ದ. ಆಫ್ರಿಕಾ: ಹಠಾತ್ ಪ್ರವಾಹದಲ್ಲಿ 9 ಮಂದಿ ಮೃತ್ಯು

Update: 2022-12-04 18:06 GMT

ಜೊಹಾನ್ಸ್‍ಬರ್ಗ್, ಡಿ.4:  ದಕ್ಷಿಣ ಆಫ್ರಿಕಾದ ಜೊಹಾನ್ಸ್‍ಬರ್ಗ್‍ನ ಜುಕ್‍ಸ್ಕೆಯಿ ನದಿಯ ನೀರು ದಿಢೀರನೆ ಉಕ್ಕೇರಿ ಹರಿದಾಗ ದಡದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನಿಷ್ಟ 9 ಮಂದಿ ಮೃತಪಟ್ಟಿದ್ದು ಇತರ 8 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಚರ್ಚ್‍ಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮವನ್ನು ನದಿ ದಡದಲ್ಲಿ ಹಮ್ಮಿಕೊಂಡಿದ್ದು ನೂರಾರು ಮಂದಿ ಪಾಲ್ಗೊಂಡಿದ್ದರು. ಆಗ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು ನದಿಯ ತೀರದಲ್ಲಿದ್ದವರು ಕೊಚ್ಚಿಹೋಗಿದ್ದಾರೆ. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಹಲವರನ್ನು ರಕ್ಷಿಸಲಾಗಿದೆ. ಆದರೆ, ಇದುವರೆಗೆ  9 ಮಂದಿ ಮೃತಪಟ್ಟಿರುವ ಮಾಹಿತಿಯಿದ್ದು 8 ಮಂದಿ ನಾಪತ್ತೆಯಾಗಿದ್ದಾರೆ. ನದಿ ದಂಡೆಯಲ್ಲಿ ಧಾರ್ಮಿಕ ಕಾರ್ಯಾಚರಣೆ ನಡೆಸದಂತೆ ಹಲವು ಬಾರಿ ಎಚ್ಚರಿಸಿದ್ದರೂ  ಜನತೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜೊಹಾನ್ಸ್‍ಬರ್ಗ್ ತುರ್ತುಸೇವಾ ವಿಭಾಗದ ವಕ್ತಾರ ರಾಬರ್ಟ್ ಮುಲಾಡ್ಝಿ ಹೇಳಿದ್ದಾರೆ. 

Similar News