ಐಐಟಿ ನೇಮಕಾತಿ ಮೇಳ; ವಿದೇಶಿ ಕಂಪನಿಗಳಿಂದ ನೀರಸ ಸ್ಪಂದನೆ: ವರದಿ

Update: 2022-12-02 02:58 GMT

ಮುಂಬೈ: ಭಾರತದ ಪ್ರತಿಷ್ಠಿತ ಐಐಟಿ (Indian Institutes of Technology) ಗಳ ನೇಮಕಾತಿ ಸಪ್ತಾಹದ ಮೊದಲ ದಿನವಾದ ಗುರುವಾರ ವಿದೇಶಿ ಕಂಪನಿಗಳಿಂದ ನೀರಸ ಸ್ಪಂದನೆ ಕಂಡುಬಂದಿದೆ ಎಂದು timesofindia.com ವರದಿ ಮಾಡಿದೆ.

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಕಳೆದ ಬಾರಿಗಿಂತ ಕಡಿಮೆ ಸಂಖ್ಯೆಯಲ್ಲಿ ವಿದೇಶಿ ಉದ್ಯೋಗಗಳನ್ನು ಪಡೆದರು ಹಾಗೂ ಗರಿಷ್ಠ ವಾರ್ಷಿಕ ಅಂತರರಾಷ್ಟ್ರೀಯ ವೇತನ ಸುಮಾರು ಒಂದು ಕೋಟಿಯಷ್ಟು ಮಾತ್ರ ಇತ್ತು. 

ಆದರೆ ದೇಶೀಯ ನೇಮಕಾತಿ ದೊಡ್ಡ ಸಂಖ್ಯೆಯಲ್ಲಿ ನಡೆದಿದ್ದು, ಕೆಲ ನಿದರ್ಶನಗಳಲ್ಲಿ ಅಂತರರಾಷ್ಟ್ರೀಯ ಉದ್ಯೋಗಗಳನ್ನು ಪಡೆದ ವಿದ್ಯಾರ್ಥಿಗಳಿಗಿಂತಲೂ ಆಕರ್ಷಕ ವೇತನವನ್ನು ದೇಶಿ ಕಂಪನಿಗಳ ಉದ್ಯೋಗ ಪಡೆದ ವಿದ್ಯಾರ್ಥಿಗಳು ಗಳಿಸಿಕೊಂಡರು. ಈ ಬಾರಿ ಸಂದರ್ಶನ ಆನ್‍ಲೈನ್ ಹಾಗೂ ಆಫ್‍ಲೈನ್ ಹೀಗೆ ಹೈಬ್ರೀಡ್ ವಿಧಾನದಲ್ಲಿ ನಡೆದ ಹಿನ್ನೆಲೆಯಲ್ಲಿ ಕೆಲ ಐಐಟಿಗಳು ಮೊದಲನೇ ದಿನ ಉದ್ಯೋಗದ ಮಾಹಿತಿಯನ್ನು ಸಮಗ್ರವಾಗಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ.

ಕಳೆದ ಬಾರಿ ನೇಮಕಾತಿ ಸಪ್ತಾಹದ ಮೊದಲ ದಿನ ಇದುವರೆಗಿನ ಗರಿಷ್ಠ ಅಂದರೆ 1.8 ಕೋಟಿ ರೂಪಾಯಿಯ ದೇಶೀಯ ಪ್ಯಾಕೇಜ್ ಹಾಗೂ 2.05 ಕೋಟಿ ರೂಪಾಯಿಯ ಅಂತರರಾಷ್ಟ್ರೀಯ ಪ್ಯಾಕೇಜ್ ನೀಡಲಾಗಿತ್ತು. ಈ ಬಾರಿ ಕೇವಲ ಗುವಾಹತಿ ಐಐಟಿ 2021ರ ಸಾಧನೆಯನ್ನು ಮೀರಿಸಿದ್ದು, ಇಲ್ಲಿನ ವಿದ್ಯಾರ್ಥಿ ಗರಿಷ್ಠ ಅಂತರರಾಷ್ಟ್ರೀಯ ಆಫರ್ ಎನಿಸಿದ 2.4 ಕೋಟಿಯ ಆಫರ್ ಪಡೆದಿದ್ದಾರೆ. ದೇಶೀಯ ಗರಿಷ್ಠ ಆಫರ್ 1.1 ಕೋಟಿ ಆಗಿದ್ದು, ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದಾರೆ.

"ಈ ವರ್ಷ ಪಿಪಿಓ ಆಫರ್ ಮಾಡಿದ ಹಲವು ಕಂಪನಿಗಳು ಕೂಡಾ ಕಾಯಂ ನೇಮಕಾತಿಗೆ ಕ್ಯಾಂಪಸ್‍ಗೆ ಆಗಮಿಸಿವೆ. ಯುಎಕ್ಸ್ ಡಿನೈಸ್, ಕೋರ್ ಮ್ಯಾನ್ಯುಫ್ಯಾಕ್ಚರಿಂಗ್ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ" ಎಂದು ಐಐಟಿ ಗುವಾಹತಿ ವೃತ್ತಿ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಅಭಿಷೇಕ್ ಕುಮಾರ್ ಹೇಳಿದ್ದಾರೆ.

ಗುರುವಾರ ಸಂಜೆ 4 ಗಂಟೆಯವರೆಗೆ 46 ಕಂಪನಿಗಳು 168 ಆಫರ್‌ ಗಳನ್ನು ಮಾಡಿವೆ. ಈ ಪೈಕಿ ಎರಡು ಅಂತರರಾಷ್ಟ್ರೀಯ ಆಫರ್‌ ಗಳಾಗಿದ್ದು, ಒಂದು ಅಮೆರಿಕನ್ ಕಂಪನಿ.

ಮೊದಲ ಅವಧಿಯಲ್ಲಿ ಐಐಟಿ ಮದ್ರಾಸ್ ಒಂದು ಕೋಟಿಗಿಂತ ಹೆಚ್ಚಿನ ವೇತನದ 25 ಆಫರ್‌ ಗಳನ್ನು ಪಡೆದಿದೆ. ವಿದ್ಯಾರ್ಥಿಗಳು ನಾಲ್ಕು ಕಂಪನಿಗಳಿಂದ 15 ಅಂತರರಾಷ್ಟ್ರೀಯ ಆಫರ್‌ ಗಳನ್ನು ಪಡೆದಿದ್ದಾರೆ ಎಂದು timesofindia.com ವರದಿ ಮಾಡಿದೆ.

Similar News