‘ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ ಕೈಗೊಳ್ಳುವಂತೆ ವಿಧಾನಸಭೆ ಸ್ಪೀಕರ್ ಕಾಗೇರಿ ಕರೆ

Update: 2022-11-30 13:50 GMT

ಕಲಬುರಗಿ, ನ.30: ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ‘ನನ್ನ ಮತ ಯಾವುದೇ ಕಾರಣಕ್ಕೂ ಮಾರಾಟಕ್ಕಿಲ್ಲ’ ಎಂಬ ಆತ್ಮಸಾಕ್ಷಿಯ ಅಭಿಯಾನ ಕೈಗೊಳ್ಳುವಂತೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದ್ದಾರೆ.

ಬುಧವಾರ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ‘ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಯಲ್ಲಿಂದು ಹಣ, ತೋಳ್ಬಲ ಹಾಗೂ ಜಾತಿ ಬಲ ಪ್ರಮುಖ ಪಾತ್ರ ವಹಿಸುತ್ತಿವೆ. ಸಂವಿಧಾನ ಬದ್ಧವಾಗಿ ಸಿಕ್ಕಿರುವ ಮತದ ಹಕ್ಕನ್ನು ಮತದಾರರು ಅರಿಯಬೇಕು. ಮತ ಮಾರಾಟ ಮಾಡದೇ ಸ್ಫರ್ಧಾಳುಗಳಲ್ಲಿ ಉತ್ತಮರನ್ನು ಆಯ್ಕೆ ಮಾಡಿ. ಒಂದು ವೇಳೆ ಚುನಾವಣೆಯಲ್ಲಿ ನಿಂತವರಲ್ಲಿ ಯಾರೂ ಒಳ್ಳೆಯವರು ಕಾಣದಿದ್ದರೆ ನೋಟಾ(ಓಔಖಿಂ) ಬಟನ್ ಒತ್ತಿ ಎಂದು ಮಾರ್ಮಿಕವಾಗಿ ಅವರು ಹೇಳಿದರು. 

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿತವಾಗುತ್ತಿವೆ. ಭೃಷ್ಟಾಚಾರ ವ್ಯಾಪಿಸಿದೆ. ಜನಪ್ರತಿನಿಧಿಗಳು ಜನರಿಗೆ ನೀಡಿದ ಆಶ್ವಾಸನೆ ಈಡೇರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಕಾರ್ಯಾಂಗದಲ್ಲಿ ಮಾನವೀಯತೆ ಮರೆತ ಪರಿಣಾಮ ಜನರು ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಿ ರೋಸಿ ಹೋಗಿದ್ದಾರೆ ಎಂದು ಅವರು ತಿಳಿಸಿದರು.

ನ್ಯಾಯಾಲಯಗಳು ನ್ಯಾಯ ನೀಡುವ ಬದಲಾಗಿ ನಿರ್ಣಯ ನೀಡುತ್ತಿವೆ. ಇನ್ನು ಮಾಧ್ಯಮ ಕ್ಷೇತ್ರವೂ ಸಾಮಾಜಿಕ ಹೊಣೆಗಾರಿಕೆ ಮರೆತಿದ್ದು, ಇಲ್ಲಿಯೂ ಭ್ರಷ್ಟಾಚಾರ ಕಾಲಿಟ್ಟಿದೆ. ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯತೆಯನ್ನು ಮರೆತಂತಿವೆ. ಇದರಿಂದ ಆದರ್ಶ ಮೌಲ್ಯಗಳು, ನೈತಿಕತೆ ಅಧಃಪತನಕ್ಕೆ ಇಳಿದಿದೆ. ಇದಕ್ಕೆಲ್ಲ ಮತ ಮಾರಿಕೊಳ್ಳದೆ ಉತ್ತಮರನ್ನು ಆಯ್ಕೆ ಮಾಡುವುದೇ ಪರಿಹಾರವಾಗಿದೆ ಎಂದು ಅವರು ಹೇಳಿದರು. 

ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ನಿಟ್ಟಿನಲ್ಲಿ ಈಗಾಗಲೆ ವಿಧಾನಸಭೆಯಲ್ಲಿ ಚರ್ಚಿಸಲಾಗಿದೆ. ಪಕ್ಷಾಂತರ ಕಾಯ್ದೆಗೆ ಮತ್ತಷ್ಟು ಬಲ ನೀಡಲು ಚಿಂತನೆ ನಡೆದಿದೆ. ಪ್ರಾಣಾಳಿಕೆ ಈಡೇರಿಸುವತ್ತ ಆಡಳಿತ ಪಕ್ಷ ಗಮನಹರಿಸಬೇಕಿದೆ. ಇವೆಲ್ಲದರ ಬಗ್ಗೆ ಜನಾಭಿಪ್ರಾಯ ಮೂಡಿಸಲು ರಾಯಚೂರು, ಹುಬ್ಬಳ್ಳಿ, ದಾವಣಗೆರೆ, ವಿಜಯಪುರ, ಕೋಲಾರ ಸೇರಿ ಹಲವು ಕಡೆ ಸಂವಾದ ನಡೆಸಲಾಗಿದೆ ಎಂದು ಕಾಗೇರಿ ತಿಳಿಸಿದರು.

ಶಾಸಕರು ಸದನಕ್ಕೆ ಗೈರಾಗಿ ಕ್ಷೇತ್ರದಲ್ಲಿ ಮದುವೆ, ಹುಟ್ಟುಹಬ್ಬ, ಕ್ರೀಡಾಕೂಟ, ಜಾತ್ರೆ ಕಾರ್ಯಕ್ರಮಕ್ಕೆ ತೆರಳುತ್ತಾರೆ. ಅವರನ್ನು ಕೇಳಿದರೆ ಕ್ಷೇತ್ರದ ಮತದಾರರತ್ತ ಬೊಟ್ಟು ಮಾಡುತ್ತಾರೆ. ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳದ ಮತದಾರರು ತಮ್ಮ ಮದುವೆ, ವೈಯಕ್ತಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸುತ್ತಾರೆ. ಸಾರ್ವಜನಿಕ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿನೇ ಇಲ್ಲಿ ಮುಖ್ಯವೇ ಎಂದು ಅವರು ಪ್ರಶ್ನಿಸಿದರು.

ಆಧಾರ್ ಗೆ ವೋಟರ್ ಐ.ಡಿ. ಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು ಶೇ.100ರಷ್ಟು ಮಾಡಿದಲ್ಲಿ ಬಹುದೊಡ್ಡ ಬದಲಾವಣೆ ಚುನಾವಣೆ ವ್ಯವಸ್ಥೆಯಲ್ಲಿ ಕಾಣಬಹುದಾಗಿದೆ. ವಿಶ್ವದ ಬಹುತೇಕ ದೇಶಗಳಲ್ಲಿ ರಾಜಕೀಯ ಅಸ್ಥಿತರತೆ, ಆರ್ಥಿಕ ಅಶಿಸ್ತಿನಿಂದ ಅರಾಜಕತೆ ಸೃಷ್ಠಿಯಾಗಿದ್ದನ್ನು ಕಂಡಿದ್ದೇವೆ. ಅಂಬೇಡ್ಕರ್ ನೀಡಿದ ಶ್ರೇಷ್ಠ ಸಂವಿಧಾನದ ಪರಿಣಾಮ ನಮ್ಮ ದೇಶದಲ್ಲಿ ಇಂತಹ ಸಮಸ್ಯೆ ಕಳೆದ 75 ವರ್ಷಗಳಲ್ಲಿ ಎಂದೂ ಕಂಡುಬಂದಿಲ್ಲ. ಭಾರತವು ಪ್ರಗತಿಯ ಉತ್ತುಂಗದಲ್ಲಿದೆ ಎಂದು ಅವರು ಹೇಳಿದರು.

ಸಂವಾದದಲ್ಲಿ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿ ಸೇರಿದಂತೆ ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ವಿಶ್ವವಿದ್ಯಾಲಯದ ಕುಲಪತಿ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

Similar News