ಹಂತಹಂತವಾಗಿ ವಿಷವುಣಿಸಿ ಪತಿಯ ಕೊಲೆಗೈದ ಪತ್ನಿ: ಪ್ರಕರಣ ಭೇದಿಸಿದ ಮುಂಬೈ ಪೊಲೀಸರು

Update: 2022-12-04 07:54 GMT

ಮುಂಬೈ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆಗೂಡಿ ಪತಿಗೆ ಹಂತಹಂತವಾಗಿ ವಿಷವುಣಿಸಿ (Slow Poisoning) ಆತನನ್ನು ಕೊಂದಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ(Mumbai) ಬೆಳಕಿಗೆ ಬಂದಿದೆ.

ಈ ಸಂಬಂಧ ಪಿತೂರಿ ಮತ್ತು ಕೊಲೆ ಆರೋಪದಲ್ಲಿ ಮೃತ ವ್ಯಕ್ತಿಯ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಡಿಸೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿ ಮಹಿಳೆ ಕವಿತಾ ಕೆಲವು ವರ್ಷಗಳ ಹಿಂದೆ ತನ್ನ ಪತಿ ಕಮಲ್ ಕಾಂತ್ ರಿಂದ ದೂರವಾಗಿದ್ದಳು. ಆದರೆ, ಮಕ್ಕಳ ಭವಿಷ್ಯದ ನೆಪ ಹೇಳಿ ಸಾಂತಾಕ್ರೂಜ್ ನಲ್ಲಿರುವ ಆತನ ಮನೆಗೆ ಮರಳಿ ಬಂದಿದ್ದಳು.

ಮೃತ ಕಮಲ್ ನಾಥ್ ಹಾಗೂ ಕವಿತಾಳ ಪ್ರಿಯಕರ ಹಿತೇಶ್ ಜೈನ್ ಇಬ್ಬರೂ ಬಾಲ್ಯದ ಗೆಳೆಯರಾಗಿದ್ದು, ಇಬ್ಬರೂ ವರ್ತಕ ಸಮುದಾಯಕ್ಕೆ ಸೇರಿದವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಕಮಲ್ ಕಾಂತ್ ಅವರ ತಾಯಿ ಉದರ ರೋಗದಿಂದ ದಿಢೀರನೇ ಸಾವಿಗೀಡಾಗಿದ್ದರು. ಇದಾದ ನಂತರ ಕಮಲ್ ಕಾಂತ್ ಅವರ ಆರೋಗ್ಯ ಕ್ಷೀಣಿಸಿತು. ರಕ್ತ ಪರೀಕ್ಷೆ ಮಾಡಿದಾಗ ರಕ್ತದಲ್ಲಿ ಆರ್ಸೆನಿಕ್ ಹಾಗೂ ಥಾಲಿಯಂ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡು ಬಂದಿತ್ತು. ವೈದ್ಯರ ಪ್ರಕಾರ, ಮನುಷ್ಯನ ರಕ್ತದಲ್ಲಿ ಲೋಹದ ಪ್ರಮಾಣವು ಕಂಡುಬರುವುದು ಅಸಹಜವಾಗಿತ್ತು.

ಈ ನಡುವೆ ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ನವೆಂಬರ್ 19ರಂದು ಕಮಲ್ ಕಾಂತ್ ನಿಧನರಾಗಿದ್ದರು.

ಪೊಲೀಸರು ಆರಂಭದಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡರಾದರೂ, ನಂತರ ಸಾವಿನ ಹಿಂದೆ ಪಿತೂರಿ ಸಾಧ್ಯತೆಯನ್ನು ಸಂಶಯಿಸಿದರು. ಹೀಗಾಗಿ ಪ್ರಕರಣವನ್ನು ಮುಂಬೈ ಕ್ರೈಂ ವಿಭಾಗದ ಪೊಲೀಸರಿಗೆ ವರ್ಗಾಯಿಸಿದರು. ಇದರ ಬೆನ್ನಿಗೇ ಕವಿತಾ ಹಾಗೂ ಆಕೆಯ ಪ್ರಿಯಕರ ಹಿತೇಶ್ ಜೈನ್ ಅನ್ನು ಪೊಲೀಸರು ಬಂಧಿಸಿದರು.

ಇನ್ಸ್ ಪೆಕ್ಟರ್ ಸಂಜಯ್ ಖಟಾಲೆ ಪ್ರಕಾರ, ಮೃತ ವ್ಯಕ್ತಿಯ ವೈದ್ಯಕೀಯ ವರದಿ, ಆತನ ಪತ್ನಿಯೂ ಸೇರಿದಂತೆ ಕುಟುಂಬದ ಸದಸ್ಯರ ಹೇಳಿಕೆ, ಹಾಗೆಯೇ ಮೃತ ವ್ಯಕ್ತಿಯ ಆಹಾರ ಕ್ರಮ ಕುರಿತು ಮಾಹಿತಿಗಳು ಕೊಲೆಯ ಹಿಂದಿನ ಪಿತೂರಿ ಹಾಗೂ ಕೊಲೆಗಿದ್ದ ಕಾರಣವನ್ನು ಬಯಲುಗೊಳಿಸಲು ನೆರವಾದವು ಎಂದು ಹೇಳಿದ್ದಾರೆ.

ಕವಿತಾ ಹಾಗೂ ಆಕೆಯ ಪ್ರಿಯಕರ ಹಿತೇಶ್ ಜೈನ್, ಕಮಲ್ ಕಾಂತ್ ಅವರನ್ನು ಕೊಲ್ಲುವ ಉದ್ದೇಶದಿಂದ ಅವರ ಆಹಾರದಲ್ಲಿ ಹಂತಹಂತವಾಗಿ ವಿಷ ಬೆರೆಸಿದರು ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸದ್ಯ ಪೊಲೀಸರು, ಕಮಲ್ ಕಾಂತ್ ಅವರ ತಾಯಿ ಕೂಡಾ ಇದೇ ಬಗೆಯ ಅಸ್ವಸ್ಥತೆಯಿಂದ ಅಸು ನೀಗಿದ್ದರಿಂದ, ಆಕೆಗೂ ವಿಷವುಣಿಸಿ ಕೊಲೆ ಮಾಡಿರಬಹುದೇ ಎಂಬ ಕುರಿತು ತನಿಖೆ ಕೈಗೊಂಡಿದ್ದಾರೆ. 

ಇದನ್ನೂ ಓದಿ: ಮತದಾರರ ಪಟ್ಟಿಯಿಂದ ದಿಲ್ಲಿ ಕಾಂಗ್ರೆಸ್  ಅಧ್ಯಕ್ಷರ ಹೆಸರು ನಾಪತ್ತೆ

Similar News