ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ‘ಕೈ ಬಿಸಿ’ ಚರ್ಚೆ!

Update: 2022-11-30 16:09 GMT

ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕೆಲವು ಕಾಮಗಾರಿ ನಡೆಯುವಾಗ ಸ್ಥಳೀಯ ವಾರ್ಡ್ ಸದಸ್ಯರ ಗಮನಕ್ಕೆ ತರುವುದಿಲ್ಲ. ಇದರಿಂದ ಸಂವಹನ ಕೊರತೆ ಉಂಟಾಗುತ್ತಿದ್ದು ಆ ಭಾಗದ ಜನರು ಲಂಚದ ಆರೋಪ ಮಾಡುತ್ತಾರೆ. ಪುರಸಭೆ ಸದಸ್ಯರು ಮೊದಲು ಧ್ವನಿ ಎತ್ತುತ್ತಾರೆ, ಕೈ ಬಿಸಿ ಆದ ಮೇಲೆ ಸುಮ್ಮನೆ ಇರುತ್ತಾರೆ ಎಂಬ ಅಪವಾದ ಕೇಳುತ್ತಿದ್ದೇವೆ ಎಂದು ಪುರಸಭಾ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಇಂದು ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪುರಸಭಾ ಸದಸ್ಯ ಪ್ರಭಾಕರ್, ಕುಂದೇಶ್ವರ ರಸ್ತೆ ಕಾಮಗಾರಿ ಮಾಡುವಾಗ ಹಲವು ಲೋಪದೋಷಗಳಾಗಿವೆ. ಕಾಮಗಾರಿ ಅವ್ಯವಹಾರದ ಬಗ್ಗೆ ಲೋಕಾಯುಕ್ತಕ್ಕೆ ದೂರಿದ್ದು ಅವರು ಸ್ಥಳ ತನಿಖೆಗೆ ಬಂದಾಗ ವಾರ್ಡ್ ಸದಸ್ಯನಾದ ತನಗೆ ಮಾಹಿತಿ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ಮೇಲೆ ಲಂಚ ಪಡೆದ ಆರೋಪ ಮಾಡುತ್ತಿದ್ದು ಇದಕ್ಕೆಲ್ಲಾ ಉತ್ತರಿಸುವ ಜವಬ್ದಾರಿ ನನ್ನ ಮೇಲಿದೆ ಎಂದರು.

ಸದಸ್ಯ ಸಂತೋಷ್ ಶೆಟ್ಟಿ ಮಾತನಾಡಿ, ೨೫ಲಕ್ಷ ರೂ. ವೆಚ್ಚದ ಕಾಮಗಾರಿ ನಡೆಯುವ ಸ್ಥಳದಲ್ಲಿ ಇಂಜಿನಿಯರ್ ಇರಲಿಲ್ಲ. ರಾತ್ರಿ ಹೊತ್ತು ಕಾಮಗಾರಿ ನಡೆಸಿದ ಉದ್ದೇಶ ಏನು ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದರು. ಇದಕ್ಕೆ ಧ್ವನಿಯಾದ ಸದಸ್ಯ ಮೋಹನದಾಸ್ ಶೆಣೈ, ಕುಂದೇಶ್ವರ ರಸ್ತೆ ಕಾಮಗಾರಿ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಇಂಜಿನಿಯರ್ ಉದ್ದೆಶಿಸಿ ಹೇಳಿದರು.

ಇದಕ್ಕೆ ಉತ್ತರಿಸಿ ಇಂಜಿನಿಯರ್ ಸತ್ಯ, ಕಾಮಗಾರಿ ನಡೆಯುವ ವೇಳೆ ತಾನು ಬೈಂದೂರಿನಲ್ಲಿ ಪ್ರಭಾರಿಯಾಗಿ ಕರ್ತವ್ಯದಲ್ಲಿದ್ದೆ ಎಂದು ಸಮಜಾಯಿಷಿ ನೀಡಿ ದರು. ಶಾಸ್ತ್ರೀ ವೃತ್ತದಲ್ಲಿ ಸರ್ಕಲ್ ನಿರ್ಮಾಣ ವಿಚಾರದಲ್ಲಿ ಮಾಹಿತಿ ನೀಡಿದ ಅವರು, ಹೆದ್ದಾರಿ ಪ್ರಾಧಿಕಾರದಿಂದ ಹೈಮಾಸ್ಟ್ ತೆರವಾಗಬೇಕಾಗಿದ್ದು, ಬಳಿಕ ಉಳಿದ ಕಾಮಗಾರಿ ಆರಂಭವಾಗಲಿದೆ ಎಂದರು.

ಇಂಜಿನಿಯರ್ ಹುದ್ದೆ ಖಾಲಿ
ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ ಮಾತನಾಡಿ, ಕುಂದಾಪುರ ಪುರಸಭೆ ಯಲ್ಲಿ ಎಷ್ಟು ಅಧಿಕೃತ ಇಂಜಿನಿಯರ್‌ಗಳಿದ್ದಾರೆಂಬ ಮಾಹಿತಿ ನೀಡಬೇಕು. ಪುರಸಭೆಯಿಂದ ದೆಹಲಿವರೆಗೆ ನಿಮ್ಮದೆ ಸರಕಾರ ಇದ್ದು, ಇಲ್ಲಿಗೆ ಅಗತ್ಯವಿರುವ ಇಂಜಿಯರ್ ಹುದ್ದೆ ತುಂಬಲು ತಾಕತ್ತು ಪ್ರದರ್ಶಿಸಿ ಎಂದು ಕುಟುಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಪುರಸಭೆಗೆ  ಇಬ್ಬರು ಇಂಜಿನಿಯರ್ ಅಗತ್ಯವಿದ್ದು ಒಂದು ಹುದ್ದೆ ಖಾಲಿಯಿದೆ. ಈಗಾಗಾಲೇ ಈ ಸಂಬಂಧ ಮನವಿ ನೀಡಿದ್ದೇವೆ. ಮುಂದೆ ಶಾಸಕರು ಹಾಗೂ ಜಿಲ್ಲಾಧಿಕಾರಿ ಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಕುಂದಾಪುರ ಪುರಸಭೆ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಗಮನಾರ್ಹವಾದ ಕೆಲಸ ಆಗಬೇಕಿತ್ತು. ಪುರಭವನದಂತಹ ಗುರುತಿಸುವ ಕಾರ್ಯ ನಡೆಯಬೇಕಾಗಿತ್ತು. ಆದರೆ ರಸ್ತೆ, ಚರಂಡಿ, ಇಂಟರ್‌ಲಾಕ್ ಮೊದಲಾದವುಗಳಿಗೆ ಹಣ ಹಾಕಿದರೆ ಗುರುತರ ಕೆಲಸ ಆಗದು ಎಂದು ಚಂದ್ರಶೇಖರ್ ಖಾರ್ವಿ ದೂರಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಸುವರ್ಣ ಮಹೋತ್ಸವ ವೇಳೆ ಅಗತ್ಯ ಕಾಮಗಾರಿಗಳ ಬೇಡಿಕೆ ಪಟ್ಟಿಯನ್ನು ಸದಸ್ಯರುಗಳು ನೀಡಿದ್ದು ಸರ್ವ ಸದಸ್ಯರ ನಿಯೋಗ ಶಾಸಕರ ಬಳಿ ತೆರಳಿ ಬೇಡಿಕೆಗಳ ಮನವಿಯಲ್ಲಿ ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಸದಸ್ಯ ಗಿರೀಶ್ ಜಿ.ಕೆ., ಮುಖ್ಯಾಧಿಕಾರಿ ಮಂಜುನಾಥ್ ಆರ್. ಉಪಸ್ಥಿತರಿದ್ದರು.

ಜಲಸಿರಿ, ಒಳಚರಂಡಿ ಯೋಜನೆ ತನಿಖೆಗೆ ಆಗ್ರಹ
ಜಲಸಿರಿ ಹಾಗೂ ಒಳಚರಂಡಿ ಯೋಜನೆ ಎಂಬುದು ಕುಂದಾಪುರ ಪುರ ಸಭೆಯೇ ಬಿಳಿ ಆನೆ ಸಾಕಿದಂತಾಗಿದೆ. ನಾವೇ ಹಣ ನೀಡಿ ನಷ್ಟ ಅನುಭವಿಸು ತ್ತಿದ್ದೇವೆ ಎಂದು ಸಂತೋಷ್ ಕುಮಾರ್ ಶೆಟ್ಟಿ ಜಲಸಿರಿ ಯೋಜನೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪುರಸಭೆ ವತಿಯಿಂದ ಯೋಜನೆಗೆ ನೀಡಿದ ಕೆಲ ಅನುದಾನ ನಿಲ್ಲಿಸಬೇಕು. ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿ ಮುಂದಾಳತ್ವದಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು.

Similar News