ಇಂದಿನ ರಾಜಕಾರಣ ಪಂಚ ಮಹಾಪಾತಕಗಳಿಂದ ಕೂಡಿದೆ: ದಿನೇಶ್‍ ಅಮೀನ್ ಮಟ್ಟು

Update: 2022-12-04 16:33 GMT

ಬೆಂಗಳೂರು, ಡಿ.04: ಇವತ್ತಿನ ರಾಜಕಾರಣ ಜಾತಿ, ಭ್ರಷ್ಟಾಚಾರ, ಅಜ್ಞಾನ, ಆತ್ಮವಂಚನೆ, ಸೈದ್ಧಾಂತಿಕ ಗೊಂದಲಗಳೆಂಬ ಪಂಚಮಹಾಪಾತಕಗಳಿಂದ ತಾಂಡವವಾಡುತ್ತಿವೆ ಎಂದು ಹಿರಿಯ ಪತ್ರಕರ್ತ ದಿನೇಶ್‍ ಅಮೀನ್ ಮಟ್ಟು ವಿಷಾದ ವ್ಯಕ್ತಪಡಿಸಿದ್ದಾರೆ.

ರವಿವಾರ, ಗಾಂಧಿಭವನದಲ್ಲಿ ನಡೆದ ಶತಮಾನದ ಶಾಂತವೇರಿ ವಿಚಾರ ಸಂಕಿರಣ ಮತ್ತು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋಪಾಲಗೌಡರ ರಾಜಕೀಯ ಚಿಂತನೆಗಳು, ವಿಚಾರಗಳು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪುತ್ತಿಲ್ಲ ಎನ್ನುವುದು ವಿಷಾದಕರ ಸಂಗತಿ. ವೈಚಾರಿಕ ಚಿಂತನೆಗಳನ್ನು ಜನರು ತಿಳಿದುಕೊಳ್ಳುವ ಮನಸ್ಸು ಮಾಡುವುದಿಲ್ಲ. ಅಂದಿನ ರಾಜಕಾರಣ ಮತ್ತು ಪ್ರಸ್ತುತ ರಾಜಕಾರಣವನ್ನು ಹೋಲಿಸಲು ಎಂದಿಗೂ ಸಾಧ್ಯವಿಲ್ಲ. ಇವತ್ತಿನ ರಾಜಕಾರಣದಲ್ಲಿ ಮಹಾಪಾತಕಗಳು ಅಡಗಿವೆ. ಇಂದು ಪ್ರತಿಯೊಬ್ಬ ವ್ಯಕ್ತಿಯೂ ಈ ಪಂಚಮಹಾಪಾತಕಗಳಿಂದ ವಿಮುಕ್ತನಾದರೆ ಮಾತ್ರ ಸಮಾಜದಲ್ಲಿ ಮನುಷ್ಯನಾಗಿ ಬದುಕಲು ಸಾಧ್ಯ ಎಂದು ತಿಳಿಸಿದರು.

ಅಂಬೇಡ್ಕರ್, ಲೋಹಿಯಾ, ಗೋಪಾಲಗೌಡರು, ಕುವೆಂಪು ಅವರ ವರ್ತಮಾನ ಬಹಳ ಕಷ್ಟಗಳಿಂದ ಕೂಡಿತ್ತು. ಅಂತಹ ಕಷ್ಟ ಕಾಲದಲ್ಲೂ ತಮ್ಮ ಪ್ರಾಮಾಣಿಕತೆಯ ಬದುಕನ್ನು ನಡೆಸಿದ್ದರು. ರಾಜಕಾರಣದಲ್ಲಿ ಎಂಭತ್ತರ ದಶಕ ಚಳುವಳಿಯುಗವಾಗಿತ್ತು. ಆ ಕಾಲದಲ್ಲಿ ಗೋಪಾಲಗೌಡರು ರಾಜಕೀಯ ಸಂತರಾಗಿದ್ದರು. ಅವರು ಬಿತ್ತಿದ ಬೀಜ ಫಲ ಕೊಡುವಷ್ಟರಲ್ಲಿ ಕಾಲವಾಗಿದ್ದರು ಎಂದರು.

ಜಾತಿಯ ಪ್ರಧಾನವಾಗಿ ಇವತ್ತಿನ ರಾಜಕಾರಣ ನಿಂತಿದೆ. ಆದರೆ ಯಾವ ಜಾತಿಯನ್ನು ಲೆಕ್ಕಿಸದ ಗೋಪಾಲಗೌಡರನ್ನು ಜನರೇ ಹಣ ಕೊಟ್ಟು ಮತ ನೀಡಿ ಗೆಲ್ಲಿಸಿದ್ದರು. ರಾಜಕಾರಣದಲ್ಲಿ ಹತ್ತು ತಲೆಮಾರಿಗೆ ಆಗುವಷ್ಟು ಆಸ್ತಿ ಅಂತಸ್ತನ್ನು ಸಂಪಾದಿಸಬೇಕೆನ್ನುವ ಕಾಲಘಟ್ಟದಲ್ಲಿ ಗೋಪಾಲಗೌಡರು ಶಾಸಕರಾಗಿಯೂ ಶ್ರೀಸಾಮಾನ್ಯರಾಗಿ ಬದುಕಿದ್ದರು. ಸಾಹಿತ್ಯ ಮನುಷ್ಯನನ್ನು ಮಾನವೀಯಗೊಳಿಸುತ್ತದೆ ಎನ್ನುವುದಕ್ಕೆ ಗೋಪಾಲಗೌಡರ ವಿಧಾನಸಭೆಯ ಭಾಷಣದಲ್ಲಿ ಹೊರಹೊಮ್ಮುತ್ತಿದ್ದ ವಚನಗಳು, ಕವಿತೆಗಳೇ ಸಾಕ್ಷಿ ಎಂದರು.

Similar News