ಕಾಲೇಜು ಪ್ರಾಂಶುಪಾಲರನ್ನು 'ಜೈ ಶ್ರೀರಾಮ್‌' ಘೋಷಣೆ ಕೂಗುವಂತೆ ಬಲವಂತಪಡಿಸಿದ ಎಬಿವಿಪಿ ಕಾರ್ಯಕರ್ತರು

Update: 2022-12-04 18:14 GMT

ಅಹಮದಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿದ್ಯಾರ್ಥಿ ವಿಭಾಗವಾದ  ಎಬಿವಿಪಿಯ(ABVP) ಕಾರ್ಯಕರ್ತರು ಶನಿವಾರ ಕಾಲೇಜು ಪ್ರಾಂಶುಪಾಲರನ್ನು 'ಜೈ ಶ್ರೀರಾಮ್' ಎಂದು ಕೂಗುವಂತೆ ಒತ್ತಾಯಿಸಿದ್ದಾರೆ ಎಂದು timesofindia ವರದಿ ಮಾಡಿದೆ.

ಲಾ ಗಾರ್ಡನ್ ಬಳಿಯ ಜಿಎಲ್‌ಎಸ್ ಕ್ಯಾಂಪಸ್‌ನಲ್ಲಿರುವ ಜಿಎಲ್‌ಎಸ್ ವಿಶ್ವವಿದ್ಯಾನಿಲಯಕ್ಕೆ ಅಡಿಯಲ್ಲಿ ಬರುವ ಎಚ್‌ಎ ಕಾಲೇಜಿನಲ್ಲಿ ತರಗತಿ ನಡೆಯುತ್ತಿದ್ದಾಗ ಒಂದೆರಡು ದಿನಗಳ ಹಿಂದೆ ಕೆಲವು ವಿದ್ಯಾರ್ಥಿಗಳು 'ಜೈ ಶ್ರೀ ರಾಮ್' ಘೋಷಣೆ ಕೂಗಲು ಆರಂಭಿಸಿದ್ದರು ಎಂದು ಮೂಲಗಳು ತಿಳಿಸಿವೆ.  .

ತರಗತಿಗೆ ಅಡ್ಡಿಪಡಿಸಿದ್ದಕ್ಕಾಗಿ ಶಿಕ್ಷಕರು ಈ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಂಶುಪಾಲರಾದ ಸಂಜಯ್ ವಕೀಲ್‌ ರ ಬಳಿಗೆ ಕರೆದೊಯ್ದಿದ್ದರು. ಪ್ರಾಂಶುಪಾಲ ವಕೀಲ್ ಈ ವಿದ್ಯಾರ್ಥಿಗಳ ಕ್ರಮವನ್ನು ಗದರಿಸಿ, ಕ್ಷಮಾಪಣೆ ಪತ್ರ ಬರೆಯುವಂತೆ ಮಾಡಿದ್ದರು.

 "ಶಿಕ್ಷಕರು ಅವರನ್ನು ನನ್ನ ಬಳಿಗೂ ಕರೆತಂದಿದ್ದರು. ನಾನು ಕೂಡಾ ಅವರನ್ನು ಗದರಿಸಿದ್ದೇನೆ, ಇಂದು, ಎಬಿವಿಪಿಗೆ ಸೇರಿದ ಕೆಲವು ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿಗೆ ಬಂದು ಗಲಾಟೆ ಮಾಡಿದ್ದಾರೆ. ಅವರು 'ರಾಮ್ ಧುನ್' ಎಂದು ಜಪಿಸಲು ಪ್ರಾರಂಭಿಸಿದರು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಪ್ರಾಂಶುಪಾಲರು ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು ಎಂದು ಜಿಎಲ್‌ಎಸ್ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಭಾಲಚಂದ್ರ ಜೋಶಿ ಹೇಳಿದ್ದಾರೆ. 

ಯಾರೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನನಗಿಲ್ಲ ಎಂದು ಹೇಳಿ ಪ್ರಾಂಶುಪಾಲರು ಕ್ಷಮೆಯಾಚಿಸಿದರು ಎಂದು ಜೋಶಿ ತಿಳಿಸಿದ್ದಾರೆ.

ಎಬಿವಿಪಿ ಸದಸ್ಯರು ತಮ್ಮೊಂದಿಗೆ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗುವಂತೆ ಪ್ರಾಂಶುಪಾಲರನ್ನು ಒತ್ತಾಯಿಸಿದ್ದಾರೆ, ಮತ್ತು ಈ ಹಿಂದೆ ಛೀಮಾರಿ ಹಾಕಿದ್ದ ವಿದ್ಯಾರ್ಥಿಗಳ ಬಳಿ ಪ್ರಾಂಶುಪಾಲರು ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Similar News