ಇಂಗ್ಲೆಂಡ್‌ನಲ್ಲಿ ಜನಮೆಚ್ಚುಗೆ ಪಡೆದ ಯು.ಕೆ. ಹವ್ಯಾಸಿ ಕಲಾವಿದರ ಯಕ್ಷಬ್ಯಾಲೆ ‘ಜಟಾಯು ಮೋಕ್ಷ’

Update: 2022-12-04 14:10 GMT

ಉಡುಪಿ, ಡಿ.4: ನ.27ರಂದು ಇಂಗ್ಲೆಂಡಿನ ಪ್ರದರ್ಶನ ಕಲೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬಯಲಾಟ ಯು.ಕೆ. ಹೆಸರಿನಲ್ಲಿ ಇಂಗ್ಲೆಂಡಿನಲ್ಲಿ ಜನಪ್ರಿಯಗೊಂಡಿರುವ ಅಲ್ಲಿನ ಹವ್ಯಾಸಿ ಕಲಾವಿದರಿಂದ ಮೊದಲ ಬಾರಿಗೆ ಪ್ರದರ್ಶನಗೊಂಡ ಯಕ್ಷಗಾನ ಬ್ಯಾಲೆ ‘ಜಟಾಯು ಮೋಕ್ಷ’ ಭಾರೀ ಜನಮೆಚ್ಚುಗೆ ಪಡೆಯಿತು.

ಇಂಗ್ಲೆಂಡಿನ ಮಿಲ್ಟನ್ ಕೇನ್ಸ್ ನಗರದಲ್ಲಿ ನಡೆದ ಈ ಪ್ರದರ್ಶನವನ್ನು  ವಿವಿಧ ಸಂಗೀತ, ಕಲಾ, ನಾಟಕ ಸಂಘಗಳ ವೀಕ್ಷಕರೂ, ವಿಮರ್ಶಕರೂ ಹೊಗಳಿದರು. ಈ ಯಕ್ಷಗಾನ ಪ್ರದರ್ಶನ ಮಾಡಿರುವ ಇಂಗ್ಲೆಂಡಿನ ಬಯಲಾಟ ಯು. ಕೆ. ಹವ್ಯಾಸಿ ಕಲಾವಿದರ ಯಕ್ಷಗಾನ ತಂಡ, ನಮ್ಮ ಬೈಂದೂರು ಮೂಲದ, ಪ್ರಸ್ತುತ ಇಂಗ್ಲೆಂಡಿನ ಡೋಂಕಾಸ್ಟರ್ ನಗರದಲ್ಲಿ ವೈದ್ಯರಾಗಿರುವ ಡಾ. ಗುರುಪ್ರಸಾದ್ ಪಟ್ವಾಲ್ ಪ್ರಾರಂಭಿಸಿ, ನಡೆಸಿಕೊಂಡು ಬರುತ್ತಿರುವ ಹವ್ಯಾಸಿ ಯಕ್ಷಗಾನ ತಂಡವಾಗಿದೆ.

ಇಂಗ್ಲೆಂಡ್ ಹಾಗೂ ಯುರೋಪಿನಲ್ಲಿ ಯಕ್ಷಗಾನದ ಪ್ರದರ್ಶನ ಹಾಗೂ ಅಲ್ಲಿನ ಜನರಿಗೆ ಈ ಸುಂದರ, ಶ್ರೀಮಂತ ಕಲೆಯ ಸವಿಯುಣಿಸುವುದಷ್ಟೇ ಡಾ.ಗುರುಪ್ರಸಾದ್ ಅವರ ಉದ್ದೇಶವಾಗಿದೆ. ಲಾಭ-ನಷ್ಟದ ಲೆಕ್ಕಾಚಾರ ಅವರಿಗಿಲ್ಲ. ಇಂಗ್ಲೆಂಡ್‌ನಲ್ಲಿ ಹಲವೆಡೆ ಯಕ್ಷಗಾನವನ್ನು ಪ್ರದರ್ಶಿಸಿರುವ ಹಾಗೂ ಅಂತಾರಾಷ್ಟ್ರೀಯ ಕಲಾ ಸಮ್ಮೇಳನಗಳಲ್ಲಿ ಕರ್ನಾಟಕದ ಈ ಭವ್ಯ ಕಲೆಯನ್ನು ಮೊದಲ ಬಾರಿಗೆ ತೋರಿಸಿರುವ ಹೆಮ್ಮೆ ಡಾ.ಗುರುಪ್ರಸಾದ್ ಪಟ್ಟಾಲ್ ಅವರಿಗಿದೆ.

ಕೊರೋನ ಮೊದಲ ಬಾರಿ ಭಾರತದಲ್ಲಿ ಹಬ್ಬಿದಾಗ ಹಲವು ಯಕ್ಷಗಾನ ಕಲಾವಿದರು ಆರ್ಥಿಕವಾಗಿ ಬಹಳ ಕಷ್ಟ ಅನುಭವಿಸಿದ್ದರು. ಅವರಿಗೆ ಸಹಾಯವಾಗಲೆಂದು ಇಲ್ಲಿ ಯಕ್ಷಗಾನ ತರಬೇತಿಯನ್ನು ಆನ್‌ಲೈನ್ ಮೂಲಕ ‘ಬಯಲಾಟ ಯು.ಕೆ.’ ಹೆಸರಿನಲ್ಲಿ ಡಾ.ಗುರುಪ್ರಸಾದ್ ಪಟ್ಟಾಲ್ ಪ್ರಾರಂಭಿಸಿದ್ದರು. ಈ ಕ್ಲಾಸುಗಳಲ್ಲಿ ಸಂಗ್ರಹಿಸಿದ ಹಣವನ್ನು ಊರಿನಲ್ಲಿ ಕಷ್ಟದಲ್ಲಿದ್ದ ಯಕ್ಷಗಾನ ಕಲಾವಿದರ ಕುಟುಂಬಕ್ಕೆ ತಲುಪಿಸಿದ್ದರು.

ಡಾ.ಗುರುಪ್ರಸಾದ್ ಪಟ್ಟಾಲ್ ಅವರಿಗೆ ಮಾರಣಕಟ್ಟೆ ಮೇಳದ ಪ್ರಧಾನ ಸ್ತ್ರೀವೇಷಧಾರಿ ಶ್ರೀಧರ ಗಾಣಿಗ ಅವರು ಆನ್‌ಲೈನ್ ಕ್ಲಾಸ್ ನಡೆಸಲು ಹಾಗೂ ವೇಷಭೂಷಣ ಒದಗಿಸಲು ಸಹಾಯ ಮಾಡಿದ್ದರು. ಇಂಗ್ಲೆಂಡ್‌ನ ಅವರ ವಿದ್ಯಾರ್ಥಿಗಳು ಬಹಳ ಶ್ರದ್ಧೆಯಿಂದ ಕಲಿತು, ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧರಾದರು. ಇಂಗ್ಲೆಂಡ್‌ನಲ್ಲಿರುವ ಬಯಲಾಟ ಯು.ಕೆ. ವಿದ್ಯಾರ್ಥಿ ಗಿರೀಶ್ ಪ್ರಸಾದ್ ಅವರು ಡಾ.ಗುರುಪ್ರಸಾದ್ ಪಟ್ಟಾಲ್ ಹಾಗೂ ಶ್ರೀಧರ ಗಾಣಿಗರಿಗೆ ಈ ಕಾಸ್‌ಗಳನ್ನು ನಡೆಸಲು ಸಹಾಯ ಮಾಡಿದರು.

ಬಯಲಾಟ ಯು.ಕೆ. ಮೊನ್ನೆ ಪ್ರದರ್ಶಿಸಿದ ಯಕ್ಷಗಾನ ಬ್ಯಾಲೆ ‘ಜಟಾಯು ಮೋಕ್ಷ’ದ ಪರಿಕಲ್ಪನೆ, ಭಾವರೂಪ, ಸಂಗೀತ ಸಂಯೋಜನೆ ಹಾಗೂ ನಿರ್ದೇಶನ ಉಡುಪಿಯ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದ ನಿರ್ದೇಶಕ ಹಾಗೂ ಯಕ್ಷಗಾನ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣರದ್ದು. ಅವರ ಮಗ ಶಿಶಿರ ಸುವರ್ಣ ಅದನ್ನು ಇಂಗ್ಲೆಂಡಿನಲ್ಲಿ ಬಯಲಾಟ ಯು.ಕೆ.ಯ ಕಲಾವಿದರಿಗೆ ಶ್ರದ್ಧೆ ಹಾಗೂ ತಾಳ್ಮೆಯಿಂದ ನಿರ್ದೇಶಿಸಿದರು.

ಯಕ್ಷಗಾನ ಕಲೆಯ ಪೂರ್ವರಂಗದ ಕೋಡಂಗಿ ಹಾಗೂ ಬಾಲಗೋಪಾಲ ನೃತ್ಯದಿಂದ ಯಕ್ಷಗಾನ ಪರಂಪರೆಯ ಪೂರ್ಣ ಪರಿಚಯವನ್ನು ಬಯಲಾಟ ಯು.ಕೆ.ಯ ಕಲಾವಿದರು ವಿದೇಶಿ ನೆಲದಲ್ಲಿ ಮಾಡಿಕೊಟ್ಟರು. ಸ್ಕಾಟ್ಲೆಂಡ್‌ನ ಆಬಾರ್ದಿನ್‌ನಲ್ಲಿ ನೆಲೆಸಿರುವ ಮಂಗಳೂರು ಮೂಲದ ನವೀನ್ ಹಾಗೂ ನವ್ಯ ಕಿರೋಡಿಯನ್ ಅವರ ಪುತ್ರರಾದ ತನಿಷ್ ಹಾಗೂ ರಿಯಾಂಶ ಬಾಲಗೋಪಾಲ ನೃತ್ಯ ಮಾಡಿದರು. ಮುಂದೆ ಅವರು ಬ್ಯಾಲೆಯಲ್ಲಿ ರಾಮ ಮತ್ತು ಲಕ್ಷ್ಮಣರಾಗಿಯೂ ವೇಷ ಹಾಕಿ ಕುಣಿದರು. ಡಾ.ಗುರುಪ್ರಸಾದ್ ಪಟ್ಟಾಲ್ ರಾವಣನಾಗಿ ಮೆರೆದರು. ರಾವಣ ವೇಷಧಾರಿಯಾಗಿ ಅವರು  ಈಗ ಬಡಗುತಿಟ್ಟಿನಲ್ಲಿ ಮರೆಯಾಗುತ್ತಿರುವ ಬಣ್ಣದ ವೇಷದ ಒಡ್ಡೋಲಗವನ್ನು ಪರಿಚ ಯಿಸಿದರು.

ಇಂಗ್ಲಂಡ್‌ನಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ.ದೀಪಾ ಪಟ್ಟಾಲ್ ಮಾಯಾ ಜಿಂಕೆಯಾಗಿ, ಉದ್ಯಮಿ ನಿರುಪಮಾ ಶ್ರೀನಾಥ್ ಸೀತೆಯಾಗಿ ಸುಂದರವಾಗಿ ಅಭಿನಯಿಸಿದರು. ಗಿರೀಶ್ ಪ್ರಸಾದ್ ಜಟಾಯುವಾಗಿ ಜನಮನ್ನಣೆ ಪಡೆದರೆ, ಗುರು ಶಿಶಿರ ಸುವರ್ಣ ಕಪಟ ಸನ್ಯಾಸಿಯಾಗಿ ಪ್ರೇಕ್ಷಕರ ಗಮನ ಸೆಳೆದರು. 

ಇದೇ ಸಂದರ್ಭದಲ್ಲಿ ಡಾ.ಗುರುಪ್ರಸಾದ್ ಪಟ್ಟಾಲ್ ಅವರು ಬಯಲಾಟ ಯು.ಕೆ. ಪರವಾಗಿ ಮೊದಲ ಗುರು ಶ್ರೀಧರ ಗಾಣಿಗ, ಜಟಾಯು ಮೋಕ್ಷ  ಬ್ಯಾಲೆ ನಿರ್ದೇಶಿಸಿದ ಗುರು ಬನ್ನಂಜೆ ಸಂಜೀವ ಸುವರ್ಣರನ್ನು ಸ್ಮರಿಸಿ ಅವರನ್ನು ಸಭೆಗೆ ಪರಿಚಯಿಸಿದರು. ಇಲ್ಲಿ ಬ್ಯಾಲೆ ನಿರ್ದೇಶಿಸಿದ ಶಿಶಿರ ಸುವರ್ಣರನ್ನು  ಸನ್ಮಾನಿಸಿದರು.

ಬಯಲಾಟ ಯು.ಕೆ. ಇಂಗ್ಲಂಡ್‌ನಲ್ಲಿ ಮುಂದೆಯೂ ಯಕ್ಷಗಾನ ಕ್ಷೇತ್ರದಲ್ಲಿ ಹಲವು ಪ್ರಯೋಗ ಹಾಗೂ ಪ್ರದರ್ಶನ ಗಳನ್ನು ನೀಡಲಿದೆ ಎಂದು ಡಾ.ಗುರುಪ್ರಸಾದ್ ಪಟ್ಟಾಲ್ ಭರವಸೆ ನೀಡಿದ್ದಾರೆ.

Similar News