ಬುಡಕಟ್ಟು ಪ್ರದೇಶಗಳಲ್ಲಿ 8ನೇ ತರಗತಿ ಮುಗಿಸುವ ಮುನ್ನವೇ ಶಾಲೆ ತೊರೆಯುತ್ತಿರುವ ಶೇ.50ರಷ್ಟು ವಿದ್ಯಾರ್ಥಿಗಳು: ವರದಿ

Update: 2022-12-01 14:47 GMT

ಹೊಸದಿಲ್ಲಿ: ಬುಡಕಟ್ಟು ಪ್ರದೇಶಗಳಲ್ಲಿ ಶಾಲೆಗಳಿಗೆ ಪ್ರವೇಶ ಪಡೆದ ಮಕ್ಕಳ ಪೈಕಿ ಶೇ.48.2ರಷ್ಟು ಮಕ್ಕಳು ಎಂಟನೇ ತರಗತಿಯನ್ನು ಮುಗಿಸುವ ಮುನ್ನವೇ ಶಾಲೆಗಳನ್ನು ತೊರೆಯುತ್ತಿದ್ದು, ಇವರಲ್ಲಿ ಬಾಲಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು 2022ರ ಬುಡಕಟ್ಟು ಅಭಿವೃದ್ಧಿ ವರದಿಯು ಬಹಿರಂಗಗೊಳಿಸಿದೆ. ಕೇಂದ್ರ ಸರಕಾರವು 2013ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿ ಸ್ಥಾಪಿಸಿರುವ ಸ್ವತಂತ್ರ ಸಂಸ್ಥೆ ಭಾರತ ಗ್ರಾಮೀಣ ಜೀವನೋಪಾಯ ಪ್ರತಿಷ್ಠಾನ (BRLF)ವು ನ.29ರಂದು ಈ ವರದಿಯನ್ನು ಬಿಡುಗಡೆಗೊಳಿಸಿದೆ ಎಂದು news18.com ವರದಿ ಮಾಡಿದೆ.

ಬುಡಕಟ್ಟು ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಹೆಚ್ಚಿಸಲು ರೂಪಿಸಲಾಗಿರುವ BRLF, ಕೆಲವೇ ವಿದ್ಯಾರ್ಥಿಗಳು 10ನೇ ತರಗತಿಯವರೆಗೆ ತಲುಪುತ್ತಿದ್ದು, ಶಾಲೆಗಳನ್ನು ತೊರೆಯುತ್ತಿರುವ ಮಕ್ಕಳ ಒಟ್ಟಾರೆ ಪ್ರಮಾಣ ಶೇ.62.4ರಷ್ಟಿದೆ. ಒಂದನೇ ತರಗತಿಗೆ ಪ್ರವೇಶ ಪಡೆಯುವ ಪರಿಶಿಷ್ಟ ಪಂಗಡ (ಎಸ್ಟಿ)ಗಳಿಗೆ ಸೇರಿದ ಮಕ್ಕಳ ಪೈಕಿ ಹೆಚ್ಚೆಂದರೆ ಶೇ.40ರಷ್ಟು ವಿದ್ಯಾರ್ಥಿಗಳು 10ನೇ ತರಗತಿಯವರೆಗೆ ತಲುಪುತ್ತಾರೆ, ಏಕೆಂದರೆ ಈ ಮಕ್ಕಳು ವಿವಿಧ ಹಂತಗಳಲ್ಲಿ ಶಾಲೆಗಳನ್ನು ತೊರೆಯುತ್ತಿದ್ದಾರೆ ಎಂದೂ ಹೇಳಿದೆ.

ಛತ್ತೀಸ್ ಗಡ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಒಡಿಶಾಗಳಲ್ಲಿಯ ಬುಡಕಟ್ಟು ಪ್ರದೇಶಗಳಲ್ಲಿ ವಿಶೇಷವಾಗಿ ಪ್ರಾಥಮಿಕ ತರಗತಿಗಳಲ್ಲಿ ವಿದ್ಯಾಭ್ಯಾಸವನ್ನು ತೊರೆಯುತ್ತಿರುವ ಮಕ್ಕಳ ಸಂಖ್ಯೆ ಇತರ ಸಮುದಾಯಗಳಿಂತ ಎಷ್ಟೋ ಹೆಚ್ಚಾಗಿದೆ ಎಂದು ದೇಶದಲ್ಲಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಯ ಜಾಡನ್ನು ಗುರುತಿಸಿರುವ ಮೊದಲ ದಾಖಲೆಯೆನ್ನಲಾಗಿರುವ ವರದಿಯು ಹೇಳಿದೆ. BRLF ಬುಡಕಟ್ಟು ಸಮುದಾಯಗಳ ಗಣನೀಯ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಛತ್ತೀಸ್ ಗಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಒಡಿಶಾ ಮತ್ತು ರಾಜಸ್ಥಾನಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ.

ಪ್ರಸ್ತುತ ಬುಡಕಟ್ಟು ಪ್ರದೇಶಗಳಲ್ಲಿ ಶಾಲೆಗಳನ್ನು ತೊರೆಯುತ್ತಿರುವವರ ಪ್ರಮಾಣ ಶೇ.31.3ರಷ್ಟಿದೆ (ವಿದ್ಯಾರ್ಥಿಗಳು ಶೇ.31.9 ಮತ್ತು ವಿದ್ಯಾರ್ಥಿನಿಯರು ಶೇ.30.7). ಬಾಲಕಿಯರಿಗಿಂತ ಬಾಲಕರೇ ಹೆಚ್ಚಾಗಿ ಶಾಲೆಗಳನ್ನು ತೊರೆಯುತ್ತಿದ್ದಾರೆ. ಪ್ರಾಥಮಿಕ ತರಗತಿಗಳ (1ರಿಂದ 8) ಶೇ.48.2ರಷ್ಟು (ಬಾಲಕರು ಶೇ.49.8 ಮತ್ತು ಬಾಲಕಿಯರು ಶೇ.46.4) ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿರುವುದು ಕಳವಳಕಾರಿ ಪ್ರವೃತ್ತಿಯಾಗಿದೆ ಎಂದು ವರದಿಯು ಹೇಳಿದೆ.

ಮಾಧ್ಯಮಿಕ ಶಿಕ್ಷಣ ಹಂತವನ್ನು ಪ್ರವೇಶಿಸಿದವರಲ್ಲಿ 10ನೇ ತರಗತಿಯ ಅಂತ್ಯದಲ್ಲಿ ಶೇ.63.2ರಷ್ಟು ಬಾಲಕರು ಮತ್ತು ಶೇ.61.4ರಷ್ಟು ಬಾಲಕಿಯರು ಶಾಲೆಗಳನ್ನು ತೊರೆದಿದ್ದಾರೆ. ‘ಎಸ್ಸಿ,ಎಸ್ಟಿ ಹಾಗೂ ಇತರ ಎಲ್ಲ ಸಮುದಾಯಗಳ ನಡುವೆ ಗಣನೀಯ ಅಂತರವಿದೆ. ಎಸ್ಟಿ ಮಕ್ಕಳ ಸ್ಥಿತಿಗತಿ ಹೆಚ್ಚು ಸವಾಲಿನದ್ದಾಗಿದೆ ’ ಎಂದು ವರದಿಯಲ್ಲಿ ಶೈಕ್ಷಣಿಕ ಸ್ಥಿತಿಗತಿ ಕುರಿತು ಅಧ್ಯಾಯವನ್ನು ಬರೆದಿರುವ ಶೈಕ್ಷಣಿಕ ಸಂಶೋಧಕಿ ಹಾಗೂ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕಿ ವಿಮಲಾ ರಾಮಚಂದ್ರನ್ ಹೇಳಿದರು.

ಕಾರಣಗಳೇನು?

ರಾಮಚಂದ್ರನ್ ಪ್ರಕಾರ, ಸ್ವಾತಂತ್ರ್ಯಾನಂತರ ಸಮಸ್ಯೆಗಳನ್ನು ಪರಿಶೀಲಿಸಲು ಹಲವಾರು ಸಮಿತಿಗಳನ್ನು ರಚಿಸಲಾಗಿದ್ದು, ಅವು ಇಂತಹುದೇ ಹಸ್ತಕ್ಷೇಪಗಳನ್ನು ಶಿಫಾರಸು ಮಾಡಿದ್ದವು. ಆದರೆ ರಾಜಕೀಯ ನಿರ್ಣಯದ ಕೊರತೆಯು ಅವುಗಳ ಅನುಷ್ಠಾನಕ್ಕೆ ಅಡ್ಡಿಯನ್ನುಂಟು ಮಾಡಿವೆ.

ಕೇಂದ್ರ ಸರಕಾರದ ಹೆಚ್ಚಿನ ಯೋಜನೆಗಳಲ್ಲಿ ಸಮಗ್ರ ದೇಶಕ್ಕಾಗಿ ರೂಪಿಸಲಾಗುತ್ತದೆ. ಅವು ಹೆಚ್ಚಾಗಿ ಸಂಘರ್ಷ ಮತ್ತು ಸ್ಥಳಾಂತರವನ್ನು ಎದುರಿಸುತ್ತಿರುವ ನಿರ್ದಿಷ್ಟ ಗುಂಪುಗಳ ಅಗತ್ಯಗಳಿಗೆ ಅನುಗುಣವಾಗಿರುವುದಿಲ್ಲ ಎಂದು ರಾಮಚಂದ್ರನ್ ಹೇಳಿದರು.

ರಾಜ್ಯದ ಭಾಷೆಯು ಬುಡಕಟ್ಟು ಭಾಷೆಗಿಂತ ಭಿನ್ನವಾಗಿರಬಹುದಾದ ಬುಡಕಟ್ಟು ಪ್ರದೇಶಗಳಲ್ಲಿ ಪ್ರಾಥಮಿಕ ತರಗತಿಗಳಲ್ಲಿ ಬೋಧನಾ ಮಾಧ್ಯಮವಾಗಿ ಮಾತೃಭಾಷೆಯ ಬಳಕೆಯನ್ನು ಹಲವಾರು ಶಿಫಾರಸುಗಳು ಸೂಚಿಸಿವೆ. 2020ರ ನೂತನ ಶಿಕ್ಷಣ ನೀತಿ (ಎನ್ಇಪಿ)ಯು ಇತ್ತೀಚಿನದಾಗಿದ್ದು, ಬುನಾದಿ ಹಂತದ ತರಗತಿಗಳಲ್ಲಿ ‘ಮನೆ ಭಾಷೆ ’ಬಳಕೆಯನ್ನು ಅದು ಕೇಂದ್ರೀಕರಿಸಿದೆ. ಆದಾಗ್ಯೂ ಈ ಪ್ರದೇಶಗಳಲ್ಲಿ ಮಕ್ಕಳಿಗೆ ಬೋಧಿಸಲು ಬಹು ಭಾಷಾ ಪಠ್ಯಪುಸ್ತಕಗಳು ಲಭ್ಯವಿಲ್ಲ.

ಜೊತೆಗೆ ಈ ಪ್ರದೇಶಗಳಲ್ಲಿ  ತರಬೇತುಗೊಂಡಿರುವ ಶಿಕ್ಷಕರ ಕೊರತೆಯೂ ಇದೆ. ಹೆಚ್ಚಿನ ಶಿಕ್ಷಕರು ಹೊರಗಿನವರಾಗಿದ್ದು,ಸ್ಥಳೀಯ ಬುಡಕಟ್ಟು ಭಾಷೆಗಳ ಜ್ಞಾನವನ್ನು ಹೊಂದಿರುವುದಿಲ್ಲ. ಬುಡಕಟ್ಟು ಮಕ್ಕಳು ಕಲಿಕೆಯ ಸಾಮರ್ಥ್ಯವನ್ನು ಹೊಂದಿಲ್ಲ ಎಂಬ ಪೂರ್ವಾಗ್ರಹವು ಶಿಕ್ಷಕರಲ್ಲಿರುವುದರಿಂದ ಅವರ ಮತ್ತು ವಿದ್ಯಾರ್ಥಿಗಳ ನಡುವೆ ಬೃಹತ್ ಸಾಮಾಜಿಕ ಅಂತರವೂ ಇದೆ ಎಂದು ರಾಮಚಂದ್ರನ್ ಹೇಳಿದರು.

Similar News