

ಅದಾನಿ ಗ್ರೂಪ್ ನ ಹಿತಾಸಕ್ತಿಗಳನ್ನು ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ಹೊಂದಿಸಿಕೊಂಡಿದ್ದು ಅದಾನಿ ಪಾಲಿಗೆ ಅತ್ತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ಭಾಸ್ಕರ್ ಪುಸ್ತಕದಲ್ಲಿ ಬರೆದಿದ್ದಾರೆ.

Similar News