ಬಾಕಿ ಪ್ರೋತ್ಸಾಹ ಧನ ಬಿಡುಗಡೆಗೆ ಪಟ್ಟು; ಆಶಾ ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟನೆ

Update: 2022-11-30 17:25 GMT

ಬೆಂಗಳೂರು, ನ.30: ರಾಜ್ಯ ಸರಕಾರ ಈ ಕೂಡಲೇ ಬಾಕಿಯಿರುವ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದರು.

ಬುಧವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ಎಐಯುಟಿಯುಸಿ) ನೇತೃತ್ವದಲ್ಲಿ ಜಮಾಯಿಸಿದ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಕಳೆದ ಮೂರು ತಿಂಗಳ ಹಿಂಬಾಕಿ ಗೌರವಧನವನ್ನು ರಾಜ್ಯ ಸರಕಾರ ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷೆ ಟಿ.ಸಿ.ರಮಾ, ಆಶಾ ಕಾರ್ಯಕರ್ತೆಯರು ಸುಗಮ ಹೆರಿಗೆ, ಮಗುವಿನ ಜನನ, ತಾಯಿ-ಶಿಶು ಆರೈಕೆ, ಗ್ರಾಮ ನೈರ್ಮಲ್ಯ ಸೇರಿದಂತೆ ಮುಖ್ಯವಾಗಿ ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವಗಳ ಹಂಗನ್ನು ಬಿಟ್ಟು ಜನರ ಸೇವೆ ಮಾಡಿದ್ದಾರೆ. ಆದರೆ ವಿಪರ್ಯಾಸವೆಂದರೆ ಸರಕಾರ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಿಂಚಿತ್ತೂ ಕಾಳಜಿ ತೋರದೇ ಅನ್ಯಾಯವೆಸಗುತ್ತಿದ್ದಾರೆ ಎಂದರು. 

ಮತ್ತೊಂದೆಡೆ ಆಶಾ ಕಾರ್ಯಕರ್ತೆಯರಿಗೆ ನಿಗದಿ ಪಡಿಸಿರುವ ಇಲಾಖೆಯ ಮುಖ್ಯ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಬೇರಾವುದೇ ಕಾರ್ಯಗಳಿಗೆ ಇವರುಗಳನ್ನು ತೊಡಗಿಸಬಾರದೆಂದು ಆದೇಶವಿದ್ದರೂ, ಹಲವಾರು ಕಡೆ ಒತ್ತಡ ಹೇರಿ ಆಶಾ ಕಾರ್ಯಕರ್ತೆಯರಿಗೆ ಎನ್‍ಸಿಡಿ ಸರ್ವೆ, ಈ ಸಂಜೀವಿನಿಯಂತಹ ಸರ್ವೆಗಳನ್ನು ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಎಐಯುಟಿಯುಸಿಯ ಮುಖಂಡರಾದ ಜಿ.ಎಚ್.ಹನುಮೇಶ್, ಶಣ್ಮುಗಂ, ಶ್ರೀಕಾಂತ್, ದುರ್ಗೇಶ್ ಸೇರಿದಂತೆ ಪ್ರಮುಖರಿದ್ದರು.

Full View

Similar News