ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹೊರತುಪಡಿಸಿ ಇತಿಹಾಸ ನೆನೆಯಲು ಸಾಧ್ಯವೇ?: ಪಿ.ಸಾಯಿನಾಥ್

Update: 2022-12-04 15:35 GMT

ಬೆಂಗಳೂರು, ಡಿ. 4: ‘ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರನ್ನು ಹೊರತುಪಡಿಸಿ ಭಾರತೀಯರ ಇತಿಹಾಸ, ಸ್ವಾತಂತ್ರ್ಯ ಸಂಗ್ರಾಮವನ್ನು ನೆನೆಯಲು ಸಾಧ್ಯವೇ?’ ಎಂದು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಪ್ರಶ್ನಿಸಿದರು.

ರವಿವಾರ ನಗರದ ಚರ್ಚ್‍ಸ್ಟ್ರೀಟ್‍ನಲ್ಲಿರುವ ಬ್ಲಾಸಮ್ ಬುಕ್ ಹೌಸ್ ಹಮ್ಮಿಕೊಂಡಿದ್ದ, ಅವರೇ ರಚಿಸಿರುವ ‘ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಪುಸ್ತಕದ ಓದುಗರನ್ನುದ್ದೇಶಿಸಿ ಅವರು ಮಾತನಾಡಿದರು.

ಬ್ರಿಟಿಷರ ವಿರುದ್ಧ ನೇರವಾಗಿ ಹೋರಾಟ ನಡೆಸಿದ ಮೊದಲ ಅರಸ ಟಿಪ್ಪು ಸುಲ್ತಾನ್. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಟಿಪ್ಪು ಸುಲ್ತಾನರ ಪಾತ್ರ ಸ್ಮರಣೀಯವಾಗಿದ್ದು, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮಿಬ್ಬರು ಮಕ್ಕಳನ್ನು ಬಲಿದಾನ ಮಾಡಿದ ಧೀರ ಅವರು. ಅವರನ್ನು ರಾಜಕೀಯ ಕಾರಣಗಳಿಗೆ ಕೈಬಿಟ್ಟು, ಇತಿಹಾಸ ನೆನೆಪು ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಾಯಿನಾಥ್ ನುಡಿದರು.

ದೇಶ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಆಜಾದಿ ಕಾ ಅಮೃತ ಮಹೋತ್ಸವ ಎಂದು ವಿಶೇಷ ಕಾರ್ಯಕ್ರಮ ಘೋಷಿಸಿತು. ಆದರೆ, ವಿಪರ್ಯಾಸ ಎಂದರೆ, ಕೇಂದ್ರ ಸರಕಾರದ ಯಾವುದೇ ಅಧಿಕೃತ ವೆಬ್‍ಸೈಟ್‍ನಲ್ಲಿ ನೈಜ ಹೋರಾಟಗಾರರಿಗೆ ಗೌರವವೇ ನೀಡಿಲ್ಲ. ಎಲ್ಲ ನೋಡಿದರೂ, ಒಬ್ಬರೇ ಕಾಣುತ್ತಾರೆ ಎಂದು ಅವರು ಟೀಕಿಸಿದರು.

ಕೇಂದ್ರ ಸರಕಾರ ಸ್ವಾತಂತ್ರ್ಯ ಹೋರಾಟಗಾರರನ್ನು ಆಯ್ಕೆ ಮಾಡುವ ಸ್ಥಿತಿ ತಲುಪಿದೆ. ಅನೇಕ ಹೋರಾಟಗಾರರನ್ನು ಜನರು ಮರೆಯುವಂತೆ ಮಾಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲರ ಪರಿಶ್ರಮವನ್ನು ನಾವು ಗುರುತಿಸಿ, ಗೌರವಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪುಸ್ತಕ ಕುರಿತು ಉಲ್ಲೇಖಿಸಿದ ಅವರು, ಇದೊಂದು ದಾಖಲೆ ಸಂಗ್ರಹ ಮಾಡಿರುವ ಪುಸ್ತಕದಂತೆ ಇದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಸಾಮಾನ್ಯರ ಮಾಹಿತಿ, ಅವರ ಹೋರಾಟದ ವೈಖರಿಗಳನ್ನು ಬರೆಯಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಕೊಂಡಿತ್ತು. ಹೀಗಾಗಿ, ಇತಿಹಾಸ ನೆನಪು ಮಾಡಿಕೊಳ್ಳುವಾಗ ಸಾಮಾನ್ಯ ಹೋರಾಟಗಾರನ್ನು ಸ್ಮರಿಸಬೇಕೆನ್ನುವುದು ನನ್ನ ಉದ್ದೇಶ ಎಂದು ಸಾಯಿನಾಥ್ ನುಡಿದರು.

Similar News