ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರದ ಮುಂದಿನ ಭಾಗವನ್ನು ಘೋಷಿಸಿದ ವಿವೇಕ್‌ ಅಗ್ನಿಹೋತ್ರಿ

Update: 2022-11-30 15:40 GMT

ಮುಂಬೈ: ತಮ್ಮ ಚಿತ್ರ ʼದಿ ಕಾಶ್ಮೀರ್ ಫೈಲ್ಸ್‌ʼ ನಲ್ಲಿ ಕಾಲ್ಪನಿಕ ದೃಶ್ಯಗಳನ್ನು ಗುರುತಿಸಲು ಸವಾಲು ಹಾಕಿದ ಬೆನ್ನಲ್ಲೇ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ʼದಿ ಕಾಶ್ಮೀರ್ ಫೈಲ್ಸ್: ಅನ್‌ರಿಪೋರ್ಟೆಡ್ʼ ಎಂಬ ಶೀರ್ಷಿಕೆಯಡಿಯಲ್ಲಿ ಚಲನಚಿತ್ರದ ಮುಂದಿನ ಭಾಗವನ್ನು ಮಾಡುವ ಭರವಸೆ ನೀಡಿದ್ದಾರೆ. ಅದಾಗ್ಯೂ, ಇದು  ಕಿರುಚಿತ್ರವೇ, ಸಾಕ್ಷ್ಯಚಿತ್ರವೇ ಅಥವಾ ಚಿತ್ರದ ಮುಂದುವರಿದ ಸರಣಿಯೇ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಇಸ್ರೇಲಿ ನಿರ್ದೇಶಕ ನಡಾವ್ ಲ್ಯಾಪಿಡ್ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ʼಕೊಳಕು ಹಾಗೂ ಅಜೆಂಡಾದ ಭಾಗ' ಎಂದು ಬಣ್ಣಿಸಿದ ಬಳಿಕ ಈ ಚಿತ್ರವು ಮತ್ತೆ ವಿವಾದದ ಕೇಂದ್ರಕ್ಕೆ ಬಂದಿತ್ತು. ಭಾರತದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರ ಅಧ್ಯಕ್ಷಾರಗಿರುವ ಲ್ಯಾಪಿಡ್‌, ಕಶ್ಮೀರ್‌ ಫೈಲ್ಸ್ ಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸುವ ಅರ್ಹತೆ ಹೊಂದಿಲ್ಲ ಎಂದು ಹೇಳಿದ್ದರು

ಆಜ್‌ತಕ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಗ್ನಿಹೋತ್ರಿ, “ನಾನು ಈಗ ನಿರ್ಧರಿಸಿದ್ದೇನೆ, ನಾನು ನಿಮ್ಮ ಚಾನಲ್ ಮೂಲಕ ಘೋಷಣೆ ಮಾಡುತ್ತಿದ್ದೇನೆ. ನಮ್ಮಲ್ಲಿ ಅನೇಕ ಕಥೆಗಳು, ಉಪಾಖ್ಯಾನಗಳಿವೆ, ನಾವು ಒಂದರ ಬದಲು 10 ಚಿತ್ರಗಳನ್ನು ಮಾಡಬಹುದಿತ್ತು. ಆಗ ಒಂದೇ ಒಂದು ಸಿನಿಮಾ ಮಾಡಬೇಕೆಂದುಕೊಂಡಿದ್ದೆ. ಆದರೆ ಈಗ, ನಾನು ಸಂಪೂರ್ಣ ಸತ್ಯವನ್ನು ʼದಿ ಕಾಶ್ಮೀರ್ ಫೈಲ್ಸ್ ಅನ್ ರಿಪೋರ್ಟ್ಡ್ʼ ಮೂಲಕ ಹೊರತರಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ.

“ಈಗ ಈ ವಿಷಯವು ಕಲೆಯನ್ನು ಮೀರಿದೆ, ಇದು ಈ ದೇಶದ ಘನತೆಯ ಪ್ರಶ್ನೆಯಾಗಿದೆ. ಹಾಗಾಗಿ, ನನ್ನ ಬಳಿ ಇರುವ ಯಾವುದೇ ಪುರಾವೆಗಳನ್ನು ನಾನು ಹೊರತಂದು ಜನರ ಮುಂದೆ ಪ್ರಸ್ತುತಪಡಿಸುವುದು ನನ್ನ ನೈತಿಕ ಜವಾಬ್ದಾರಿಯಾಗಿದೆ” ಎಂದು ಅಗ್ನಿಹೋತ್ರಿ ಹೇಳಿದ್ದಾರೆ.

ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಅಗ್ನಿಹೋತ್ರಿ, “ದಿ ಕಾಶ್ಮೀರ್ ಫೈಲ್ಸ್‌ನಲ್ಲಿನ ಒಂದು ದೃಶ್ಯ ಅಥವಾ ಸಂಭಾಷಣೆಯ ಒಂದೇ ಒಂದು ಸಾಲು ಕೂಡ ವಾಸ್ತವಿಕವಾಗಿ ತಪ್ಪಾಗಿದೆ ಅಥವಾ ಕಾಲ್ಪನಿಕ ಎಂದು ಸಾಬೀತಾದರೆ ಚಲನಚಿತ್ರಗಳ ನಿರ್ದೇಶನವನ್ನು ತ್ಯಜಿಸುತ್ತೇನೆ” ಎಂದು ಸವಾಲು ಹಾಕಿದ್ದರು.

ಅದಾಗ್ಯೂ, ಅಗ್ನಿಹೋತ್ರಿ ಸವಾಲಿನ ಬೆನ್ನಲ್ಲೇ ಚಿತ್ರತಂಡ ಚಿತ್ರದಲ್ಲಿ ನೀಡಿದ್ದ ಸ್ಪಷ್ಟೀಕರಣದಲ್ಲಿ “ಈ ಚಿತ್ರವು ಐತಿಹಾಸಿಕ ನೈಜತೆಯನ್ನು ಪ್ರತಿಪಾದಿಸುವುದಿಲ್ಲ” ಎಂಬ ಅಂಶದ ಬಗ್ಗೆ ನೆಟ್ಟಿಗರು ಗಮನ ಸೆಳೆದು ನಿರ್ದೇಶಕನನ್ನು ತರಾಟೆಗೆ ತೆಗೆದುಕೊಂಡಿದ್ದರು.

Similar News